ಭಾರತದಲ್ಲಿ ವರದಕ್ಷಿಣೆ ಎಂಬ ಪಿಡುಗು ಇನ್ನೂ ಎಷ್ಟು ಆಳವಾಗಿ ಬೇರುಬಿಟ್ಟಿದೆ ಎಂಬುದನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಬಿಡುಗಡೆ ಮಾಡಿದ ಇತ್ತೀಚಿನ ಅಂಕಿ-ಅಂಶಗಳು ಮತ್ತೆ ಸಾಬೀತುಪಡಿಸಿವೆ. ದಶಕಗಳಿಂದ ವರದಕ್ಷಿಣೆ ವಿರೋಧಿ ಕಾನೂನುಗಳು ಜಾರಿಯಲ್ಲಿದ್ದರೂ, ಪ್ರತಿದಿನ ಸರಾಸರಿ 16 ಮಹಿಳೆಯರು ವರದಕ್ಷಿಣೆ ಕಿರುಕುಳ, ಗೃಹ ಹಿಂಸೆ ಹಾಗೂ ಅನುಮಾನಾಸ್ಪದ ಸಾವುಗಳಿಗೆ ಬಲಿಯಾಗುತ್ತಿದ್ದಾರೆ. ಇದು ದೇಶವನ್ನೇ ಬೆಚ್ಚಿಬೀಳಿಸಿದೆ.
NCRB ಬಿಡುಗಡೆ ಮಾಡಿದ ‘ಕ್ರೈಮ್ ಇನ್ ಇಂಡಿಯಾ’ ವರದಿ ಪ್ರಕಾರ, 2024 ವರ್ಷದಲ್ಲಿ ದೇಶದಲ್ಲಿ ಒಟ್ಟು 5,737 ವರದಕ್ಷಿಣೆ ಸಾವು ಪ್ರಕರಣಗಳು ದಾಖಲಾಗಿವೆ. ಮದುವೆಯಾದ ಕೆಲವೇ ವರ್ಷಗಳಲ್ಲಿ ಮಹಿಳೆಯರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪುತ್ತಿರುವ ಘಟನೆಗಳು ನಿರಂತರವಾಗಿ ವರದಿಯಾಗುತ್ತಿವೆ. ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಈ ಸಮಸ್ಯೆ ಹೆಚ್ಚಾಗಿದೆ.
ಮಹಾನಗರಗಳ ಪೈಕಿ ರಾಷ್ಟ್ರ ರಾಜಧಾನಿ ದೆಹಲಿ ವರದಕ್ಷಿಣೆ ಸಾವು ಪ್ರಕರಣಗಳಲ್ಲಿ ಅಗ್ರಸ್ಥಾನದಲ್ಲಿದೆ. 2024ರಲ್ಲಿ ದೆಹಲಿಯಲ್ಲಿ 109 ಪ್ರಕರಣಗಳು ದಾಖಲಾಗಿದ್ದು, ಒಟ್ಟು 111 ಮಹಿಳೆಯರು ಪ್ರಾಣ ಕಳೆದುಕೊಂಡಿದ್ದಾರೆ. ಕೋವಿಡ್ ಅವಧಿಯ 2021ರಲ್ಲಿ ಈ ಸಂಖ್ಯೆ 136ಕ್ಕೆ ಏರಿಕೆಯಾಗಿತ್ತು.
ಕಾನ್ಪುರ 54 ಪ್ರಕರಣಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದರೆ, ಬೆಂಗಳೂರು 25 ಪ್ರಕರಣಗಳನ್ನು ದಾಖಲಿಸಿದೆ. ದೆಹಲಿಯಲ್ಲಿ ಪ್ರತಿ ಲಕ್ಷ ಜನಸಂಖ್ಯೆಗೆ 1.4ರಷ್ಟು ವರದಕ್ಷಿಣೆ ಸಾವುಗಳ ಅಪರಾಧ ಪ್ರಮಾಣ ದಾಖಲಾಗಿದೆ. ಮತ್ತೊಂದೆಡೆ, ಚೆನ್ನೈ ಮತ್ತು ಕೊಚ್ಚಿ ಸೇರಿದಂತೆ ದಕ್ಷಿಣ ಭಾರತದ ಕೆಲವು ನಗರಗಳಲ್ಲಿ ಶೂನ್ಯ ವರದಕ್ಷಿಣೆ ಸಾವು ಪ್ರಕರಣಗಳು ದಾಖಲಾಗಿದೆ.
ವರದಕ್ಷಿಣೆ ನಿಷೇಧ ಕಾಯ್ದೆಯಡಿ 2023ರಲ್ಲಿ ದೇಶಾದ್ಯಂತ 15 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇದು ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡಾ 14ರಷ್ಟು ಹೆಚ್ಚಳವಾಗಿದೆ. ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು 7,151 ಪ್ರಕರಣಗಳು ದಾಖಲಾಗಿದ್ದರೆ, ಬಿಹಾರದಲ್ಲಿ 3,665 ಮತ್ತು ಕರ್ನಾಟಕದಲ್ಲಿ 2,322 ಪ್ರಕರಣಗಳು ದಾಖಲಾಗಿವೆ. 2023ರಲ್ಲಿ ಮಾತ್ರ ದೇಶಾದ್ಯಂತ 6,156 ಮಹಿಳೆಯರು ವರದಕ್ಷಿಣೆ ಸಂಬಂಧಿತ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ ಎಂದು ವರದಿ ಹೇಳಿದೆ.
