ನವದೆಹಲಿ: ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಮೂಡಿಸಿದ್ದ ಡಿಜಿಟಲ್ ರಾಜಕೀಯ ಚಳವಳಿ “ಕಾಕ್ರೋಚ್ ಜನತಾ ಪಾರ್ಟಿ” (Cockroach Janata Party – CJP) ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಯುವಜನರ ಅಸಮಾಧಾನ, ರಾಜಕೀಯ ವ್ಯಂಗ್ಯ ಹಾಗೂ ಮೀಮ್ ಸಂಸ್ಕೃತಿಗೆ ಹೊಸ ರೂಪ ನೀಡಿದ್ದ ಈ ಆನ್‌ಲೈನ್ ಅಭಿಯಾನದ ಅಧಿಕೃತ ‘X’ (ಹಳೆ ಟ್ವಿಟರ್) ಖಾತೆಯನ್ನು ಭಾರತದಲ್ಲಿ ಸದ್ದಿಲ್ಲದೆ ತಡೆಹಿಡಿಯಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.
ದೇಶದ ಮುಖ್ಯ ನ್ಯಾಯಮೂರ್ತಿಗಳು (CJI) ಯುವಜನರ ಸಮಸ್ಯೆಗಳ ಕುರಿತಾಗಿ ನೀಡಿದ್ದ ಇತ್ತೀಚಿನ ಹೇಳಿಕೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ವಿರುದ್ಧ ತೀವ್ರ ಚರ್ಚೆಗಳು ಆರಂಭವಾಗಿದ್ದವು. ಇದೇ ಸಮಯದಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ ಎಂಬ ಹೆಸರಿನ ಮೀಮ್ ಆಧಾರಿತ ಡಿಜಿಟಲ್ ಅಭಿಯಾನ ಯುವಕರಲ್ಲಿ ಅಪಾರ ಜನಪ್ರಿಯತೆ ಪಡೆದುಕೊಂಡಿತ್ತು. ರಾಜಕೀಯ ವ್ಯಂಗ್ಯ, ಹಾಸ್ಯ, ಸಿಸ್ಟಮ್ ವಿರುದ್ಧದ ಕಟು ಟೀಕೆ ಹಾಗೂ ಕ್ರಿಯೇಟಿವ್ ರೀಲ್ಸ್ ಮೂಲಕ ಈ ಪೇಜ್ ಕ್ಷಣಾರ್ಧದಲ್ಲಿ ವೈರಲ್ ಆಗಿತ್ತು.
ಕೇವಲ ಮನರಂಜನೆಗಾಗಿ ಆರಂಭವಾದ ಈ ಪೇಜ್, ಕೆಲವೇ ದಿನಗಳಲ್ಲಿ ದೇಶದ ದೊಡ್ಡ ರಾಜಕೀಯ ಪಕ್ಷಗಳ ಸಾಮಾಜಿಕ ಜಾಲತಾಣವನ್ನೇ ಮೀರಿಸುವ ಮಟ್ಟಕ್ಕೆ ಬೆಳೆಯಿತು. ವಿಶೇಷವಾಗಿ ಇನ್‌ಸ್ಟಾಗ್ರಾಮ್‌ನಲ್ಲಿ “@cockroachjantaparty” ಖಾತೆ ಆರಂಭವಾದ ಐದು ದಿನಗಳಲ್ಲೇ 1 ಕೋಟಿಗೂ ಹೆಚ್ಚು ಫಾಲೋವರ್ಸ್ ಪಡೆದು ದಾಖಲೆ ನಿರ್ಮಿಸಿತು. ಇದರೊಂದಿಗೆ ಆಡಳಿತಾರೂಢ ಭಾರತೀಯ ಜನತಾ ಪಾರ್ಟಿಯ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯ ಫಾಲೋವರ್ಸ್ ಸಂಖ್ಯೆಯನ್ನೂ ಇದು ಹಿಂದಿಕ್ಕಿದಂತಾಯಿತು.
