ಗಾಜಿಯಾಬಾದ್: ಉತ್ತರ ಪ್ರದೇಶದ ಭಾರತ್ ಸಿಟಿಯಲ್ಲಿ ಒಂಬತ್ತನೇ ಮಹಡಿಯಿಂದ ಹಾರಿ ಪ್ರಾಣ ಕಳೆದುಕೊಂಡ ಮೂವರು ಅಪ್ರಾಪ್ತ ಸಹೋದರಿಯರ ಪ್ರಕರಣದಲ್ಲಿ ಈಗ ಹೊಸ ತಿರುವುಗಳು ಸಿಗುತ್ತಿವೆ. ಆತ್ಮಹತ್ಯೆಗೂ ಮುನ್ನ ಸಹೋದರಿಯರು 8 ಪುಟಗಳ ಸುದೀರ್ಘ ಡೆತ್ ನೋಟ್ ಬರೆದಿದ್ದಾರೆ ಎಂದು ತಿಳಿದುಬಂದಿದೆ.
ಡೈರಿಯಲ್ಲಿ ಏನಿದೆ..?
ಮೃತ ಸಹೋದರಿಯರಾದ ಪಾಖಿ (12), ಪ್ರಾಚಿ (14) ಮತ್ತು ವಿಶಿಕಾ (16) ತಮ್ಮ ಪಾಕೆಟ್ ಡೈರಿಯಲ್ಲಿ ʼಇಲ್ಲಿ ಬರೆದಿರುವ ಪ್ರತಿಯೊಂದು ಅಕ್ಷರವೂ ಸತ್ಯ, ದಯವಿಟ್ಟು ಇದನ್ನು ಪೂರ್ತಿ ಓದಿ ಎಂದು ಪೋಷಕರಲ್ಲಿ ಮನವಿ ಮಾಡಿದ್ದಾರೆ. ಕೊನೆಯಲ್ಲಿ ನನ್ನನ್ನು ಕ್ಷಮಿಸಿ ಅಪ್ಪಾ ಎಂದು ಬರೆದು ದೊಡ್ಡದಾದ ಅಳುವ ಎಮೋಜಿಯನ್ನು ಬಿಡಿಸಿದ್ದಾರೆ.
ಕೊರಿಯನ್ ಗೇಮ್‌ನ ಮಾಯಾಜಾಲ ಮತ್ತು ಹೊಸ ಹೆಸರುಗಳು
ತನಿಖೆಯ ಪ್ರಕಾರ, ಈ ಬಾಲಕಿಯರು ಕೊರಿಯನ್ ಮೂಲದ ಟಾಸ್ಕ್ ಆಧಾರಿತ ಆಟಕ್ಕೆ ಮರುಳಾಗಿದ್ದರು. ತಮಗಾಗಿ ಕೊರಿಯನ್ ಹೆಸರುಗಳನ್ನು ಇಟ್ಟುಕೊಂಡಿದ್ದರು. ಆಟದಲ್ಲಿ ನೀಡಲಾಗುತ್ತಿದ್ದ ಸವಾಲುಗಳನ್ನು (Tasks) ಪೂರ್ಣಗೊಳಿಸುವುದನ್ನೇ ತಮ್ಮ ಗುರಿಯಾಗಿಸಿಕೊಂಡಿದ್ದರು. ಮಧ್ಯದ ಸಹೋದರಿ ಪ್ರಾಚಿಉಳಿದಿಬ್ಬರಿಗೆ ಈ ಗೇಮ್‌ನ ಬಗ್ಗೆ ಸಲಹೆ ನೀಡುತ್ತಿದ್ದಳು ಎಂದು ತಿಳಿದುಬಂದಿದೆ.
ಶಾಲೆಯಿಂದ ದೂರ, ಮೊಬೈಲ್‌ಗೆ ಹತ್ತಿರ
ಕಳೆದ ಎರಡು ವರ್ಷಗಳಿಂದ ಈ ಬಾಲಕಿಯರು ಶಾಲೆಗೆ ಹೋಗುವುದನ್ನೇ ನಿಲ್ಲಿಸಿದ್ದರು. ಕಳಪೆ ಶೈಕ್ಷಣಿಕ ಸಾಧನೆ ಮತ್ತು ಕುಟುಂಬದ ಆರ್ಥಿಕ ಸಂಕಷ್ಟಗಳ ಕಾರಣದಿಂದ ಮನೆಯಲ್ಲೇ ಉಳಿದಿದ್ದ ಅವರು, ಇಡೀ ದಿನವನ್ನು ಮೊಬೈಲ್‌ನಲ್ಲೇ ಕಳೆಯುತ್ತಿದ್ದರು. ಪೋಷಕರು ಇತ್ತೀಚೆಗೆ ಫೋನ್ ಬಳಕೆಯ ಮೇಲೆ ನಿರ್ಬಂಧ ಹೇರಿದ್ದು ಅವರ ಆಕ್ರೋಶಕ್ಕೆ ಕಾರಣವಾಗಿತ್ತು. ಬುಧವಾರ ಮುಂಜಾನೆ 2 ಗಂಟೆಗೆ ರೂಮ್ ಲಾಕ್ ಮಾಡಿಕೊಂಡ ಸಹೋದರಿಯರು, ಕಿಟಕಿಯಿಂದ ಒಬ್ಬೊಬ್ಬರಾಗಿ 9ನೇ ಮಹಡಿಯಿಂದ ಕೆಳಕ್ಕೆ ಹಾರಿದ್ದಾರೆ.
ಪೊಲೀಸ್ ಉಪ ಆಯುಕ್ತ ನಿಮಿಷ್ ಪಾಟೀಲ್ ಅವರು ತಿಳಿಸಿದಂತೆ, ಈ ಆತ್ಮಹತ್ಯೆಯು ಆಟದಲ್ಲಿ ನೀಡಲಾದ ಯಾವುದಾದರೂ ಅಂತಿಮ ಟಾಸ್ಕ್‌ನ ಒಂದು ಭಾಗವೇ ಅಥವಾ ಪೋಷಕರ ಪೋನ್ ನೋಡಬೇಡಿ ಎಂದು ಹೇಳಿದಕ್ಕಾಗಿ ಆಕ್ರೋಶಕ್ಕೆ ಹೀಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಸೈಬರ್ ತಜ್ಞರು ಬಾಲಕಿಯರ ಫೋನ್‌ಗಳನ್ನು ಪರಿಶೀಲಿಸುತ್ತಿದ್ದು, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆಪ್ ಯಾವುದು ಎಂಬುದನ್ನು ಪತ್ತೆ ಹಚ್ಚುತ್ತಿದ್ದಾರೆ ಎಂದು ತಿಳಿಸಿದ್ದಾರೆ.
