ಛತ್ತೀಸ್‌ಗಢದ ರಾಯ್‌ಪುರದಲ್ಲಿ ಒಂದು ದೊಡ್ಡ ವಿವಾದ ಸೃಷ್ಟಿಯಾಗಿದೆ. ಯುವ ಮಹಿಳಾ ಪೊಲೀಸ್ ಅಧಿಕಾರಿ, ಡೆಪ್ಯೂಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (DSP) ಕಲ್ಪನಾ ವರ್ಮಾ ಅವರ ಮೇಲೆ ರಾಯ್‌ಪುರದ ಪ್ರಮುಖ ಹೋಟೆಲ್ ಉದ್ಯಮಿ ದೀಪಕ್ ಟಂಡನ್ ಗಂಭೀರ ಆರೋಪ ಮಾಡಿದ್ದಾರೆ. ಕಲ್ಪನಾ ವರ್ಮಾ ನಕ್ಸಲ್ ಪೀಡಿತ ದಂತೇವಾಡದಲ್ಲಿ ಡಿಎಸ್‌ಪಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಈಗ ಅವರ ಮೇಲೆ ಲವ್ ಟ್ರ್ಯಾಪ್ ಮಾಡಿ ಸುಮಾರು 2 ಕೋಟಿ ರೂಪಾಯಿ ಹಣ, ಐಷಾರಾಮಿ ಕಾರು, ವಜ್ರದ ಉಂಗುರ ಸೇರಿದಂತೆ ಲಕ್ಷಾಂತರ ಮೌಲ್ಯದ ಆಭರಣಗಳನ್ನು ವಂಚಿಸಿದ್ದಾರೆ ಎಂಬ ಆರೋಪ ಬಂದಿದೆ.
ದೀಪಕ್ ಟಂಡನ್ ಮತ್ತು ಅವರ ಪತ್ನಿ ಬರ್ಖಾ ಟಂಡನ್ ಖಮರ್ದಿಹ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 2021ರಲ್ಲಿ ಸ್ನೇಹಿತನ ಮೂಲಕ ಕಲ್ಪನಾ ವರ್ಮಾ ಅವರನ್ನು ಭೇಟಿಯಾದ ನಂತರ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ಕ್ರಮೇಣ ಇದು ಆತ್ಮೀಯ ಸಂಬಂಧವಾಗಿ ಬದಲಾಯಿತು. ಮದುವೆಯ ಭರವಸೆ ನೀಡಿ ಕಲ್ಪನಾ ಅವರು ದೀಪಕ್ ಅವರಿಂದ ನಾನಾ ರೀತಿಯ ಕಾರಣ ಹೇಳಿ ಹಣ ಮತ್ತು ಉಡುಗೊರೆಗಳನ್ನು ಪಡೆಯುತ್ತಿದ್ದರು ಎಂದು ಟಂಡನ್ ಆರೋಪಿಸಿದ್ದಾರೆ. ನಾಲ್ಕು ವರ್ಷಗಳಲ್ಲಿ ಸುಮಾರು 2 ಕೋಟಿ ರೂಪಾಯಿ ನಗದು, 12 ಲಕ್ಷ ಮೌಲ್ಯದ ವಜ್ರದ ಉಂಗುರ, 5 ಲಕ್ಷದ ಚಿನ್ನದ ಆಭರಣ, 1 ಲಕ್ಷದ ಬಳೆ ಮತ್ತು ಕಾರು ಸೇರಿದಂತೆ ಒಂದು ಹೋಟೆಲ್‌ನ ಮಾಲೀಕತ್ವವನ್ನೂ ಕಲ್ಪನಾ ಅವರ ಸಹೋದರನ ಹೆಸರಿಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಕಲ್ಪನಾ ಅವರು ತಮ್ಮ ಪತ್ನಿಗೆ ಡಿವೋರ್ಸ್ ನೀಡುವಂತೆ ಒತ್ತಡ ಹೇರಿದರು. ಹಣ ವಾಪಸ್ ಕೇಳಿದಾಗ ಪೊಲೀಸ್ ಅಧಿಕಾರದ ದುರುಪಯೋಗ ಮಾಡಿ ಬೆದರಿಕೆ ಹಾಕಿದರು ಎಂದು ದೀಪಕ್ ಟಂಡನ್ ಹೇಳಿಕೊಂಡಿದ್ದಾರೆ. ಈ ಆರೋಪಗಳನ್ನು ಸಾಬೀತುಪಡಿಸಲು ವಾಟ್ಸಾಪ್ ಚಾಟ್‌ಗಳು, ಸಿಸಿಟಿವಿ ದೃಶ್ಯಗಳು ಮತ್ತು ಇತರ ಡಿಜಿಟಲ್ ಸಾಕ್ಷ್ಯಗಳನ್ನು ಪೊಲೀಸರಿಗೆ ಸಲ್ಲಿಸಲಾಗಿದೆ. ಈ ಚಾಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ದೊಡ್ಡ ಚರ್ಚೆಗೆ ಕಾರಣವಾಗಿವೆ.
ಆದರೆ ಕಲ್ಪನಾ ವರ್ಮಾ ಎಲ್ಲ ಆರೋಪಗಳನ್ನೂ ತಳ್ಳಿಹಾಕಿದ್ದಾರೆ. ಇದು ತಮ್ಮ ತಂದೆ ಹೇಮಂತ್ ವರ್ಮಾ ಮತ್ತು ದೀಪಕ್ ಟಂಡನ್ ನಡುವಿನ ಹಳೆಯ ಹಣಕಾಸು ವ್ಯವಹಾರದ ವಿವಾದದಿಂದ ಶುರುವಾಗಿದ್ದು ಎಂದು ಹೇಳಿದ್ದಾರೆ. ಟಂಡನ್ ಅವರ ಪತ್ನಿ ಬರ್ಖಾ ನೀಡಿದ ಚೆಕ್ ಬೌನ್ಸ್ ಆಗಿ ಕೋರ್ಟ್ ಕೇಸ್ ನಡೆಯುತ್ತಿದೆ. ಈ ಕೇಸ್‌ನಿಂದ ತಪ್ಪಿಸಿಕೊಳ್ಳಲು ತಮ್ಮ ಹೆಸರನ್ನು ಎಳೆದೊಯ್ಯಲಾಗುತ್ತಿದೆ ಎಂದು ಕಲ್ಪನಾ ಆರೋಪಿಸಿದ್ದಾರೆ. ವೈರಲ್ ಚಾಟ್‌ಗಳು ಫೇಕ್ ಎಂದೂ, ತಮ್ಮ ಸೋಶಿಯಲ್ ಮೀಡಿಯಾ ಫೋಟೋಗಳನ್ನು ಬಳಸಿ ತಯಾರಿಸಲಾಗಿದೆ ಎಂದೂ ಹೇಳಿದ್ದಾರೆ.