ಇತ್ತೀಚಿನ ಕೆಲವು ಘಟನೆಗಳು ದೇಶದ ಜನರನ್ನು ಇನ್ನಷ್ಟು ಬೆಚ್ಚಿಬೀಳಿಸಿವೆ. ನೋಯ್ಡಾದ ನಿವಾಸಿ ಟ್ವಿಶಾ ಶರ್ಮಾ ಅವರು ಡಿಸೆಂಬರ್ 2025ರಲ್ಲಿ ಭೋಪಾಲ್ ನಿವಾಸಿ ಸಮರ್ಥ್ ಸಿಂಗ್ ಅವರನ್ನು ವಿವಾಹವಾಗಿದ್ದರು. ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಮೇ 12ರಂದು ಅವರು ಪತಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಟ್ವಿಶಾ ಕುಟುಂಬದವರು ಗಂಡ ಹಾಗೂ ಆತನ ಮನೆಯವರ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಆರೋಪ ಮಾಡಿದ್ದಾರೆ.
ಈ ಪ್ರಕರಣದಲ್ಲಿ ಟ್ವಿಶಾ ತಮ್ಮ ತಾಯಿಗೆ ಕಳುಹಿಸಿದ್ದ ವಾಟ್ಸಾಪ್ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. “ಅಮ್ಮಾ.. ನನಗೆ ತುಂಬಾ ಉಸಿರುಗಟ್ಟುತ್ತಿದೆ” ಎಂಬ ಆಕೆಯ ಸಂದೇಶ ಸಾವಿರಾರು ಜನರ ಮನಕಲಕಿತ್ತು. ಮದುವೆಯ ಬಳಿಕ ಅನುಭವಿಸಿದ್ದ ಮಾನಸಿಕ ಹಿಂಸೆ ಬಗ್ಗೆ ಈ ಸಂದೇಶಗಳು ದೊಡ್ಡ ಚರ್ಚೆಗೆ ಕಾರಣವಾದವು.
ಇದೇ ರೀತಿ ಗ್ರೇಟರ್ ನೋಯ್ಡಾದ 24 ವರ್ಷದ ದೀಪಿಕಾ ನಗರ್ ಪ್ರಕರಣವೂ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಮದುವೆಯಾದ ಕೇವಲ 18 ತಿಂಗಳಲ್ಲಿ ಆಕೆ ಗಂಡನ ಮನೆಯ ಮಾಳಿಗೆಯಿಂದ ಬಿದ್ದು ಸಾವನ್ನಪ್ಪಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಮದುವೆಗೆ ಸುಮಾರು 1 ಕೋಟಿ ರೂಪಾಯಿ ಖರ್ಚು ಮಾಡಿದ್ದರೂ, ವರದಕ್ಷಿಣೆ ಬೇಡಿಕೆ ನಿಲ್ಲಲಿಲ್ಲ ಎಂದು ಆಕೆಯ ಕುಟುಂಬ ಆರೋಪಿಸಿದೆ. ಈ ಪ್ರಕರಣದಲ್ಲಿ ಪೊಲೀಸರು ಪತಿ ಹಾಗೂ ಮಾವರನ್ನು ಬಂಧಿಸಿದ್ದಾರೆ.
ಜನವರಿ 2026ರಲ್ಲಿ ನಡೆದ ಮತ್ತೊಂದು ಹೈ-ಪ್ರೊಫೈಲ್ ಪ್ರಕರಣದಲ್ಲಿ ಮಹಿಳಾ SWAT ಕಮಾಂಡೋ ಅಧಿಕಾರಿಯನ್ನು ನಿರಂತರ ವರದಕ್ಷಿಣೆ ಕಿರುಕುಳದ ಹಿನ್ನೆಲೆ ಪತಿಯೇ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು. ಈ ಘಟನೆ ದೇಶದ ಭದ್ರತಾ ವ್ಯವಸ್ಥೆಯೊಳಗಿರುವ ಮಹಿಳೆಯರೂ ಸಹ ಈ ಸಾಮಾಜಿಕ ಪಿಡುಗಿನಿಂದ ಸುರಕ್ಷಿತರಲ್ಲ ಎಂಬ ಸಂದೇಶ ನೀಡಿದೆ.
ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 80 ಪ್ರಕಾರ, ಮದುವೆಯಾದ ಏಳು ವರ್ಷಗಳೊಳಗೆ ಮಹಿಳೆ ಅಸ್ವಾಭಾವಿಕವಾಗಿ ಸಾವನ್ನಪ್ಪಿ, ಆಕೆಗೆ ವರದಕ್ಷಿಣೆ ಸಂಬಂಧಿತ ಕಿರುಕುಳ ನೀಡಲಾಗಿತ್ತು ಎಂಬ ಸಾಕ್ಷ್ಯ ದೊರೆತರೆ ಅದನ್ನು ‘ವರದಕ್ಷಿಣೆ ಸಾವು’ ಎಂದು ಪರಿಗಣಿಸಲಾಗುತ್ತದೆ.
