ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ವಾತಾವರಣ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದು, ಇದೀಗ ಇರಾನ್ ಸಂಸತ್ತಿನಲ್ಲಿ ಚರ್ಚೆಯಾಗುತ್ತಿರುವ ವಿವಾದಾತ್ಮಕ ಮಸೂದೆ ಜಾಗತಿಕ ಮಟ್ಟದಲ್ಲಿ ಭಾರೀ ಸಂಚಲನ ಮೂಡಿಸಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಹತ್ಯೆ ಮಾಡುವವರಿಗೆ ಬರೋಬ್ಬರಿ 50 ಮಿಲಿಯನ್ ಯುರೋ, ಅಂದರೆ ಭಾರತೀಯ ಕರೆನ್ಸಿಯಲ್ಲಿ ಸುಮಾರು ₹480 ಕೋಟಿಗೂ ಅಧಿಕ ಬಹುಮಾನ ನೀಡುವ ಪ್ರಸ್ತಾವನೆ ಇರಾನ್ ಸಂಸತ್ತಿನಲ್ಲಿ ಚರ್ಚೆಗೆ ಬಂದಿದೆ ಎನ್ನಲಾಗಿದೆ.
ಈ ಬೆಳವಣಿಗೆಗೆ ಹಿನ್ನೆಲೆ ಈ ವರ್ಷದ ಫೆಬ್ರವರಿ 28 ರಂದು ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ಭೀಕರ ವೈಮಾನಿಕ ದಾಳಿ ನಡೆದಿತ್ತು.. ಆ ದಾಳಿಯಲ್ಲಿ ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದರು ಎಂಬ ವರದಿಗಳು ಹರಿದಾಡಿದ್ದವು. ಈ ಘಟನೆ ಬಳಿಕ ಇರಾನ್ ಆಡಳಿತ ಹಾಗೂ ಸೇನಾ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಪ್ರತೀಕಾರದ ರಾಜಕೀಯ ಮತ್ತಷ್ಟು ತೀವ್ರಗೊಂಡಿದೆ.
ಇರಾನ್ ಸಂಸತ್ತಿನ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿ ಸಮಿತಿಯ ಅಧ್ಯಕ್ಷ ಎಬ್ರಾಹಿಂ ಅಜೀಜಿ ಮಾತನಾಡಿ, “ಇಸ್ಲಾಮಿಕ್ ರಿಪಬ್ಲಿಕ್‌ನ ಸೈನಿಕ ಮತ್ತು ಭದ್ರತಾ ಪಡೆಗಳ ಪರಸ್ಪರ ಪ್ರತಿಕ್ರಿಯಾತ್ಮಕ ಕ್ರಮ” ಎಂಬ ಹೆಸರಿನಲ್ಲಿ ಹೊಸ ಕರಡು ಕಾಯ್ದೆ ಸಿದ್ಧಪಡಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಈ ಮಸೂದೆಯ ಪ್ರಕಾರ, ಅಲಿ ಖಮೇನಿ ಹತ್ಯೆಗೆ ಹೊಣೆಗಾರರೆಂದು ಪರಿಗಣಿಸಲ್ಪಟ್ಟಿರುವ ಡೊನಾಲ್ಡ್ ಟ್ರಂಪ್, ಬೆಂಜಮಿನ್ ನೆತನ್ಯಾಹು ಹಾಗೂ ಅಮೆರಿಕದ CENTCOM ಮುಖ್ಯಸ್ಥ ಅಡ್ಮಿರಲ್ ಬ್ರಾಡ್ ಕೂಪರ್ ಅವರನ್ನು ಗುರಿಯಾಗಿಸುವವರಿಗೆ ಬಹುಮಾನ ಘೋಷಿಸಲಾಗುತ್ತದೆ ಎಂದು ಹೇಳಲಾಗಿದೆ.
