ಮುಂಬೈ, ಮೇ 19: 90ರ ದಶಕದಲ್ಲಿ ಬಾಲಿವುಡ್ ಹಾಗೂ ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ನಟಿ ಸಾಕ್ಷಿ ಶಿವಾನಂದ್ ಇದೀಗ ಹಲವು ವರ್ಷಗಳ ಬಳಿಕ ಬಾಲಿವುಡ್ ತೊರೆಯಲು ಕಾರಣವಾದ ಆಘಾತಕಾರಿ ಘಟನೆಯನ್ನು ಬಹಿರಂಗಪಡಿಸಿದ್ದಾರೆ. ಹಿಂದಿ ಚಿತ್ರರಂಗದಿಂದ ದೂರವಾದ ಅವರ ನಿರ್ಧಾರದ ಹಿಂದೆ ಅಂಡರ್‌ವರ್ಲ್ಡ್‌ನ ಭೀತಿ ಮತ್ತು ಮಾಫಿಯಾ ಸಂಪರ್ಕಗಳಿದ್ದವು ಎಂಬ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.
1990ರ ದಶಕದಲ್ಲಿ ಗ್ಲಾಮರ್ ಮತ್ತು ಅಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದ ಸಾಕ್ಷಿ ಶಿವಾನಂದ್, 1993ರಲ್ಲಿ ತೆಲುಗು ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಟ್ಟಿದ್ದರು. ನಂತರ ಬಾಲಿವುಡ್ ಪ್ರವೇಶಿಸಿ ಹಲವು ಖ್ಯಾತ ನಟರ ಜೊತೆ ಅಭಿನಯಿಸುವ ಅವಕಾಶವೂ ಅವರಿಗೆ ದೊರಕಿತ್ತು. ವಿನೋದ್ ಖನ್ನಾ ಮತ್ತು ಧರ್ಮೇಂದ್ರ ಅವರಂತಹ ಹಿರಿಯ ನಟರೊಂದಿಗೆ ನಟಿಸಿ ಗಮನ ಸೆಳೆದಿದ್ದರು.
ಆದರೆ ಬಾಲಿವುಡ್‌ನಲ್ಲಿ ನಿರೀಕ್ಷಿಸಿದ ಮಟ್ಟದ ಯಶಸ್ಸು ಸಿಗದೇ ಹೋದ ಕಾರಣ, ಅವರು ಮತ್ತೆ ದಕ್ಷಿಣ ಭಾರತೀಯ ಸಿನಿಮಾಗಳತ್ತ ಮುಖ ಮಾಡಿದರು. ಕನ್ನಡದಲ್ಲಿಯೂ ಸಾಕ್ಷಿ ಶಿವಾನಂದ್ ತಮ್ಮದೇ ಆದ ಗುರುತು ಮೂಡಿಸಿದ್ದರು. ಶಿವರಾಜಕುಮಾರ್ ಅಭಿನಯದ ‘ಗಲಾಟೆ ಅಳಿಯಂದಿರು’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಅವರು, ‘ನಾನು ನಾನೇ’, ‘ಸೈನಿಕ’, ‘ಕೋದಂಡರಾಮ’, ‘ಸೌಂದರ್ಯ’ ಹಾಗೂ ‘ತಂದೆಗೆ ತಕ್ಕ ಮಗ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಕನ್ನಡ ಪ್ರೇಕ್ಷಕರ ಮನ ಗೆದ್ದಿದ್ದರು.
ಬಳಿಕ ಮತ್ತೆ ಹಿಂದಿ ಚಿತ್ರರಂಗಕ್ಕೆ ಮರಳಿದ್ದ ಸಾಕ್ಷಿಗೆ ಸೈಫ್ ಅಲಿ ಖಾನ್ ಜೊತೆ ‘ತುಮ್’ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ಇದೇ ಸಮಯದಲ್ಲಿ ಅವರ ಜೀವನದಲ್ಲಿ ಭಯಾನಕ ಅನುಭವವೊಂದು ಎದುರಾದ್ದಾಗಿ ಅವರು ಹಳೆಯ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಆ ಚಿತ್ರದ ನಿರ್ಮಾಪಕರಿಗೆ ಅಂಡರ್‌ವರ್ಲ್ಡ್ ಸಂಪರ್ಕಗಳಿವೆ ಎಂಬ ಮಾಹಿತಿ ತಿಳಿದ ಬಳಿಕ ತೀವ್ರ ಆತಂಕಕ್ಕೆ ಒಳಗಾಗಿದ್ದಾಗಿ ಸಾಕ್ಷಿ ಹೇಳಿದ್ದಾರೆ. “ಬಾಲಿವುಡ್‌ನಲ್ಲಿ ಅಂಡರ್‌ವರ್ಲ್ಡ್ ಪ್ರಭಾವ ಬಹಳ ಗಟ್ಟಿಯಾಗಿದೆ ಎಂದು ಅನೇಕರಿಂದ ಕೇಳುತ್ತಿದ್ದೆ. ಆ ಘಟನೆ ಬಳಿಕ ನಾನು ತುಂಬಾ ಭಯಗೊಂಡೆ. ತಕ್ಷಣ ಹಿಂದಿ ಇಂಡಸ್ಟ್ರಿಯಿಂದ ದೂರ ಸರಿದು ಮತ್ತೆ ತೆಲುಗು ಮತ್ತು ಕನ್ನಡ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದೆ” ಎಂದು ಅವರು ಹೇಳಿಕೊಂಡಿದ್ದಾರೆ.
