ಭಯೋತ್ಪಾದಕಿ ಶಾಹೀನ್ ನನ್ನ ಪ್ರೇಯಸಿಯಲ್ಲ, ಪತ್ನಿ ಎಂದ ದೆಹಲಿ ಸ್ಫೋಟದ ಉಗ್ರ ಮುಜಮ್ಮಿಲ್

Untitled design 2025 11 27T134702.852

ದೆಹಲಿ: ರಾಷ್ಟ್ರ ರಾಜಧಾನಿಯ ಕೆಂಪುಕೋಟೆ ಬಳಿ ನಡೆದ ಭೀಕರ ಕಾರು ಸ್ಫೋಟದ ತನಿಖೆಯಲ್ಲಿ ಒಂದಲ್ಲ ಒಂದು ಆಘಾತಕಾರಿ ಸತ್ಯಗಳು ಪದೇ ಪದೇ ಹೊರಬರುತ್ತಿವೆ. ಈ ಪ್ರಕರಣದಲ್ಲಿ ಬಂಧಿತನಾಗಿರುವ ಮುಜಮ್ಮಿಲ್ ಗನೈ ಎಂಬ ಆರೋಪಿಗೆ ಅತ್ಯಂತ ಆತ್ಮೀಯ ವ್ಯಕ್ತಿಯೆಂದು ಈವರೆಗೆ “ಗೆಳತಿ” ಎಂದು ಪರಿಚಯಿಸಲಾಗುತ್ತಿದ್ದ ಡಾ. ಶಾಹೀನ್ ಶಾಹಿದ್ ನಿಜವಾಗಿಯೂ ಅವನ ಪತ್ನಿ ಎಂಬ ಸತ್ಯ ಸಂಗತಿ ಈಗ ಬಯಲಾಗಿದೆ.

ವಿಚಾರಣೆಯಲ್ಲಿ ಮುಜಮ್ಮಿಲ್ ನೀಡಿದ ಮಾಹಿತಿ ಪ್ರಕಾರ, ಇಬ್ಬರೂ 2023ರ ಸೆಪ್ಟೆಂಬರ್‌ನಲ್ಲಿ ಔಪಚಾರಿಕವಾಗಿ ನಿಕಾಹ್ ಮಾಡಿಕೊಂಡಿದ್ದಾರೆ. ಫರಿದಾಬಾದ್‌ನಲ್ಲಿರುವ ಅಲ್-ಫಲಾಹ್ ವಿಶ್ವವಿದ್ಯಾಲಯದ ಬಳಿಯ ಮಸೀದಿಯಲ್ಲಿ ಈ ಧಾರ್ಮಿಕ ಕಾರ್ಯ ನಡೆದಿದೆ. ಷರಿಯಾ ನಿಯಮದಂತೆ ಕೇವಲ 5-6 ಸಾವಿರ ರೂಪಾಯಿ ಮೆಹರ್ ನಿಗದಿಪಡಿಸಲಾಗಿತ್ತು.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ದಾಖಲೆಗಳ ಪ್ರಕಾರ, ಡಾ. ಶಾಹೀನ್ ಜೈಶ್-ಎ-ಮೊಹಮ್ಮದ್ (JeM) ಮಾಡ್ಯೂಲ್‌ಗೆ ಸುಮಾರು 27-28ಲಕ್ಷ ರೂಪಾಯಿ ಹಣ ವರ್ಗಾವಣೆ ಮಾಡಿದ್ದಾಳೆ ಎಂಬ ಶಂಕೆ ವ್ಯಕ್ತವಾಗಿದೆ. ಇದರಲ್ಲಿ 2023ರಲ್ಲಿ ಶಸ್ತ್ರಾಸ್ತ್ರ ಖರೀದಿಗೆ ಮುಜಮ್ಮಿಲ್‌ಗೆ 6.5 ಲಕ್ಷ ರೂ., 2024ರಲ್ಲಿ ಸ್ಫೋಟದಲ್ಲಿ ಬಳಸಿದ ಫೋರ್ಡ್ ಇಕೋಸ್ಪೋರ್ಟ್ ಕಾರು ಖರೀದಿಗೆ ಮತ್ತೊಬ್ಬ ಆರೋಪಿ ಉಮರ್ ಉನ್ ನಬಿಗೆ 3 ಲಕ್ಷ ರೂ. ಸಾಲ ನೀಡಿರುವುದು ಸೇರಿದೆ.

