ಬೆಂಗಳೂರು: ಬಿಡದಿ ಗ್ರೇಟರ್ ಬೆಂಗಳೂರು ಟೌನ್ಶಿಪ್ ಯೋಜನೆಯನ್ನು ವಿರೋಧಿಸಿ ಜೆಡಿಎಸ್ ಹಮ್ಮಿಕೊಂಡಿರುವ ಪಾದಯಾತ್ರೆಗೆ ಕಾಂಗ್ರೆಸ್ ಪಕ್ಷವು ತಿರುಗೇಟು ನೀಡಿದೆ. ಬೆಂಗಳೂರು ಕೇಂದ್ರ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಶನಿವಾರ ಜೆಡಿಎಸ್ ಕೇಂದ್ರ ಕಚೇರಿಯಾದ ಜೆಪಿ ಭವನದ ಗೋಡೆಗಳು ಮತ್ತು ಗೇಟ್‌ಗಳ ಮೇಲೆ ವಿವಾದಾತ್ಮಕ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ.
ಈ ಪೋಸ್ಟರ್ ಅಭಿಯಾನದ ಮುಖ್ಯ ಆಕರ್ಷಣೆಯೆಂದರೆ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರ ಭಾವಚಿತ್ರವನ್ನು ಕೋಳಿಯ ಚಿತ್ರದೊಂದಿಗೆ ಜೋಡಿಸಿ, “ಹೊಟ್ಟೆ ಕಿಚ್ಚಿನ ಸುಮಾರ್ ಕೋಳಿ” ಎಂಬ ಹಾಸ್ಯಾತ್ಮಕ ಬರಹವನ್ನು ಸೇರಿಸಲಾಗಿದೆ. ಈ ಮೂಲಕ, ‘ಒಕ್ಕಲಿಗ ಸಮುದಾಯದ ಯಾರೇ ಅಧಿಕಾರಕ್ಕೆ ಬಂದರೂ ಕುಮಾರಸ್ವಾಮಿ ಅವರಿಗೆ ಹೊಟ್ಟೆಕಿಚ್ಚು’ ಎಂಬ ಅರ್ಥದ ಸಂದೇಶವನ್ನು ಕಾಂಗ್ರೆಸ್ ಯುವಕರು ನೀಡಲು ಯತ್ನಿಸಿದ್ದಾರೆ. ಪೋಸ್ಟರ್ಗಳಲ್ಲಿ ಕುಮಾರಸ್ವಾಮಿ ಅವರ ಮುಖದ ಜೊತೆಗೆ ಕೋಳಿಯ ದೇಹವನ್ನು ಸಂಯೋಜಿಸಿರುವುದು ಲೇವಡಿಯ ಸ್ವರೂಪವನ್ನು ಹೊಂದಿದ್ದು, ಇದು ತಕ್ಷಣವೇ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಬಿಡದಿ ಟೌನ್ಶಿಪ್ ವಿಚಾರವಾಗಿ ಜೆಡಿಎಸ್ ಸರ್ಕಾರದ ವಿರುದ್ಧ ಹೂಡಿರುವ ಪ್ರತಿಭಟನೆಯನ್ನು ಲೇವಡಿ ಮಾಡುವ ಉದ್ದೇಶದಿಂದ ಈ ಪೋಸ್ಟರ್ ಅಭಿಯಾನ ನಡೆಸಲಾಗಿದೆ. ಕೆಲವೇ ದಿನಗಳ ಹಿಂದೆ ನಿಖಿಲ್ ಕುಮಾರಸ್ವಾಮಿ ನೇತೃತ್ವದ ಪಾದಯಾತ್ರೆಯು ಪೊಲೀಸ್ ತಡೆಯಿಂದಾಗಿ ಎರಡನೇ ದಿನದಲ್ಲೇ ಮುಕ್ತಾಯಗೊಂಡಿತ್ತು. ಈ ಹಿನ್ನೆಲೆ, ಕಾಂಗ್ರೆಸ್ ಕಾರ್ಯಕರ್ತರು ಜೆಡಿಎಸ್ನ ಪ್ರತಿಭಟನಾ ಕಾರ್ಯಸೂಚಿಯನ್ನು ಅಣಕಿಸಿ, “ಹೊಟ್ಟೆಕಿಚ್ಚು ಅಷ್ಟೇನೂ ಹೊಸದಲ್ಲ, ಇದು ಸುಮಾರ್ ಕೋಳಿಯ ಲಕ್ಷಣ” ಎಂಬ ರೀತಿಯಲ್ಲಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ಜೆಪಿ ಭವನದ ಆವರಣದ ಹೊರಗೋಡೆ ಮತ್ತು ಪ್ರವೇಶ ದ್ವಾರದ ಗೇಟ್ಗಳ ಮೇಲೆ ಈ ಪೋಸ್ಟರ್ಗಳು ಅಂಟಿಸಲಾಗಿದ್ದು, ಒಂದೆಡೆ, ಜೆಡಿಎಸ್ ಪಾದಯಾತ್ರೆಯ ಭಾಗವಾಗಿ ಬಿಡದಿ ಯೋಜನೆಯ ವಿರುದ್ಧ ಸಮರೋಪ ಸಾರುತ್ತಿದ್ದರೆ, ಮತ್ತೊಂದೆಡೆ, ಕಾಂಗ್ರೆಸ್ ಯುವ ಘಟಕವು ಹಾಸ್ಯ ಮತ್ತು ವ್ಯಂಗ್ಯದ ಮೂಲಕ ಪರೋಕ್ಷವಾಗಿ ಪ್ರತಿದಾಳಿ ಎಸಗಿದೆ.
