ಅಬುದಾಬಿ ಏರ್‌ಪೋರ್ಟ್‌ನಲ್ಲಿ ಸಿಲುಕಿಕೊಂಡ ಡ್ರೋನ್ ಪ್ರತಾಪ್

ಡ್ರೋನ್ ಪ್ರತಾಪ್

ಇಸ್ರೇಲ್-ಇರಾನ್ ಸಂಘರ್ಷದ ಭಯದಿಂದಾಗಿ ಮಧ್ಯಪ್ರಾಚ್ಯ ದೇಶಗಳಿಗೆ ಹೋಗುವ ಮತ್ತು ಅಲ್ಲಿಂದ ಭಾರತಕ್ಕೆ ಬರುವ ಹಲವು ಅಂತರಾಷ್ಟ್ರೀಯ ವಿಮಾನಗಳನ್ನು ರದ್ದುಪಡಿಸಲಾಗಿದೆ. ಇದರಿಂದ ಸಾವಿರಾರು ಭಾರತೀಯರು ವಿಮಾನ ನಿಲ್ದಾಣಗಳಲ್ಲಿಯೇ ಸಿಲುಕಿಕೊಂಡಿದ್ದಾರೆ. ಮಾಜಿ ಬಿಗ್ ಬಾಸ್ ಸ್ಪರ್ಧಿ ಮತ್ತು ಸೋಷಿಯಲ್ ಮೀಡಿಯಾ ಪ್ರಭಾವಿ ಡ್ರೋನ್ ಪ್ರತಾಪ್ ಸಹ ಅಬುದಾಬಿ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದು, ಸ್ಥಳದಿಂದಲೇ ವಿಡಿಯೋ ಮಾಡಿ ತಮ್ಮ ಆತಂಕವನ್ನು ಹಂಚಿಕೊಂಡಿದ್ದಾರೆ.

ಡ್ರೋನ್ ಪ್ರತಾಪ್ ವಿಡಿಯೋದಲ್ಲಿ ಹೇಳಿದ್ದೇನು?

ಡ್ರೋನ್ ಪ್ರತಾಪ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, “ನಾನು ಇಂದು ರಾತ್ರಿ ಬೆಂಗಳೂರಿಗೆ ವಾಪಸ್ ಬರಬೇಕಿತ್ತು. ಟಿಕೆಟ್ ಸಹ ಬುಕ್ ಮಾಡಿದ್ದೆ. ಆದರೆ ಯುದ್ಧ ಭೀತಿಯಿಂದಾಗಿ ಭಾರತಕ್ಕೆ ಬರುವ ಎಲ್ಲ ವಿಮಾನಗಳನ್ನು ರದ್ದು ಮಾಡಲಾಗಿದೆ. ಮುಂದಿನ 12 ಗಂಟೆಗಳ ಕಾಲ ಯಾವುದೇ ವಿಮಾನ ಸೇವೆ ಇಲ್ಲ ಎಂದು ಅನೌನ್ಸ್ ಮಾಡುತ್ತಿದ್ದಾರೆ. 12 ಗಂಟೆಗಳ ನಂತರ ಹೊಸ ಅಪ್‌ಡೇಟ್ ಕೊಡುತ್ತಾರಂತೆ” ಎಂದು ವಿವರಿಸಿದ್ದಾರೆ.

ಅವರು ವಿಡಿಯೋದಲ್ಲಿ ವಿಮಾನ ನಿಲ್ದಾಣದ ಡಿಪಾರ್ಚರ್ ಬೋರ್ಡ್‌ನಲ್ಲಿ ದೊಡ್ಡ ಪಟ್ಟಿಯಲ್ಲಿ ಕ್ಯಾನ್ಸಲ್ ಆಗಿರುವ ವಿಮಾನಗಳನ್ನು ತೋರಿಸಿದ್ದಾರೆ. “ಇಲ್ಲಿ ಸಾವಿರಾರು ಜನರು ಸಿಲುಕಿಕೊಂಡಿದ್ದಾರೆ. ನಾವು ಏನು ಮಾಡೋಣ ಅಂತ ಗೊತ್ತಿಲ್ಲ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.


ಯಾಕೆ ಎಲ್ಲ ವಿಮಾನಗಳು ರದ್ದು?

