ಸ್ಟ್ಯಾಂಡ್ ಅಪ್ ಕಾಮಿಡಿಯನ್ ಕುನಾಲ್ ಕಾಮ್ರಾ ಮತ್ತೊಮ್ಮೆ ದೊಡ್ಡ ವಿವಾದಕ್ಕೆ ಗುರಿಯಾಗಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಎಂದು ಬರೆದಿರುವ ಟೀ-ಶರ್ಟ್ ಮೇಲೆ ನಾಯಿ ಮೂತ್ರ ವಿಸರ್ಜನೆ ಮಾಡುತ್ತಿರುವ ಚಿತ್ರವನ್ನು ಪ್ರಿಂಟ್ ಮಾಡಿಸಿ ಧರಿಸಿರುವ ಫೋಟೋವನ್ನು ಕುನಾಲ್ ಸ್ವತಃ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಕುನಾಲ್ ತಮ್ಮ ಎಕ್ಸ್ ಖಾತೆಯಲ್ಲಿ ಈ ಫೋಟೋ ಹಾಕಿ “ಇದು ಸ್ಟ್ಯಾಂಡ್ ಅಪ್ ಕಾಮಿಡಿ ಕಾರ್ಯಕ್ರಮ ಅಲ್ಲ” ಎಂದು ಕ್ಯಾಪ್ಷನ್ ಬರೆದಿದ್ದಾರೆ. RSS ಎಂಬ ಅಕ್ಷರಗಳ ಮೇಲೆ ನಾಯಿ ಮೂತ್ರ ಮಾಡುತ್ತಿರುವ ಚಿತ್ರವನ್ನು ಟೀ-ಶರ್ಟ್‌ಗೆ ಪ್ರಿಂಟ್ ಮಾಡಿಸಿಕೊಂಡು ಧರಿಸಿರುವುದು ಸಂಘ ಪರಿವಾರ ಮತ್ತು ಲಕ್ಷಾಂತರ ಸ್ವಯಂಸೇವಕರಿಗೆ ತೀವ್ರ ಅವಮಾನ ಎಂದು ಆರೋಪಿಸಲಾಗುತ್ತಿದೆ.
Not Clicked at a comedy club ❤️❤️❤️ pic.twitter.com/pV7P83jgEn
— Kunal Kamra (@kunalkamra88) November 24, 2025
ಬಿಜೆಪಿ-ಶಿವಸೇನೆಯಿಂದ ತೀವ್ರ ಆಕ್ರೋಶ:
ಮಹಾರಾಷ್ಟ್ರದ ಹಿರಿಯ ಬಿಜೆಪಿ ನಾಯಕ ಮತ್ತು ಸಚಿವ ಚಂದ್ರಶೇಖರ್ ಬವಾಂಕುಲೆ ಪ್ರತಿಕ್ರಿಯಿಸಿ, “ಇದು ತೀರಾ ಆಕ್ಷೇಪಾರ್ಹ ಮತ್ತು ಅವಮಾನಕಾರಿ. ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಈ ರೀತಿ ಅವಮಾನಿಸುವುದು ಸಹಿಸಲಾಗದ್ದು. ಸಾಮಾಜಿಕ ಮಾಧ್ಯಮದಲ್ಲಿ ಇಂತಹ ವಿಷಯ ಹಂಚಿಕೊಂಡವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ.
ಶಿವಸೇನಾ ಸಚಿವ ಸಂಜಯ್ ಶಿರ್ಸಾತ್ ಕೂಡ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, “ಕುನಾಲ್ ಕಾಮ್ರಾ ಈ ಹಿಂದೆ ಪ್ರಧಾನಿ ಮೋದಿಯವರನ್ನು, ಏಕನಾಥ್ ಶಿಂಧೆಯವರನ್ನು ಟೀಕಿಸಿದ್ದರು. ಆಗ ಶಿವಸೇನೆ ಸರಿಯಾಗಿ ಉತ್ತರ ನೀಡಿತ್ತು. ಈಗ RSS ಮೇಲೆ ದಾಳಿ ಮಾಡುವ ಧೈರ್ಯ ಮಾಡಿದ್ದಾರೆ. RSS ಇದಕ್ಕೆ ಸೂಕ್ತ ಉತ್ತರ ನೀಡಬೇಕು” ಎಂದು ಹೇಳಿದ್ದಾರೆ.
ಕುನಾಲ್ ಕಾಮ್ರಾ ಈ ಹಿಂದೆಯೂ ವಿವಾದಕ್ಕೆ ಕಾರಣರಾಗಿದ್ದರು:
ಕುನಾಲ್ ಕಾಮ್ರಾ ಈಗಾಗಲೇ ಹಲವು ಬಾರಿ ರಾಜಕೀಯ ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ವಿವಾದಕ್ಕೆ ಗುರಿಯಾಗಿದ್ದಾರೆ:
- 2020ರಲ್ಲಿ ವಿಮಾನದಲ್ಲಿ ಅರ್ನಾಬ್ ಗೋಸ್ವಾಮಿಯವರನ್ನು ಪ್ರಶ್ನಿಸಿ ವಿಡಿಯೋ ಮಾಡಿದ್ದರು.
- ಪ್ರಧಾನಿ ನರೇಂದ್ರ ಮೋದಿ ಮತ್ತು ಉಪಮುಖ್ಯಮಂತ್ರಿ ಏಕನಾಥ್ ಶಿಂಧೆಯವರನ್ನು ಟೀಕಿಸಿ ಹಲವು ಬಾರಿ ಟ್ರೋಲ್ ಆಗಿದ್ದರು.
- ಶಿಂಧೆಯವರ ರಾಜಕೀಯ ವೃತ್ತಿಜೀವನವನ್ನು ಹಿಂದಿ ಚಲನಚಿತ್ರದ ಹಾಡಿಗೆ ಹೋಲಿಸಿ ಹಾಸ್ಯ ಮಾಡಿದ್ದಕ್ಕೆ ಶಿವಸೇನಾ ಕಾರ್ಯಕರ್ತರು ಮುಂಬೈಯ ಹ್ಯಾಬಿಟಾಟ್ ಕಾಮಿಡಿ ಕ್ಲಬ್ ಮತ್ತು ಹೋಟೆಲ್‌ಗಳನ್ನು ಧ್ವಂಸಗೊಳಿಸಿದ್ದರು.





