ಬೆಂಗಳೂರು: ಮದುವೆಯಾದ ಕೆಲವೇ ದಿನಗಳಲ್ಲಿ ಪತಿಯಿಂದ ದೈಹಿಕ ಹಾಗೂ ಮಾನಸಿಕ ಕಿರುಕುಳಕ್ಕೆ ಒಳಗಾಗಿ, ಬಳಿಕ ತಲಾಖ್ ಹೇಳಿ ಮನೆಯಿಂದ ಹೊರಹಾಕಲಾಗಿದೆ ಎಂದು ಯುವತಿಯೊಬ್ಬರು ಆರೋಪಿಸಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ವರದಕ್ಷಿಣೆ ಕಿರುಕುಳ, ಹಲ್ಲೆ ಹಾಗೂ ಬೆದರಿಕೆ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಸಂತ್ರಸ್ತೆ ಕುಟುಂಬ ಮಾಡಿದೆ. ಈ ಪ್ರಕರಣದ ಹಿಂದೆ ಸಚಿವ ಜಮೀರ್ ಅಹಮದ್ ಅವರ ಆಪ್ತ ಸಿಬ್ಬಂದಿಯ ಪ್ರಭಾವವೂ ಇದೆ ಎಂದು ಕುಟುಂಬ ಆರೋಪಿಸಿದ್ದು, ಈ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿದೆ.
ಸಂತ್ರಸ್ತೆ ಕುಟುಂಬದ ಆರೋಪದ ಪ್ರಕಾರ, ಮದುವೆಯಾದ ಮೊದಲ ದಿನವೇ ಪತಿ ಶೇಕ್ ಉಪ್ರಾನ್, “ನೀನು ನನಗೆ ಇಷ್ಟವಿಲ್ಲ” ಎಂದು ಹೇಳಿದ್ದ ಎನ್ನಲಾಗಿದೆ. ಬಳಿಕ ಅತ್ತೆ-ಮಾವಂದಿರಿಗೆ ಮಸಾಜ್ ಮಾಡುವಂತೆ ಪತ್ನಿಗೆ ಒತ್ತಡ ಹೇರಲಾಗುತ್ತಿತ್ತು ಎಂಬ ಆರೋಪವೂ ಕೇಳಿಬಂದಿದೆ. ಮದುವೆಯಾಗಿ ಕೆಲವೇ ದಿನಗಳಲ್ಲಿ ಪತ್ನಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಲಾಗುತ್ತಿತ್ತು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಪತಿಯು ಮತ್ತೊಬ್ಬ ಮಹಿಳೆಯೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ತಿಳಿದ ಬಳಿಕ ಮನೆಯಲ್ಲಿ ಗಲಾಟೆ ನಡೆದಿದ್ದು, ಈ ಸಂದರ್ಭದಲ್ಲಿ ಪತ್ನಿಯ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಗಂಭೀರ ಆರೋಪವಿದೆ. ಅಷ್ಟೇ ಅಲ್ಲದೆ, ಕಾಲಿಗೆ ಬಿಸಿನೀರು ಸುರಿದು ಗಾಯಗೊಳಿಸಲಾಗಿದೆ ಎಂದು ಸಂತ್ರಸ್ತೆ ಕುಟುಂಬ ಹೇಳಿಕೊಂಡಿದೆ. ನಂತರ ಮನೆಯಲ್ಲಿಯೇ ತಲಾಖ್ ಎಂದು ಹೇಳಿ ಪತ್ನಿಯನ್ನು ಹೊರಹಾಕಲಾಗಿದೆ ಎಂದು ಆರೋಪಿಸಲಾಗಿದೆ.
