ನವದೆಹಲಿ: ಸುಪ್ರೀಂ ಕೋರ್ಟ್‌ನಲ್ಲಿ ವಕೀಲರೊಬ್ಬರು ಭಾರತದ ಮುಖ್ಯ ನ್ಯಾಯಮೂರ್ತಿ ಮೇಲೆ ಶೂ ಎಸೆದ ಘಟನೆ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಮೊದಲ ಬಾರಿಗೆ ಮೌನ ಮುರಿದು ಮಾತನಾಡಿದ (ಸಿಜೆಐ) ಬಿ.ಆರ್. ಗವಾಯಿ, ಇದು ಆಘಾತಖಾರಿ ಘಟನೆಯಾಗಿದೆ ಆದರೆ ಅದು ಮಗಿದು ಹೋದ ಅಧ್ಯಾಯ ಎಂದು ಪ್ರತಿಕ್ರಿಯಿಸಿದ್ದಾರೆ
ಕೆಲ ದಿನಗಳ ಹಿಂದೆ ನಡೆದ ಈ ಘಟನೆಯಲ್ಲಿ, ಸಿಜೆಐ ಗವಾಯಿ ಅವರು ನೇತೃತ್ವ ವಹಿಸಿದ್ದ ಪೀಠದ ಮುಂದೆ ಪ್ರಕರಣಗಳನ್ನು ವಾದಮಂಡನೆ ನಡೆಯುತ್ತಿದ್ದ ಸಮಯದಲ್ಲಿ, ಒಬ್ಬ ವಕೀಲರು ಪೀಠದ ವೇದಿಕೆಯ ಬಳಿಗೆ ಹೋಗಿ ನ್ಯಾಯಮೂರ್ತಿ ಗವಾಯಿ ಅವರ ದಿಕ್ಕಿಗೆ ತಮ್ಮ ಬೂಟು ಎಸೆಯಲು ಪ್ರಯತ್ನಿಸಿದರು. ಘಟನೆಯ ಸಮಯದಲ್ಲಿ ನ್ಯಾಯಾಲಯದಲ್ಲಿದ್ದ ಭದ್ರತಾ ಸಿಬ್ಬಂದಿ ತಕ್ಷಣವೇ ಹಸ್ತಕ್ಷೇಪ ಮಾಡಿ ಆ ವಕೀಲರನ್ನು ಬಂಧಿಸಿದರು ಮತ್ತು ನ್ಯಾಯಾಲಯದಿಂದ ಹೊರಗೆ ಕರೆದುಕೊಂಡು ಹೋದರು. ವಕೀಲರನ್ನು ಹೊರ ಕರೆದುಕೊಂಡು ಹೋಗುವಾಗ, ಅವರು “ಸನಾತನ ಧರ್ಮದ ಅವಮಾನವನ್ನು ಭಾರತ ಸಹಿಸುವುದಿಲ್ಲ” ಎಂದು ಹೇಳಿದ್ದರು.
ಈ ಘಟನೆಯು ಖಜುರಾಹೋದಲ್ಲಿ ಭಗವಾನ್ ವಿಷ್ಣುವಿನ ಶಿರಚ್ಛೇದದ ಪ್ರತಿಮೆಯ ಪುನಃಸ್ಥಾಪನೆಗೆ ಸಂಬಂಧಿಸಿದ ಪ್ರಕರಣವನ್ನು ಸಿಜೆಐ ಗವಾಯಿ ಅವರ ಪೀಠ ವಿಚಾರಣೆ ನಡೆಸುತ್ತಿದ್ದ ಸಮಯದಲ್ಲಿ ಸಂಭವಿಸಿತು. ಸಿಜೆಐ ಗವಾಯಿ ಅವರು ಆ ಪ್ರಕರಣದಲ್ಲಿ ನೀಡಿದ ಹೇಳಿಕೆಗಳೇ ಈ ಹಿಂಸಾತ್ಮಕ ಘಟನೆಗೆ ಕಾರಣವಾಗಿರಬಹುದೆಂದು ಅಂದಾಜಿಸಲಾಗಿದೆ. ಆದರೆ, ಘಟನೆಯ ನಂತರ ಸಿಜೆಐ ಗವಾಯಿ ಅವರು ಶಾಂತವಾಗಿ ವರ್ತಿಸಿ, ಇದೆಲ್ಲದರಿಂದ ವಿಚಲಿತರಾಗುವ ಅಗತ್ಯವಿಲ್ಲ. ನಾನು ಇದರಿಂದ ವಿಚಲಿತರಾಗುವುದಿಲ್ಲ. ಇಂತಹ ವಿಷಯಗಳು ನನ್ನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿ, ವಕೀಲರು ತಮ್ಮ ವಾದಗಳನ್ನು ಮುಂದುವರೆಸಲು ಅನುಮತಿ ನೀಡಿದರು.
