ನವದೆಹಲಿ, ಫೆಬ್ರವರಿ 18: ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದ ಭಾರತದ AI ಇಂಪ್ಯಾಕ್ಟ್ ಶೃಂಗಸಭೆಯಲ್ಲಿ (AI Impact Summit) ಚೀನಾದಲ್ಲಿ ತಯಾರಿಸಲಾದ ರೋಬೋಟಿಕ್ ನಾಯಿಯನ್ನು ಭಾರತೀಯ ಆವಿಷ್ಕಾರವೆಂದು ಪ್ರದರ್ಶಿಸಿದ ಆರೋಪದ ಹಿನ್ನೆಲೆಯಲ್ಲಿ ಗಂಭೀರ ವಿವಾದ ಭುಗಿಲೆದ್ದಿದೆ. ಈ ಘಟನೆಗೆ ಸಂಬಂಧಿಸಿ ಗಾಲ್ಗೋಟಿಯಾಸ್ ವಿವಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದೆ.
ಶೃಂಗಸಭೆಯಲ್ಲಿ “ಒರಿಯನ್” ಎಂಬ ಹೆಸರಿನಲ್ಲಿ ಪ್ರದರ್ಶಿಸಲಾದ ರೋಬೋಡಾಗ್ ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯದ ಶ್ರೇಷ್ಠತಾ ಕೇಂದ್ರದ ಅಭಿವೃದ್ಧಿಯಾಗಿದೆ ಎಂದು ಪ್ರಾರಂಭದಲ್ಲಿ ಹೇಳಲಾಗಿತ್ತು. ಆದರೆ ನಂತರ ಅದು ಚೀನಾದ ಕಂಪನಿಯ ಉತ್ಪನ್ನವೆಂಬುದು ಬಹಿರಂಗವಾಯಿತು. ವಾಸ್ತವವಾಗಿ ಈ ರೋಬೋಟ್ “ಯುನಿಟ್ರೀ ಗೋ2” (Unitree Go2) ಮಾದರಿಯಾಗಿದ್ದು, ಇದನ್ನು ಚೀನಾದ ಯುನಿಟ್ರೀ ರೊಬೊಟಿಕ್ಸ್ ತಯಾರಿಸಿದೆ.
ಈ ವಿಷಯ ಬಹಿರಂಗವಾದ ತಕ್ಷಣವೇ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, ಶೃಂಗಸಭೆಯ ಆಯೋಜಕರು ಕೂಡ ತಕ್ಷಣ ಕ್ರಮ ಕೈಗೊಂಡರು. ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯದ ಮಳಿಗೆಯನ್ನು (ಸ್ಟಾಲ್) ಖಾಲಿ ಮಾಡಲು ಸೂಚಿಸಲಾಯಿತು. ಸರ್ಕಾರದ ವಲಯಗಳಿಂದಲೂ ಸ್ಪಷ್ಟ ಸಂದೇಶ ನೀಡಲಾಗಿದ್ದು, ಯಾವುದೇ ಸಂಸ್ಥೆ ತಮ್ಮದಲ್ಲದ ಉತ್ಪನ್ನವನ್ನು ಸ್ವಂತ ಆವಿಷ್ಕಾರವೆಂದು ಪ್ರದರ್ಶಿಸುವುದನ್ನು ಒಪ್ಪುವುದಿಲ್ಲ ಎಂದು ತಿಳಿಸಲಾಯಿತು.
ವಿವಾದಕ್ಕೆ ಕಾರಣವಾದದ್ದು ಡಿಡಿ ನ್ಯೂಸ್‌ಗೆ ನೀಡಿದ ಸಂದರ್ಶನ. ವಿಶ್ವವಿದ್ಯಾಲಯದ ಸಂವಹನ ಪ್ರಾಧ್ಯಾಪಕಿ ನೇಹಾ ಸಿಂಗ್ ಅವರು “ಒರಿಯನ್” ಎಂಬ ರೋಬೋಟಿಕ್ ನಾಯಿಯನ್ನು ತೋರಿಸಿ, ಇದು ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯದ ಶ್ರೇಷ್ಠತಾ ಕೇಂದ್ರದಲ್ಲಿ ಅಭಿವೃದ್ಧಿಪಡಿಸಲಾದ ಮಾದರಿಯಾಗಿದೆ ಎಂದು ಹೇಳಿದ್ದಾರೆ. ಆದರೆ ತಾಂತ್ರಿಕ ವಲಯದ ತಜ್ಞರು ಮತ್ತು ಸಾಮಾಜಿಕ ಜಾಲತಾಣ ಬಳಕೆದಾರರು ಅದು ಚೀನಾದ ಯುನಿಟ್ರೀ ಗೋ2 ಮಾದರಿಯೇ ಎಂದು ಗುರುತಿಸಿದರು. ನಂತರ ಈ ವಿವಾದ ಮತ್ತಷ್ಟು ತೀವ್ರಗೊಂಡಿತು.