ಈ ಪ್ರಕರಣದಲ್ಲಿ ಸಚಿವ ಜಮೀರ್ ಅಹಮದ್ ಅವರ ಪಿಎ ಮಹ್ಮದ್ ಅಯೂಬ್ ಪಾಷಾ ಅವರ ಹೆಸರನ್ನೂ ಸಂತ್ರಸ್ತೆ ಕುಟುಂಬ ಉಲ್ಲೇಖಿಸಿದೆ. ಅಯೂಬ್ ಪಾಷಾ ಅವರ ಅಣ್ಣನ ಮಗ ಶೇಕ್ ಉಪ್ರಾನ್ ಅವರೊಂದಿಗೆ ಯುವತಿಯ ವಿವಾಹವಾಗಿತ್ತು ಎನ್ನಲಾಗಿದೆ. ಮಗಳ ಮೇಲಿನ ಹಿಂಸೆ ಕುರಿತು ದೂರು ನೀಡಲು ಜಮೀರ್ ಅಹಮದ್ ಅವರ ಕಚೇರಿ ಹಾಗೂ ಮನೆಗೆ ತೆರಳಿದರೂ ಸೂಕ್ತ ಸ್ಪಂದನೆ ದೊರೆಯಲಿಲ್ಲ ಎಂದು ಕುಟುಂಬ ಆರೋಪಿಸಿದೆ. ಅಷ್ಟೇ ಅಲ್ಲದೆ, ಪಿಎ ಕಡೆಯಿಂದ ಜೀವ ಬೆದರಿಕೆ ಕರೆಗಳು ಬಂದಿವೆ ಎಂಬ ಆರೋಪವನ್ನೂ ಕುಟುಂಬ ಮಾಡಿದೆ.
ನ್ಯಾಯಕ್ಕಾಗಿ ಸೌತ್ ಈಸ್ಟ್ ಮಹಿಳಾ ಪೊಲೀಸ್ ಠಾಣೆಗೆ ತೆರಳಿದಾಗಲೂ ಕುಟುಂಬಕ್ಕೆ ಮತ್ತೊಂದು ಸಂಕಷ್ಟ ಎದುರಾಯಿತು ಎಂಬ ಆರೋಪ ಕೇಳಿಬಂದಿದೆ. ಎಫ್‌ಐಆರ್ ದಾಖಲಿಸಲು ಇನ್ಸ್‌ಪೆಕ್ಟರ್ ನಂಜೇಗೌಡ ಅವರು 3 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದರು ಎಂದು ಸಂತ್ರಸ್ತೆ ಕುಟುಂಬ ಆರೋಪಿಸಿದೆ. ಹಣದ ವ್ಯವಹಾರಕ್ಕಾಗಿ ಕಾನ್‌ಸ್ಟೇಬಲ್ ವಾಸಿಂ ಅವರನ್ನು ಕಳುಹಿಸಲಾಗಿತ್ತು ಎಂದೂ ಕುಟುಂಬ ಹೇಳಿದೆ.
ಮಗಳಿಗೆ ನ್ಯಾಯ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಈಗಾಗಲೇ 1.2 ಲಕ್ಷ ರೂಪಾಯಿ ಹಣ ನೀಡಿದ್ದೇವೆ ಎಂದು ಸಂತ್ರಸ್ತೆಯ ತಂದೆ ಆರೋಪಿಸಿದ್ದಾರೆ. ಹಣವನ್ನು ಆನ್‌ಲೈನ್ ಮೂಲಕ ನೀಡದೆ ನಗದು ರೂಪದಲ್ಲೇ ನೀಡುವಂತೆ ಸೂಚಿಸಲಾಗಿತ್ತು ಎಂಬ ಆರೋಪವೂ ಕೇಳಿಬಂದಿದೆ.
ಮಗಳ ಮದುವೆಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದು, ಚಿನ್ನಾಭರಣ, ನಗದು ಹಾಗೂ ಕಾರನ್ನು ವರದಕ್ಷಿಣೆಯಾಗಿ ನೀಡಿದ್ದರೂ ಇದೀಗ ಮಗಳ ಬದುಕು ಬೀದಿಗೆ ಬಂದಿದೆ ಎಂದು ಸಂತ್ರಸ್ತೆಯ ತಂದೆ ಕಣ್ಣೀರಿಟ್ಟಿದ್ದಾರೆ. ನ್ಯಾಯಕ್ಕಾಗಿ ವಿವಿಧ ಕಚೇರಿಗಳು ಮತ್ತು ಪೊಲೀಸ್ ಠಾಣೆಗಳ ಮೆಟ್ಟಿಲೇರುತ್ತಿರುವ ಕುಟುಂಬ, ಪ್ರಕರಣದಲ್ಲಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