ಪ್ರಸ್ತುತ ಲಭ್ಯ ಮಾಹಿತಿಯ ಪ್ರಕಾರ, ಕಾಂಗ್ರೆಸ್ ಪಕ್ಷದ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಗೆ ಸುಮಾರು 13.2 ಮಿಲಿಯನ್ ಫಾಲೋವರ್ಸ್ ಇದ್ದರೆ, ಕಾಕ್ರೋಚ್ ಜನತಾ ಪಾರ್ಟಿ 10 ಮಿಲಿಯನ್ ಗಡಿ ದಾಟಿತ್ತು. ಬಿಜೆಪಿ ಖಾತೆಗೆ ಸುಮಾರು 8.7 ಮಿಲಿಯನ್ ಹಾಗೂ ಆಮ್ ಆದ್ಮಿ ಪಾರ್ಟಿಗೆ ಸುಮಾರು 1.9 ಮಿಲಿಯನ್ ಫಾಲೋವರ್ಸ್ ಇದ್ದಾರೆ ಎನ್ನಲಾಗಿದೆ.
ಈ ಚಳವಳಿಯ ವಿಶೇಷತೆ ಎಂದರೆ, ಇದಕ್ಕೆ ಯಾವುದೇ ಸಾಂಪ್ರದಾಯಿಕ ರಾಜಕೀಯ ಸಂಘಟನೆ ಅಥವಾ ನೆಲಮಟ್ಟದ ಪ್ರಚಾರ ಇರಲಿಲ್ಲ. ಬದಲಾಗಿ, ಯುವಜನರ ಮನಸ್ಸಿನಲ್ಲಿದ್ದ ಅಸಮಾಧಾನವನ್ನು ಮೀಮ್ ಮತ್ತು ವ್ಯಂಗ್ಯದ ಮೂಲಕ ಹೊರಹಾಕುವ ವೇದಿಕೆಯಾಗಿ ಇದು ರೂಪುಗೊಂಡಿತ್ತು. ನಿರುದ್ಯೋಗ, ಬೆಲೆ ಏರಿಕೆ, ಸಾಮಾಜಿಕ ಅಸಮಾನತೆ, ರಾಜಕೀಯ ಪ್ರಚಾರ ಹಾಗೂ ಆಡಳಿತ ವ್ಯವಸ್ಥೆಯ ವಿರುದ್ಧದ ಅಸಮಾಧಾನವನ್ನು ಅನೇಕರು ಈ ಪೇಜ್ ಮೂಲಕ ವ್ಯಕ್ತಪಡಿಸುತ್ತಿದ್ದರು.
ಇದರ ಜನಪ್ರಿಯತೆ ಹೆಚ್ಚಾಗುತ್ತಿದ್ದಂತೆ ಹಲವು ಸಾರ್ವಜನಿಕ ವ್ಯಕ್ತಿಗಳ ಗಮನವೂ ಇದರತ್ತ ಹರಿದಿತ್ತು. ಜನಪ್ರಿಯ ಯೂಟ್ಯೂಬರ್ ಧ್ರುವ್ ರಾಠಿ, ಹಿರಿಯ ವಕೀಲ ಪ್ರಶಾಂತ್ ಭೂಷಣ್ ಹಾಗೂ ಸಂಸದೆ ಮಹುವಾ ಮೊಯಿತ್ರಾ ಸೇರಿದಂತೆ ಅನೇಕರು ಈ ಟ್ರೆಂಡ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದ್ದರು.
ಆದರೆ ಈಗ CJP ಯ ಅಧಿಕೃತ ‘X’ ಖಾತೆ ಭಾರತದಲ್ಲಿ “withheld” ಆಗಿರುವುದು ಹೊಸ ಚರ್ಚೆಗೆ ಕಾರಣವಾಗಿದೆ. ಖಾತೆ ತಡೆಹಿಡಿಯಲು ನಿಖರ ಕಾರಣವೇನು ಎಂಬುದರ ಕುರಿತು ಇನ್ನೂ ಅಧಿಕೃತ ಸ್ಪಷ್ಟನೆ ಹೊರಬಂದಿಲ್ಲ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಇದನ್ನು ಅಭಿವ್ಯಕ್ತಿ ಸ್ವಾತಂತ್ರ್ಯ, ಡಿಜಿಟಲ್ ರಾಜಕೀಯ ಹಾಗೂ ಮೀಮ್ ಸಂಸ್ಕೃತಿಯ ಮೇಲಿನ ನಿಯಂತ್ರಣದ ಭಾಗವೆಂದು ಕೆಲವರು ವಿಶ್ಲೇಷಿಸುತ್ತಿದ್ದಾರೆ.
