ಕೇರಳದ ಮಾಜಿ ಸಿಎಂ ಪಿಣರಾಯಿ ವಿಜಯನ್ ಮನೆ ಸೇರಿ 10 ಕಡೆ ಇಡಿ ದಾಳಿ

Untitled design 2026 05 27T093920.842

ತಿರುವನಂತಪುರಂ, ಮೇ 27: ಕೇರಳ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನಿವಾಸ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ 10ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಕೊಚ್ಚಿನ್ ಮಿನರಲ್ಸ್ ಆಂಡ್ ರುಟೈಲ್ ಲಿಮಿಟೆಡ್ (CMRL) ಸಂಸ್ಥೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಈ ಶೋಧ ಕಾರ್ಯ ನಡೆದಿದೆ.

ಬುಧವಾರ ಬೆಳ್ಳಂಬೆಳಗ್ಗೆ ಆರಂಭವಾದ ಈ ದಾಳಿಗಳು ತಿರುವನಂತಪುರಂ, ಕಣ್ಣೂರು ಸೇರಿದಂತೆ ಹಲವು ಪ್ರಮುಖ ಪ್ರದೇಶಗಳಲ್ಲಿ ನಡೆಯುತ್ತಿವೆ. ಪಿಣರಾಯಿ ವಿಜಯನ್ ಅವರ ತಿರುವನಂತಪುರಂನ ಬೇಕರಿ ಜಂಕ್ಷನ್ ಬಳಿ ಇರುವ ಬಾಡಿಗೆ ಮನೆ ಹಾಗೂ ಕಣ್ಣೂರಿನಲ್ಲಿರುವ ಕುಟುಂಬದ ನಿವಾಸಗಳಲ್ಲೂ ಇಡಿ ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಕರಣವು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ದಾಖಲಾಗಿದ್ದು, ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಪ್ರಕರಣದ ಕೇಂದ್ರಬಿಂದುವಾಗಿರುವುದು ಮಾಜಿ ಸಿಎಂ ಪುತ್ರಿ ಟಿ. ವೀಣಾ ಅವರ ಐಟಿ ಕಂಪನಿ ‘ಎಕ್ಸಾಲಾಜಿಕ್ ಸೊಲ್ಯೂಷನ್ಸ್’. ಆರೋಪಗಳ ಪ್ರಕಾರ, ಖಾಸಗಿ ಖನಿಜ ಸಂಸ್ಥೆಯಾದ CMRL ಕಂಪನಿಯು 2017-18ರಿಂದ 2019-20ರ ಅವಧಿಯಲ್ಲಿ ಎಕ್ಸಾಲಾಜಿಕ್ ಸೊಲ್ಯೂಷನ್ಸ್‌ಗೆ ಸುಮಾರು ₹1.72 ಕೋಟಿ ಹಣ ಪಾವತಿಸಿದೆ. ಆದರೆ, ಈ ಹಣಕ್ಕೆ ಪ್ರತಿಯಾಗಿ ಯಾವುದೇ ಸೇವೆ ನೀಡಲಾಗಿಲ್ಲ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಆದಾಯ ತೆರಿಗೆ ಇಲಾಖೆಯ ಮಧ್ಯಂತರ ಮಂಡಳಿ ಈ ಹಣಕಾಸು ವ್ಯವಹಾರಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರಿಂದ ಪ್ರಕರಣ ಬೆಳಕಿಗೆ ಬಂದಿತ್ತು. ನಂತರ ಇಡಿ ಅಧಿಕಾರಿಗಳು 2024ರಲ್ಲಿ ಪಿಎಂಎಲ್‌ಎ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಇದೀಗ ತನಿಖೆ ತೀವ್ರಗೊಂಡಿದ್ದು, ಪಿಣರಾಯಿ ವಿಜಯನ್ ಕುಟುಂಬದ ಆಪ್ತ ವಲಯಗಳ ಮೇಲೂ ಕಣ್ಣಿಟ್ಟಿರುವ ಸಾಧ್ಯತೆ ಇದೆ.

ಈ ಪ್ರಕರಣದಲ್ಲಿ ಇಡಿ ನೀಡಿದ್ದ ಸಮನ್ಸ್ ಹಾಗೂ ತನಿಖಾ ಕ್ರಮಗಳನ್ನು ಪ್ರಶ್ನಿಸಿ CMRL ಸಂಸ್ಥೆ ಕೇರಳ ಹೈಕೋರ್ಟ್ ಮೆಟ್ಟಿಲೇರಿತ್ತು. ತನಿಖಾ ಪ್ರಕ್ರಿಯೆಗಳನ್ನು ರದ್ದುಪಡಿಸುವಂತೆ ಸಂಸ್ಥೆ ಮನವಿ ಮಾಡಿದ್ದರೂ, ಕೇರಳ ಹೈಕೋರ್ಟ್ ಮಂಗಳವಾರ ಆ ಅರ್ಜಿಯನ್ನು ವಜಾಗೊಳಿಸಿತು. ಹೀಗಾಗಿ ಇಡಿ ತನಿಖೆಗೆ ನ್ಯಾಯಾಲಯದಿಂದ ಸ್ಪಷ್ಟ ಅನುಮತಿ ದೊರೆತಂತಾಯಿತು.

ಹೈಕೋರ್ಟ್ ತೀರ್ಪು ಹೊರಬಿದ್ದ ಕೇವಲ 24 ಗಂಟೆಗಳ ಒಳಗೆ ಇಡಿ ದಾಳಿ ನಡೆಸಿರುವುದು ಕೇರಳ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಎಡಪಂಥೀಯ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ತೀವ್ರ ವಾಗ್ದಾಳಿ ನಡೆಸಿದ್ದು, ಪ್ರಕರಣದ ಸಂಪೂರ್ಣ ಸತ್ಯ ಬಹಿರಂಗವಾಗಬೇಕು ಎಂದು ಆಗ್ರಹಿಸಿವೆ.

Exit mobile version