ಭಾರತದ ಅತಿ ವೇಗವಾಗಿ ಬೆಳೆಯುತ್ತಿರುವ ವಿಮಾನಯಾನ ಸಂಸ್ಥೆಯಾದ ಆಕಾಸ ಏರ್ ತನ್ನ ಸೇವೆಯನ್ನು ಭಾರಿ ಪ್ರಮಾಣದಲ್ಲಿ ವಿಸ್ತರಿಸಿದೆ. ಇದೀಗ ಪ್ರತಿದಿನ 200ಕ್ಕೂ ಹೆಚ್ಚು ವಿಮಾನಗಳು ಕಾರ್ಯಾಚರಣೆ ನಡೆಸುತ್ತಿದ್ದು, ಪ್ರಯಾಣಿಕರಿಗೆ ಮತ್ತಷ್ಟು ಹೊಸ ಮಾರ್ಗಗಳು ಹಾಗೂ ಹೆಚ್ಚಿನ ವಿಮಾನಗಳ ಸೌಲಭ್ಯವನ್ನು ಒದಗಿಸುತ್ತಿದೆ.
ಬೆಂಗಳೂರಿನಿಂದ ಹೆಚ್ಚಿನ ವಿಮಾನ, ಅಂತಾರಾಷ್ಟ್ರೀಯ ಪ್ರಯಾಣವೂ ಸುಲಭ
ಕನ್ನಡಿಗರಿಗೆ ಹಾಗೂ ದಕ್ಷಿಣ ಭಾರತದ ಪ್ರಯಾಣಿಕರಿಗೆ ಆಕಾಸ ಏರ್ ಸಿಹಿಸುದ್ದಿ ನೀಡಿದ್ದು, ಬೆಂಗಳೂರು ವಿಮಾನ ನಿಲ್ದಾಣದಿಂದ ತನ್ನ ಕಾರ್ಯಾಚರಣೆಯನ್ನು ಸಂಸ್ಥೆ ಗಣನೀಯವಾಗಿ ಹೆಚ್ಚಿಸಿದೆ. ಬೆಂಗಳೂರಿನಿಂದಲೇ ದೇಶದ 19 ವಿವಿಧ ನಗರಗಳಿಗೆ ಹಾಗೂ ಅಬುಧಾಬಿ, ಫುಕೆಟ್ ಮತ್ತು ಜೆದ್ದಾ ಸೇರಿದಂತೆ ಮೂರು ಪ್ರಮುಖ ಅಂತಾರಾಷ್ಟ್ರೀಯ ತಾಣಗಳಿಗೆ ನೇರ ವಿಮಾನ ಸೌಲಭ್ಯ ಒದಗಿಸುತ್ತಿದೆ.
ಇದರ ಜೊತೆಗೆ ಚಂಡೀಗಢ, ಜೈಪುರ ಮತ್ತು ಉದಯಪುರದಂತಹ ಪ್ರಮುಖ ನಗರಗಳಿಗೂ ಬೆಂಗಳೂರಿನಿಂದ ನೇರ ವಿಮಾನಗಳು ಪ್ರತಿದಿನ ಹಾರಾಟ ನಡೆಸುತ್ತಿವೆ. ದಕ್ಷಿಣ ಭಾರತದಲ್ಲಿ, ವಿಶೇಷವಾಗಿ ಕೇರಳದ ಕೊಚ್ಚಿ ಮತ್ತು ಕೋಳಿಕ್ಕೋಡ್‌ನಿಂದಲೂ ದೇಶೀಯ ಹಾಗೂ ಅಂತಾರಾಷ್ಟ್ರೀಯ ಸೇವೆಗಳನ್ನು ಹೆಚ್ಚಿಸುವ ಮೂಲಕ ದಕ್ಷಿಣದ ಮಾರುಕಟ್ಟೆಯಲ್ಲಿ ತನ್ನ ಬೇರನ್ನು ಗಟ್ಟಿಗೊಳಿಸಿದೆ.
ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಸೇವೆ
ಈ ಬೆಳವಣಿಗೆಯ ಬಗ್ಗೆ ತಮ್ಮ ಸಂತಸ ಹಂಚಿಕೊಂಡಿರುವ ಆಕಾಸ ಏರ್‌ನ ಸಹ-ಸಂಸ್ಥಾಪಕ ಹಾಗೂ ಮುಖ್ಯ ವಾಣಿಜ್ಯ ಅಧಿಕಾರಿ ಆನಂದ್ ಶ್ರೀನಿವಾಸನ್, “ನಾಲ್ಕು ವರ್ಷಗಳ ಹಿಂದೆ ವಿಮಾನಯಾನ ಆರಂಭಿಸಿದಾಗ ಭಾರತದ ಮಾರುಕಟ್ಟೆಯಲ್ಲಿ ದೊಡ್ಡ ಅವಕಾಶವಿತ್ತು. ಇಂದು ಪ್ರಯಾಣಿಕರ ಬೇಡಿಕೆ ಹೆಚ್ಚುತ್ತಿರುವ ನಗರಗಳನ್ನು ಗುರುತಿಸಿ, ಅಲ್ಲಿಗೆ ಹೆಚ್ಚಿನ ವಿಮಾನ ಸೇವೆಗಳನ್ನು ನೀಡಲಾಗುತ್ತಿದೆ,” ಎಂದು ಅವರು ತಿಳಿಸಿದ್ದಾರೆ.