ಇಸ್ರೇಲ್-ಇರಾನ್ ಸಂಘರ್ಷದ ಭಯದಿಂದಾಗಿ ಗಲ್ಫ್ ದೇಶಗಳ (ಯುಎಇ, ಸೌದಿ ಅರೇಬಿಯಾ, ಕತಾರ್, ಬಹ್ರೈನ್ ಇತ್ಯಾದಿ) ವಾಯುಪ್ರದೇಶದಲ್ಲಿ ತೀವ್ರ ನಿರ್ಬಂಧಗಳು ಜಾರಿಯಾಗಿವೆ. ಅಬುದಾಬಿ, ದುಬೈ, ದೋಹಾ, ರಿಯಾದ್ ಸೇರಿದಂತೆ ಹಲವು ವಿಮಾನ ನಿಲ್ದಾಣಗಳಿಂದ ಭಾರತಕ್ಕೆ ಬರುವ ಫ್ಲೈಟ್‌ಗಳನ್ನು ರದ್ದುಪಡಿಸಲಾಗಿದೆ. ಇದರಿಂದ ದುಬೈ, ಅಬುದಾಬಿ, ಶಾರ್ಜಾ, ರಾಸ್ ಅಲ್ ಖೈಮಾ ಮುಂತಾದ ಸ್ಥಳಗಳಲ್ಲಿ ಕೆಲಸ ಮಾಡುತ್ತಿದ್ದ ಅಥವಾ ಪ್ರವಾಸಕ್ಕೆ ಹೋಗಿದ್ದ ಸಾವಿರಾರು ಭಾರತೀಯರು ವಿಮಾನ ನಿಲ್ದಾಣಗಳಲ್ಲಿಯೇ ಕಾಯಬೇಕಾಗಿ ಬಂದಿದೆ.

ಡ್ರೋನ್ ಪ್ರತಾಪ್ ಅಬುದಾಬಿಯಲ್ಲಿ ಏನು ಮಾಡುತ್ತಿದ್ದರು?

ಕಳೆದ ಜನವರಿಯಲ್ಲಿ ಡ್ರೋನ್ ಪ್ರತಾಪ್ ತಮ್ಮ ಡ್ರೋನಾರ್ಕ್ ಕಂಪನಿಯನ್ನು ದುಬೈನಲ್ಲಿ ನೋಂದಣಿ ಮಾಡಿಸಿದ್ದಾಗಿ ಘೋಷಿಸಿದ್ದರು. ಇತ್ತೀಚೆಗೆ ದುಬೈಗೆ ಹೋಗಿದ್ದ ಅವರು ಅಲ್ಲಿನ ಬೆಂಬಲಿಗರನ್ನು ಭೇಟಿಯಾಗಿ ಉಡುಗೊರೆ ನೀಡಿದ್ದರು. ಹೈಟೆಕ್ ಹಣ್ಣು ಕೃಷಿ ಫಾರ್ಮ್‌ಗೆ ಭೇಟಿ ನೀಡಿ ವ್ಲಾಗ್ ಮಾಡಿದ್ದರು. ಕನ್ನಡಿಗರ ಹೋಟೆಲ್‌ಗೆ ಭೇಟಿ ನೀಡಿ ಮುದ್ದೆ ಮಾಡಿ ತಿಂದು ವಿಡಿಯೋ ಮಾಡಿದ್ದರು. ಆದರೆ ಈಗ ವಾಪಸ್ ಬೆಂಗಳೂರಿಗೆ ಬರುವ ಸಮಯದಲ್ಲಿ ವಿಮಾನ ರದ್ದಾಗಿ ಅಬುದಾಬಿ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ.

ವಿಮಾನಯಾನ ಸಂಸ್ಥೆಗಳು ಮುಂದಿನ 12 ಗಂಟೆಗಳ ಕಾಲ ಯಾವುದೇ ಸೇವೆ ಇಲ್ಲ ಎಂದು ಘೋಷಿಸಿವೆ. ಹೊಸ ಅಪ್‌ಡೇಟ್‌ಗಾಗಿ ಕಾಯಬೇಕಾಗಿದೆ. ಡ್ರೋನ್ ಪ್ರತಾಪ್ ಸೇರಿದಂತೆ ಸಾವಿರಾರು ಭಾರತೀಯರು ಈಗ ವಿಮಾನ ನಿಲ್ದಾಣದಲ್ಲಿಯೇ ಕಾಲ ಕಳೆಯಬೇಕಾಗಿದೆ.

Exit mobile version