ದುಬೈ (ಜುಲೈ 14): ಅಮೆರಿಕಾ ಇಸ್ರೇಲ್ ಮತ್ತು ಅಮೆರಿಕ ದೇಶಗಳ ನಡುವಿನ ಯುದ್ದ ಸದ್ಯಕ್ಕೆ ಅಂತ್ಯಗೊಳ್ಳುವ ರೀತಿ ಕಾಣುತ್ತಿಲ್ಲ. ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ನಡೆಸುತ್ತಿರುವ ಸರಣಿ ದಾಳಿಗಳು ಹಾಗೂ ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮಹತ್ವದ ಕಾರ್ಯತಂತ್ರದ ನಿರ್ಧಾರ ಕೈಗೊಂಡಿದೆ. ಹಾರ್ಮುಜ್ ಜಲಸಂಧಿಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಯುಎಇ ತನ್ನ ಪೂರ್ವ ಕರಾವಳಿಯ ಫುಜೈರಾ (Fujairah) ಪ್ರದೇಶದಲ್ಲಿ ಹೊಸ ಬಹುಉದ್ದೇಶೀಯ (Multipurpose) ಬಂದರನ್ನು ನಿರ್ಮಿಸಲು ಯೋಜನೆ ರೂಪಿಸಿದೆ ಎಂದು ವರದಿಯೊಂದು ತಿಳಿಸಿದೆ.
ಯುಎಇ ಮೂಲದ ಜಾಗತಿಕ ಲಾಜಿಸ್ಟಿಕ್ಸ್ ಸಂಸ್ಥೆ ಡಿಪಿ ವರ್ಲ್ಡ್ (DP World) ಇದನ್ನು ಅಭಿವೃದ್ದಿ ಪಡಿಸಲು ಯೋಜನೆ ರೋಪಿಸಿದೆ ಎನ್ನಲಾಗಿದೆ. ಈಗಿರುವ ಫುಜೈರಾ ಬಂದರಿನಲ್ಲಿ ಹೊಸ ಕಂಟೈನರ್ ಟರ್ಮಿನಲ್ ನಿರ್ಮಾಣದ ಕುರಿತೂ ಚರ್ಚೆಗಳು ನಡೆಯುತ್ತಿವೆ.
ಪ್ರಸ್ತುತ ದುಬೈನ ಪ್ರಮುಖ ವ್ಯಾಪಾರ ಕೇಂದ್ರವಾದ ಜೆಬೆಲ್ ಅಲಿ ಬಂದರಿಗೆ ಬರುವ ಬಹುತೇಕ ಹಡಗುಗಳು ಒಮಾನ್ ಮತ್ತು ಇರಾನ್ ನಡುವಿನ ಕಿರಿದಾದ ಹಾರ್ಮುಜ್ ಜಲಸಂಧಿಯ ಮೂಲಕವೇ ಸಂಚರಿಸಬೇಕಾಗುತ್ತದೆ. ಈ ಜಲಮಾರ್ಗದಲ್ಲಿ ಉದ್ವಿಗ್ನತೆ ಉಂಟಾದರೆ ವ್ಯಾಪಾರ ಚಟುವಟಿಕೆಗಳು ನೇರವಾಗಿ ಹೊಡೆತ ತಿನ್ನುತ್ತವೆ. ಆದರೆ ಹೊಸ ಫುಜೈರಾ ಬಂದರು ಒಮಾನ್ ಗಲ್ಫ್ ತೀರದಲ್ಲಿರುವುದರಿಂದ ಹಡಗುಗಳು ಹಾರ್ಮುಜ್ ಜಲಸಂಧಿಯನ್ನು ಪ್ರವೇಶಿಸದೇ ಯುಎಇ ತಲುಪುವ ಅವಕಾಶ ಸಿಗಲಿದೆ.