“ಕೇವಲ ವಿಮಾನಗಳ ಸಂಖ್ಯೆ ಹೆಚ್ಚಿಸುವುದು ಮಾತ್ರ ಸಂಸ್ಥೆಯ ಉದ್ದೇಶವಲ್ಲ, ಬದಲಾಗಿ ಪ್ರಯಾಣಿಕರಿಗೆ ಉತ್ತಮ ಸಮಯ, ಹೆಚ್ಚಿನ ಆಯ್ಕೆಗಳು ಹಾಗೂ ವಿಶ್ವಾಸಾರ್ಹವಾದ ಮತ್ತು ಆಪ್ತವಾದ ಹಾರಾಟದ ಅನುಭವವನ್ನು ನೀಡುವುದು ನಮ್ಮ ಗುರಿ,” ಎಂದು ಅವರು ವಿವರಿಸಿದ್ದಾರೆ.
ದೆಹಲಿ, ಕೋಲ್ಕತ್ತಾ ಸೇರಿ ಪ್ರಮುಖ ನಗರಗಳ ನಡುವೆ ಸಂಪರ್ಕ ವೃದ್ಧಿ
ಉತ್ತರ ಭಾರತದಲ್ಲಿ ದೆಹಲಿಯನ್ನು ಕೇಂದ್ರವಾಗಿಟ್ಟುಕೊಂಡು ಆಕಾಸ ಏರ್ ತನ್ನ ಜಾಲವನ್ನು ಮತ್ತಷ್ಟು ಬಲಪಡಿಸಿದೆ. ದೆಹಲಿಯಿಂದ ವಾರಕ್ಕೆ 196 ವಿಮಾನಗಳು ಹಾರಾಟ ನಡೆಸುತ್ತಿದ್ದು, ಹದಿನಾಲ್ಕು ನಗರಗಳಿಗೆ ನೇರ ಸಂಪರ್ಕ ಕಲ್ಪಿಸುತ್ತಿವೆ. ದೆಹಲಿಯಿಂದ ಬೆಂಗಳೂರು, ಮುಂಬೈ, ಗೋವಾ ಹಾಗೂ ವಿಶಾಖಪಟ್ಟಣಕ್ಕೆ ಹೆಚ್ಚುವರಿ ವಿಮಾನಗಳನ್ನು ಒದಗಿಸಲಾಗಿದೆ.
ಇತ್ತ ಪೂರ್ವ ಭಾರತದಲ್ಲಿ ಕೋಲ್ಕತ್ತಾದಿಂದ ಕಾರ್ಯಾಚರಣೆ ಹೆಚ್ಚಿಸಲಾಗಿದ್ದು, ವಾರಕ್ಕೆ 95 ವಿಮಾನಗಳು ಕಾರ್ಯನಿರ್ವಹಿಸುತ್ತಿವೆ. ಕೋಲ್ಕತ್ತಾದಲ್ಲಿಯೇ ಹೊಸ ಸಿಬ್ಬಂದಿ ನೆಲೆಯನ್ನು ಸಹ ಸ್ಥಾಪಿಸುವ ಮೂಲಕ ಪೂರ್ವ ಭಾರತದಲ್ಲಿ ತನ್ನ ಅಸ್ತಿತ್ವವನ್ನು ಭದ್ರಪಡಿಸಿಕೊಂಡಿದೆ. ಇನ್ನು ಅತಿ ಹೆಚ್ಚು ಬೇಡಿಕೆ ಇರುವ ಮುಂಬೈ-ದೆಹಲಿ, ನವಿ ಮುಂಬೈ-ದೆಹಲಿ ಹಾಗೂ ದೆಹಲಿ-ಕೋಲ್ಕತ್ತಾ ಮಾರ್ಗಗಳಲ್ಲಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಅನೇಕ ವಿಮಾನಗಳ ಸೌಲಭ್ಯವಿದೆ.
ಅತ್ಯಾಧುನಿಕ ಹಾಗೂ ಪರಿಸರ ಸ್ನೇಹಿ ವಿಮಾನಗಳ ಸೇವೆ
ಆಗಸ್ಟ್ 2022ರಲ್ಲಿ ಆರಂಭವಾದ ಆಕಾಸ ಏರ್, ತನ್ನ ಸಮಯಪಾಲನೆ ಹಾಗೂ ಗ್ರಾಹಕ ಸ್ನೇಹಿ ಸೇವೆಯಿಂದಾಗಿ ಈವರೆಗೆ 3 ಕೋಟಿಗೂ ಅಧಿಕ ಪ್ರಯಾಣಿಕರ ವಿಶ್ವಾಸ ಗಳಿಸಿದೆ. ಪ್ರಸ್ತುತ ಭಾರತದ ಮೂವತ್ತೊಂದು ನಗರಗಳಿಗೆ ಮತ್ತು ಏಳು ಅಂತಾರಾಷ್ಟ್ರೀಯ ತಾಣಗಳಿಗೆ ತನ್ನ ಹಾರಾಟ ನಡೆಸುತ್ತಿದೆ.
ಭವಿಷ್ಯದ ದೃಷ್ಟಿಯಿಂದ ಸಂಸ್ಥೆಯು 226 ಅತ್ಯಾಧುನಿಕ ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳನ್ನು ಖರೀದಿಸಲು ಆರ್ಡರ್ ನೀಡಿದ್ದು, ಸದ್ಯ 43 ವಿಮಾನಗಳು ಬಳಕೆಯಲ್ಲಿವೆ. ಈ ವಿಮಾನಗಳು ಅತ್ಯಂತ ಕಡಿಮೆ ಇಂಧನ ಬಳಸುವ ಮೂಲಕ ಪರಿಸರ ಸ್ನೇಹಿಯಾಗಿವೆ.