“ಯಾವುದೇ ಮುಸ್ಲಿಂ ಅಥವಾ ಸ್ವತಂತ್ರ ವ್ಯಕ್ತಿ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರೆ, ಇರಾನ್ ಸರ್ಕಾರ ಅಧಿಕೃತವಾಗಿ 50 ಮಿಲಿಯನ್ ಯುರೋ ಬಹುಮಾನ ನೀಡಲಿದೆ,” ಎಂದು ಅಜೀಜಿ ಇರಾನ್‌ನ ಸರ್ಕಾರಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ, ಸಂಸತ್ತಿನ ಮತ್ತೊಬ್ಬ ಹಿರಿಯ ಸದಸ್ಯ ಮಹಮೂದ್ ನಬಾವಿಯನ್ ಕೂಡ ಈ ಮಸೂದೆಗೆ ಶೀಘ್ರದಲ್ಲೇ ಮತದಾನ ನಡೆಯುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಇದರ ಜೊತೆಗೆ, ಇರಾನ್ ಬೆಂಬಲಿತ ಸೈಬರ್ ವಾರ್‌ಫೇರ್ ಗುಂಪು ಹಂದಾಲಾ (Handala) ಕೂಡ ಟ್ರಂಪ್ ಮತ್ತು ನೆತನ್ಯಾಹು ವಿರುದ್ಧ ಸೈಬರ್ ಬೌಂಟಿ ಘೋಷಣೆ ಮಾಡಿದೆ ಎಂಬ ವರದಿಗಳು ಹರಿದಾಡುತ್ತಿವೆ. ಅಮೆರಿಕ ನ್ಯಾಯಾಂಗ ಇಲಾಖೆ ಇರಾನ್ ಹ್ಯಾಕರ್‌ಗಳ ಕುರಿತು ಮಾಹಿತಿ ನೀಡುವವರಿಗೆ 10 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದ್ದಕ್ಕೆ ಪ್ರತಿಯಾಗಿ ಇರಾನ್ ಈ ತಂತ್ರ ರೂಪಿಸಿದೆ ಎಂದು ಹೇಳಲಾಗುತ್ತಿದೆ.
ಈ ಎಲ್ಲ ಬೆಳವಣಿಗೆಗಳ ನಡುವೆಯೇ ಡೊನಾಲ್ಡ್ ಟ್ರಂಪ್ ಈಗಾಗಲೇ ಕಠಿಣ ಎಚ್ಚರಿಕೆ ನೀಡಿದ್ದಾರೆ. “ಒಂದೊಮ್ಮೆ ಇರಾನ್ ನನ್ನ ಮೇಲೆ ಹತ್ಯೆ ಯತ್ನ ನಡೆಸಿದರೆ, ಅಮೆರಿಕ ಸೇನೆಗೆ ಇಡೀ ಇರಾನ್ ದೇಶವನ್ನು ಭೂಪಟದಿಂದ ಅಳಿಸಿಹಾಕುವ ಆದೇಶ ನೀಡಲಾಗುವುದು,” ಎಂದು ಟ್ರಂಪ್ ಹಿಂದೆ ಎಚ್ಚರಿಸಿದ್ದರು. ಈ ಹೇಳಿಕೆ ಮತ್ತೆ ವೈರಲ್ ಆಗಿದ್ದು, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಇನ್ನೊಂದೆಡೆ, ಯುದ್ಧ ಮತ್ತು ನಿರಂತರ ದಾಳಿಗಳ ಪರಿಣಾಮ ಇರಾನ್‌ನ ಗ್ಯಾಸ್ ಮತ್ತು ವಿದ್ಯುತ್ ಸ್ಥಾವರಗಳಿಗೆ ಭಾರೀ ಹಾನಿಯಾಗಿದೆ. ಆರ್ಥಿಕ ಸಂಕಷ್ಟದಲ್ಲಿದ್ದರೂ ಇರಾನ್ ತನ್ನ ಸೇನಾ ಮತ್ತು ಸೈಬರ್ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ.
ಈ ನಡುವೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತುರ್ತು ಭದ್ರತಾ ಸಭೆಗಳನ್ನು ನಡೆಸುತ್ತಿದ್ದು, ಅಮೆರಿಕ ಹಾಗೂ ಇಸ್ರೇಲ್ ಮತ್ತೊಮ್ಮೆ ಇರಾನ್ ವಿರುದ್ಧ ದಾಳಿ ನಡೆಸುವ ಸಾಧ್ಯತೆಗಳ ಬಗ್ಗೆ ಗುಪ್ತಚರ ಮಾಹಿತಿ ಸಂಗ್ರಹಿಸುತ್ತಿವೆ ಎನ್ನಲಾಗುತ್ತಿದೆ.