ತನಿಖಾಧಿಕಾರಿಗಳ ಪ್ರಶ್ನೆಗೆ ಡಾ. ಶಾಹೀನ್ “ಇದೆಲ್ಲ ಜಕಾತ್ (ಧಾರ್ಮಿಕ ದಾನ)” ಎಂದು ಹೇಳಿಕೊಂಡಿದ್ದಾಳೆ. ಆದರೆ ಆ ಹಣ ಎಲ್ಲಿಗೆ ಹೋಯಿತು ಎಂಬುದು ಈಗ ಸ್ಪಷ್ಟವಾಗುತ್ತಿದೆ. ನೇರವಾಗಿ ಉಗ್ರರ ಕೈ ಸೇರಿದೆ ಎಂದು ಸ್ಪಷ್ಟವಾಗುತ್ತಿದೆ.

ಈ ಪ್ರಕರಣದಲ್ಲಿ ಇತ್ತೀಚೆಗೆ ಫರಿದಾಬಾದ್‌ನ ಧೌಜ್ ನಿವಾಸಿ ಸೋಯಾಬ್ ಕೂಡ ಬಂಧನಕ್ಕೆ ಒಳಗಾಗಿದ್ದಾನೆ. ಸ್ಫೋಟಕ ದಾಳಿಯ ಮುನ್ನವೇ ಬಾಂಬರ್ ಉಮರ್‌ಗೆ ಆಶ್ರಯ ಮತ್ತು ಲಾಜಿಸ್ಟಿಕ್ ಬೆಂಬಲ ನೀಡಿದ ಆರೋಪ ಅವನ ಮೇಲಿದೆ.

ಎನ್‌ಐಎ ಈಗ ದೇಶದಾದ್ಯಂತ ದಾಳಿ ನಡೆಸುತ್ತಿದೆ. ದಕ್ಷಿಣ ಕಾಶ್ಮೀರದಲ್ಲಿ 2016ರಿಂದಲೂ ಸಕ್ರಿಯವಾಗಿರುವ ಶಸ್ತ್ರಾಸ್ತ್ರ ಸಾಗಾಟ ಮಾಡ್ಯೂಲ್‌ಗಳ ಮೇಲೆ ಕಣ್ಣಿಟ್ಟಿದೆ. ಬಾರಾಮುಲ್ಲಾ, ಶ್ರೀನಗರ, ಅನಂತ್‌ನಾಗ್, ಗಂಡರ್‌ಬಾಲ್ ಪ್ರದೇಶಗಳಲ್ಲಿರುವ ಈ ಜಾಲಗಳು ಪಾಕಿಸ್ತಾನ ಮೂಲದ ಹ್ಯಾಂಡ್ಲರ್‌ಗಳ ಆದೇಶದ ಮೇಲೆ ಕೆಲಸ ಮಾಡುತ್ತಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಮುಖ್ಯವಾಗಿ, ಮುಜಮ್ಮಿಲ್ ಮತ್ತು ಉಮರ್ ಬಳಸಿದ ಆಕ್ರಮಣಕಾರಿ ಶಸ್ತ್ರಾಸ್ತ್ರಗಳನ್ನು ಇದೇ ಜಾಲ ಪೂರೈಕೆ ಮಾಡುತ್ತಿತ್ತು ಎಂಬ ಅನುಮಾನ ಮೂಡಿದೆ. ಈ ಎಲ್ಲ ಲಿಂಕ್‌ಗಳನ್ನು ಒಡೆಯುವಲ್ಲಿ ಎನ್‌ಐಎ ತೀವ್ರ ಶ್ರಮ ವಹಿಸಿದೆ.

Exit mobile version