ದೆಹಲಿಯ ಸಂಸತ್ ಭವನದ ಸಮೀಪ ಭಾರೀ ಅಗ್ನಿ ಅವಘಡ

Untitled Design 2026 10 26T154433.302

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ಪ್ರಮುಖ ಆಡಳಿತ ಕೇಂದ್ರಗಳಲ್ಲಿ ಒಂದಾಗಿರುವ ಐತಿಹಾಸಿಕ ನಾರ್ತ್ ಬ್ಲಾಕ್ ಕಟ್ಟಡದ ಸಮೀಪ ಸೋಮವಾರ ಬೆಳಿಗ್ಗೆ ಅಗ್ನಿ ಅವಘಡ ಸಂಭವಿಸಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸೆಂಟ್ರಲ್ ವಿಸ್ಟಾ ವ್ಯಾಪ್ತಿಯಲ್ಲಿರುವ ಈ ಕಟ್ಟಡದಿಂದ ಹೊಗೆ ಹೊರಬರುತ್ತಿದ್ದು, ತಕ್ಷಣ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದೆ. ನಂತರ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು.

ಬೆಳಿಗ್ಗೆ ಸುಮಾರು 11:10ರ ವೇಳೆಗೆ ನಾರ್ತ್ ಬ್ಲಾಕ್ ಕಟ್ಟಡದಲ್ಲಿ ಹೊಗೆ ಕಾಣಿಸಿಕೊಂಡಿರುವ ಕುರಿತು ದೆಹಲಿ ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಕರೆ ಬಂದಿದೆ. ಮಾಹಿತಿ ಲಭಿಸುತ್ತಿದ್ದಂತೆ ಆರು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ರವಾನಿಸಲಾಯಿತು. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಕ್ರಮ ಕೈಗೊಂಡರು.

ಕಟ್ಟಡದ ಕಾಮಗಾರಿಯ ಸಂದರ್ಭದಲ್ಲಿ ಸಣ್ಣ ಪ್ರಮಾಣದ ಬೆಂಕಿ ಕಾಣಿಸಿಕೊಂಡಿರುವ ಸಾಧ್ಯತೆಯಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಬೆಂಕಿ ಕಾಣಿಸಿಕೊಳ್ಳಲು ನಿಖರವಾದ ಕಾರಣವೇನು ಎಂಬುದು ತನಿಖೆಯಿಂದ ಸ್ಪಷ್ಟವಾಗಬೇಕಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹೊಗೆಯ ಚಿತ್ರ ಹಂಚಿಕೊಂಡ ಸಂಸದ

ನಾರ್ತ್ ಬ್ಲಾಕ್ ಕಟ್ಟಡದಿಂದ ದಟ್ಟ ಕಪ್ಪು ಹೊಗೆ ಏಳುತ್ತಿರುವ ದೃಶ್ಯವು ಸಾರ್ವಜನಿಕರ ಗಮನ ಸೆಳೆದಿದೆ. ಸಂಸತ್ತಿಗೆ ತೆರಳುತ್ತಿದ್ದ ಶಿವಸೇನಾ ಸಂಸದ ಮಿಲಿಂದ್ ದೇವ್ರಾ ಅವರು ಬೆಳಿಗ್ಗೆ 11:12ರ ಸುಮಾರಿಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹೊಗೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ.

ನಾರ್ತ್ ಬ್ಲಾಕ್‌ನ ಹಿಂಭಾಗದಿಂದ ದಟ್ಟ ಹೊಗೆ ಬರುತ್ತಿರುವುದನ್ನು ಗಮನಿಸಿದ್ದಾಗಿ ಅವರು ತಮ್ಮ ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲಿ ಬೆಂಕಿ ಕಾಣಿಸಿಕೊಂಡಿರುವಂತೆ ತೋರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು, ಎಲ್ಲರೂ ಸುರಕ್ಷಿತವಾಗಿರಲಿ ಮತ್ತು ತುರ್ತು ರಕ್ಷಣಾ ತಂಡಗಳು ಶೀಘ್ರವಾಗಿ ಸ್ಪಂದಿಸಲಿ ಎಂದು ಆಶಿಸಿದ್ದಾರೆ.

ಕೇಂದ್ರ ಗೃಹ ಮತ್ತು ಹಣಕಾಸು ಸಚಿವಾಲಯಗಳ ಪ್ರಮುಖ ಕಚೇರಿಗಳಿದ್ದ ಕಟ್ಟಡ

ನಾರ್ತ್ ಬ್ಲಾಕ್ ದೆಹಲಿಯ ಐತಿಹಾಸಿಕ ಹಾಗೂ ಆಡಳಿತಾತ್ಮಕ ಮಹತ್ವ ಹೊಂದಿರುವ ಕಟ್ಟಡವಾಗಿದೆ. ಈ ಕಟ್ಟಡದಲ್ಲಿ ಸಾಂಪ್ರದಾಯಿಕವಾಗಿ ಕೇಂದ್ರ ಗೃಹ ಸಚಿವಾಲಯ ಹಾಗೂ ಹಣಕಾಸು ಸಚಿವಾಲಯದ ಕೆಲವು ಪ್ರಮುಖ ವಿಭಾಗಗಳು ಕಾರ್ಯನಿರ್ವಹಿಸುತ್ತಿದ್ದವು. 

ಕೇಂದ್ರ ಸರ್ಕಾರದ ಆಡಳಿತ ವ್ಯವಸ್ಥೆಯಲ್ಲಿ ದೀರ್ಘಕಾಲದಿಂದ ಮಹತ್ವದ ಪಾತ್ರ ವಹಿಸಿರುವ ಈ ಕಟ್ಟಡವು ತನ್ನ ವಾಸ್ತುಶಿಲ್ಪ ಮತ್ತು ಐತಿಹಾಸಿಕ ಹಿನ್ನೆಲೆಯಿಂದಲೂ ಪ್ರಸಿದ್ಧವಾಗಿದೆ. 

Exit mobile version