ಈ ಘಟನೆಯ ನಂತರ ಸೋಮವಾರ ಸುಪ್ರೀಂ ಕೋರ್ಟ್ನಲ್ಲಿ ಸಿಜೆಐ ಗವಾಯಿ ಅವರು ಮಾತನಾಡಿದಾಗ ಸೋಮವಾರ ನಡೆದ ಘಟನೆಯಿಂದ ನನಗೆ ಹಾಗೂ ಸಹೋದ್ಯೋಗಿಗಳಿಗೆ ತುಂಬಾ ಆಘಾತವಾಗಿದೆ. ಆದರೆ ಅದು ಈಗ ಮುಗಿದು ಹೋದ ಘಟನೆಯಾಗಿದೆ ಎಂದು ಹೇಳಿದ್ದಾರೆ
ಈ ಘಟನೆಯು ನ್ಯಾಯಾಂಗ ವಲಯದಲ್ಲಿ ತೀವ್ರ ಪ್ರತಿಕ್ರಿಯೆಗೆ ಕಾರಣವಾಗಿದೆ. ಘಟನೆಯ ಸಮಯದಲ್ಲಿ ಸಿಜೆಐ ಗವಾಯಿ ಅವರ ಪಕ್ಕದಲ್ಲಿ ಕುಳಿತಿದ್ದ ನ್ಯಾಯಮೂರ್ತಿ ಉಜ್ವಲ್ ಭುಯಾನ್ ಅವರು ಈ ವರ್ತನೆಯನ್ನು ತೀಕ್ಷ್ಮವಾಗಿ ಖಂಡಿಸಿದ್ದಾರೆ. ಅವರು, “ಭಾರತದ ಮುಖ್ಯ ನ್ಯಾಯಮೂರ್ತಿ ಅವರ ಕಡೆ ಶೂ ಎಸೆದಿರುವ ಘಟನೆ ನಿಜಕ್ಕೂ ಗಂಭೀರವಾದ ವಿಚಾರವಾಗಿದೆ. ಇದನ್ನ ತಮಾಷೆಯಾಗಿ ಪರಿಗಣಿಸಲು ಆಗುವುದಿಲ್ಲ. ಬಹಳಷ್ಟು ವರ್ಷಗಳ ಅಪಾರ ಅನುಭವ ಹೊಂದಿರುವ ಅವರಿಗೆ ಹಾಗೂ ಭಾರತದ ನ್ಯಾಯ ವ್ಯವಸ್ಥೆಗೆ ನಾವೆಲ್ಲರು ಗೌರವ ಕೊಡಬೇಕು, ಅದು ನಮ್ಮ ಆದ್ಯ ಕರ್ತವ್ಯ ಆಗಿದೆ. ಯಾವುದೇ ಕಾರಣಕ್ಕೂ ಈ ಘಟನೆಯನ್ನ ಹಗುರವಾಗಿ ಪರಿಗಣಿಸಬಾರದು ಎಂದು ಹೇಳಿದ್ದಾರೆ.