ಈ ಕುರಿತು ಸ್ಪಷ್ಟನೆ ನೀಡಿದ ಗಾಲ್ಗೋಟಿಯಾಸ್ ವಿಶ್ವವಿದ್ಯಾಲಯ, “ಇತ್ತೀಚಿನ ಎಐ ಶೃಂಗಸಭೆಯಲ್ಲಿ ಉಂಟಾದ ಗೊಂದಲಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ. ಪೆವಿಲಿಯನ್ ನಿರ್ವಹಿಸುತ್ತಿದ್ದ ನಮ್ಮ ಪ್ರತಿನಿಧಿಗಳಲ್ಲಿ ಒಬ್ಬರಿಗೆ ಉತ್ಪನ್ನದ ತಾಂತ್ರಿಕ ಮೂಲದ ಬಗ್ಗೆ ಸಂಪೂರ್ಣ ಮಾಹಿತಿ ಇರಲಿಲ್ಲ. ಅವರಿಂದ ತಪ್ಪಾಗಿ ಮಾಹಿತಿ ನೀಡಲಾಗಿದೆ. ಸಂಘಟಕರ ಭಾವನೆಗಳನ್ನು ಗೌರವಿಸಿ ನಾವು ಮಳಿಗೆಯನ್ನು ಖಾಲಿ ಮಾಡಿದ್ದೇವೆ” ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಇದಲ್ಲದೆ, “ನಾವು ಈ ರೋಬೋಡಾಗ್ ಅನ್ನು ನಿರ್ಮಿಸಿಲ್ಲ ಅಥವಾ ಅದನ್ನು ನಮ್ಮದೇ ಉತ್ಪನ್ನವೆಂದು ಅಧಿಕೃತವಾಗಿ ಹೇಳಿಕೊಂಡಿಲ್ಲ. ಸಿಬ್ಬಂದಿಯ ಅಜ್ಞಾನದಿಂದ ತಪ್ಪು ಮಾಹಿತಿ ಹಂಚಿಕೆಯಾಗಿದೆ” ಎಂದು ವಿಶ್ವವಿದ್ಯಾಲಯದ ವಕ್ತಾರರು ಸ್ಪಷ್ಟಪಡಿಸಿದ್ದಾರೆ.
ಯುನಿಟ್ರೀ ಗೋ2 ಮಾದರಿಯ ರೋಬೋಟಿಕ್ ನಾಯಿ ಜಾಗತಿಕವಾಗಿ ಸಂಶೋಧನೆ, ಶಿಕ್ಷಣ ಹಾಗೂ ತಂತ್ರಜ್ಞಾನ ಪ್ರದರ್ಶನಗಳಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ. ಇದು ಆಧುನಿಕ ಕೃತಕ ಬುದ್ಧಿಮತ್ತೆ, ಚಲನಾ ನಿಯಂತ್ರಣ ಮತ್ತು ಸ್ವಯಂ ನಿಯಂತ್ರಿತ ತಂತ್ರಜ್ಞಾನಗಳನ್ನು ಒಳಗೊಂಡಿರುವ ಉನ್ನತ ಮಟ್ಟದ ಸಾಧನವಾಗಿದೆ. ವಿಶ್ವದ ಅನೇಕ ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಸಂಸ್ಥೆಗಳು ಇದನ್ನು ಪ್ರಯೋಗಾತ್ಮಕ ಉದ್ದೇಶಗಳಿಗೆ ಬಳಸುತ್ತಿವೆ.