ಈ ಘಟನೆ ತಮ್ಮ ಜೀವನದ ಮೇಲೆ ದೊಡ್ಡ ಪರಿಣಾಮ ಬೀರಿತು ಎಂದು ಹೇಳಿದ ಸಾಕ್ಷಿ, ಆ ಚಿತ್ರದ ನಿರ್ಮಾಪಕರ ಜೊತೆ ಸಂಪೂರ್ಣ ಸಂಪರ್ಕ ಕಡಿತಗೊಳಿಸಿದ್ದರಂತೆ. “ಅವರು ನಿರಂತರವಾಗಿ ಕರೆ ಮಾಡುತ್ತಿದ್ದರು. ನಾನು ಭಯದಿಂದ ನನ್ನ ಮೊಬೈಲ್ ನಂಬರ್ ಕೂಡ ಬದಲಾಯಿಸಿಕೊಂಡೆ. ನಾನು ಎಲ್ಲಿದ್ದೇನೆ ಎಂಬುದು ಯಾರಿಗೂ ಗೊತ್ತಾಗದಂತೆ ನೋಡಿಕೊಂಡೆ. ಆ ಒಂದು ಘಟನೆ ನನ್ನ ಬಾಲಿವುಡ್ ಕರಿಯರ್‌ಗೆ ದೊಡ್ಡ ಹೊಡೆತ ಕೊಟ್ಟಿತು” ಎಂದು ಅವರು ನೆನಪಿಸಿಕೊಂಡಿದ್ದಾರೆ.
ಸಾಕ್ಷಿ ಶಿವಾನಂದ್ ಹೇಳಿಕೆ ಇದೀಗ ಮತ್ತೆ ಬಾಲಿವುಡ್ ಮತ್ತು ಅಂಡರ್‌ವರ್ಲ್ಡ್ ನಡುವಿನ ಹಳೆಯ ಸಂಬಂಧಗಳ ಕುರಿತು ಚರ್ಚೆ ಹುಟ್ಟುಹಾಕಿದೆ. 1990ರ ದಶಕದಲ್ಲಿ ಬಾಲಿವುಡ್‌ನಲ್ಲಿ ಮಾಫಿಯಾ ಪ್ರಭಾವ ಸಾಕಷ್ಟು ಗಟ್ಟಿಯಾಗಿತ್ತು ಎಂಬ ಆರೋಪಗಳು ಹಲವು ಬಾರಿ ಕೇಳಿಬಂದಿದ್ದವು. ಅನೇಕ ನಿರ್ಮಾಪಕರು, ನಿರ್ದೇಶಕರು ಮತ್ತು ನಟರು ಅಂಡರ್‌ವರ್ಲ್ಡ್ ಒತ್ತಡ, ಬೆದರಿಕೆ ಹಾಗೂ ಹಣಕಾಸಿನ ಸಮಸ್ಯೆಗಳನ್ನು ಎದುರಿಸಿದ್ದರು ಎಂಬ ವರದಿಗಳು ಅಂದಿನ ದಿನಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದವು.
ಇತ್ತೀಚೆಗೆ ನಟ ವರುಣ್ ಧವನ್ ಕೂಡ ತಮ್ಮ ತಂದೆ, ನಿರ್ದೇಶಕ ಡೇವಿಡ್ ಧವನ್ ಅವರಿಗೆ ಅಂಡರ್‌ವರ್ಲ್ಡ್‌ನಿಂದ ಬೆದರಿಕೆ ಕರೆಗಳು ಬಂದಿದ್ದವು ಎಂದು ಹೇಳಿಕೊಂಡಿದ್ದರು. ಇದೇ ರೀತಿ ನಿರ್ದೇಶಕ ಕರಣ್ ಜೋಹರ್ ಅವರಿಗೂ ‘ಕುಚ್ ಕುಚ್ ಹೋತಾ ಹೈ’ ಚಿತ್ರದ ಸಮಯದಲ್ಲಿ ಅಂಡರ್‌ವರ್ಲ್ಡ್‌ನಿಂದ ಸಮಸ್ಯೆಗಳು ಎದುರಾಗಿದ್ದವು ಎಂದು ನಿರ್ದೇಶಕಿ ಫರಾ ಖಾನ್ ಬಹಿರಂಗಪಡಿಸಿದ್ದರು.