ಇದರ ಜೊತೆಗೆ ಯುಎಇಯಲ್ಲಿರುವ ರಸ್ತೆ ಸಂಪರ್ಕದ ಮೂಲಕ ಟ್ರಕ್‌ಗಳಲ್ಲಿ ಸರಕು ಸಾಗಣೆ ನಡೆಸಬಹುದು. ಅಗತ್ಯವಿದ್ದರೆ ಇತರ ಕೊಲ್ಲಿ ರಾಷ್ಟ್ರಗಳಿಗೂ ಇದೇ ಮಾರ್ಗದ ಮೂಲಕ ಸರಕು ಸಾಗಣೆ ಸಾಧ್ಯವಾಗಲಿದೆ. ಒಮಾನ್ ಗಲ್ಫ್ ಮಾರ್ಗವು ಹಾರ್ಮುಜ್ ಜಲಸಂಧಿಯಷ್ಟು ಕಿರಿದಾಗಿಲ್ಲದ ಕಾರಣ, ಭದ್ರತಾ ಅಪಾಯವೂ ಕಡಿಮೆಯಾಗುವ ನಿರೀಕ್ಷೆಯಿದೆ.
ಯುಎಇ ಈ ನಿರ್ಧಾರ ಕೈಗೊಳ್ಳಲು ಪ್ರಮುಖ ಕಾರಣಗಳೇನು?
ಯುಎಇ ಈ ನಿರ್ಧಾರ ಕೈಗೊಳ್ಳಲು ಹಲವು ಪ್ರಮುಖ ಕಾರಣಗಳಿವೆ. ಇತ್ತೀಚಿನ ಸಂಘರ್ಷದ ಸಂದರ್ಭದಲ್ಲಿ ಹಾರ್ಮುಜ್ ಜಲಸಂಧಿ ಬಂದ್ ಆಗಿದ್ದರಿಂದ ಜೆಬೆಲ್ ಅಲಿ ಬಂದರಿನ ವ್ಯಾಪಾರ ಚಟುವಟಿಕೆಗಳು ಶೇ.90 ರಿಂದ 95ರಷ್ಟು ಕುಸಿದಿವೆ ಎನ್ನಲಾಗಿದೆ. ಮತ್ತೊಂದೆಡೆ, ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳ ಭೀತಿ ಹೆಚ್ಚಾಗಿದ್ದು, ಜೆಬೆಲ್ ಅಲಿ ಬಂದರು ಸುತ್ತಮುತ್ತಲಿನ ಪ್ರದೇಶಗಳೂ ಭದ್ರತಾ ಸವಾಲುಗಳನ್ನು ಎದುರಿಸಿವೆ.
ಯುಎಇಯ ಪ್ರಮುಖ ಉದ್ದೇಶಗಳೇನು?
ಭವಿಷ್ಯದಲ್ಲಿ ಮಧ್ಯಪ್ರಾಚ್ಯದಲ್ಲಿ ಯಾವುದೇ ರೀತಿಯ ಯುದ್ಧ, ದಿಗ್ಬಂಧನ ಅಥವಾ ಭೌಗೋಳಿಕ ಬಿಕ್ಕಟ್ಟು ಎದುರಾದರೂ ದೇಶದ ವ್ಯಾಪಾರ ಮತ್ತು ಆರ್ಥಿಕತೆಗೆ ದೊಡ್ಡ ಹೊಡೆತ ಬೀಳದಂತೆ ಪರ್ಯಾಯ ವ್ಯವಸ್ಥೆ ರೂಪಿಸುವುದು ಯುಎಇಯ ಪ್ರಮುಖ ಉದ್ದೇಶವಾಗಿದೆ.
ಆದರೆ ಹೊಸ ಬಂದರು ನಿರ್ಮಾಣವಾದರೂ ಜೆಬೆಲ್ ಅಲಿ ಬಂದರಿನ ಮಹತ್ವ ಕಡಿಮೆಯಾಗುವುದಿಲ್ಲ ಎಂದು ಡಿಪಿ ವರ್ಲ್ಡ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಫುಜೈರಾ ಬಂದರು ಕೇವಲ ತುರ್ತು ಪರಿಸ್ಥಿತಿಯಲ್ಲಿ ಬಳಸಬಹುದಾದ ಪರ್ಯಾಯ ವ್ಯವಸ್ಥೆಯಾಗಿದ್ದು, ಯೋಜನೆಯನ್ನು ಕೇವಲ ಒಂದೂವರೆ ವರ್ಷದಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
