4 ವರ್ಷದೊಳಗಿನ ಮಕ್ಕಳಿಗೆ ಶೀತ-ಕೆಮ್ಮಿನ ಈ ಮೆಡಿಸಿನ್ ನಿಷೇಧ: ಕೇಂದ್ರದಿಂದ ಮಹತ್ವದ ಆದೇಶ

ಬೆಂಗಳೂರಿನಲ್ಲಿ ಮಂಗಳಮುಖಿ (10)

ನವದೆಹಲಿ: ಮಕ್ಕಳ ಆರೋಗ್ಯದ ದೃಷ್ಟಿಯಿಂದ ಕೇಂದ್ರ ಸರ್ಕಾರವು ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ನಾಲ್ಕು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕ್ಲೋರ್ಫೆನಿರಮೈನ್ ಮೇಲೀಯೇಟ್ ಮತ್ತು ಫಿನೈಲೈನ್ ಹೈಡೋಕ್ಲೋರೈಡ್ (Chlorpheniramine maleate and Phenylephrine Hydrochloride) ರಾಸಾಯನಿಕ ಸಂಯೋಜನೆ ಹೊಂದಿರುವ ಕಾಂಬಿನೇಷನ್ ಸಿರಪ್ (Syrup) ಹಾಗೂ ಮಾತ್ರೆಗಳನ್ನು (Tablets) ನೀಡಬಾರದು ಎಂದು ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ತಜ್ಞರ ಸಮಿತಿ ಹಾಗೂ ಡ್ರಗ್ಸ್ ತಾಂತ್ರಿಕ ಸಲಹಾ ಮಂಡಳಿಯ (DTAB) ಶಿಫಾರಸುಗಳನ್ನು ಆಧರಿಸಿ ಕೇಂದ್ರ ಆರೋಗ್ಯ ಸಚಿವಾಲಯ ಈ ಮಹತ್ವದ ಆದೇಶವನ್ನು ಹೊರಡಿಸಿದೆ.

ಮಕ್ಕಳ ಆರೋಗ್ಯದ ಮೇಲಾಗುವ ಸಂಭಾವ್ಯ ಅಪಾಯಗಳನ್ನು ತಡೆಯುವ ನಿಟ್ಟಿನಲ್ಲಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆ 1940ರ ಸೆಕ್ಷನ್ 26A ಅಡಿಯಲ್ಲಿ ಈ ಆದೇಶವನ್ನು ಹೊರಡಿಸಲಾಗಿದ್ದು, ಎಲ್ಲಾ ಔಷಧ ತಯಾರಕ ಕಂಪನಿಗಳಿಗೆ ಇದು ಕಡ್ಡಾಯವಾಗಿ ಅನ್ವಯಿಸುತ್ತದೆ. ಈ ಔಷಧಗಳನ್ನು ಈಗಾಗಲೇ ಮಾರುಕಟ್ಟೆಯಲ್ಲಿರುವವಕ್ಕೂ ಈ ನಿಯಮವು ಅನ್ವಯವಾಗಲಿದೆ.

ಏನಿದು FDC ಔಷಧ ಮತ್ತು ಅದರ ಅಪಾಯ?

ಫಿಕ್ಸ್ ಡೋಸ್ ಕಾಂಬಿನೇಷನ್ (FDC) ಎಂದರೆ ಎರಡು ಅಥವಾ ಒಂದಕ್ಕಿಂತ ಹೆಚ್ಚು ಸಕ್ರಿಯ ಔಷಧೀಯ ಪದಾರ್ಥಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಸೇರಿಸಿ ಒಂದೇ ಸಿರಪ್ ಅಥವಾ ಮಾತ್ರೆಯ ರೂಪದಲ್ಲಿ ತಯಾರಿಸುವ ಔಷಧವಾಗಿದೆ. ಸಾಮಾನ್ಯವಾಗಿ ಮಕ್ಕಳಿಗೆ ಬರುವ ಶೀತ, ಕೆಮ್ಮು ಮತ್ತು ಜ್ವರದ ಪರಿಹಾರಕ್ಕಾಗಿ ಈ ರೀತಿಯ FDC ಔಷಧಗಳನ್ನು ವೈದ್ಯರು ನೀಡುತ್ತಿದ್ದರು. ಆದರೆ ನಾಲ್ಕು ವರ್ಷದೊಳಗಿನ ಮಕ್ಕಳಿಗೆ ಈ ರಾಸಾಯನಿಕ ಸಂಯೋಜನೆಯ ಔಷಧಗಳು ಅಪಾಯವನ್ನು ತಂದೊಡ್ಡಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.

ಕ್ಲೋರ್ಫೆನಿರಮೈನ್ ಮೇಲೀಯೇಟ್ ಮತ್ತು ಫಿನೈಲೈನ್ ಹೈಡೋಕ್ಲೋರೈಡ್ ಸಂಯೋಜನೆಯು ಮಕ್ಕಳಲ್ಲಿ ಹೃದಯ ಬಡಿತದಲ್ಲಿ ಬದಲಾವಣೆ, ಅತಿಯಾದ ನಿದ್ರಾಜನಕ, ತಲೆಸುತ್ತು, ವಾಕರಿಕೆ, ಮತ್ತು ಇತರ ಗಂಭೀರ ಅಡ್ಡಪರಿಣಾಮಗಳನ್ನು ಉಂಟುಮಾಡಬಹುದು. ಈ ವಯಸ್ಸಿನ ಮಕ್ಕಳಿಗೆ ಇದಕ್ಕಿಂತಲೂ ಸುರಕ್ಷಿತವಾದ ಪರ್ಯಾಯ ಔಷಧಗಳು ಲಭ್ಯವಿರುವುದರಿಂದ, ಅಪಾಯಕಾರಿ ಕಾಂಬಿನೇಷನ್ ಬಳಕೆಯನ್ನು ತಕ್ಷಣವೇ ತಡೆಯಲು ಸರ್ಕಾರ ನಿರ್ಧರಿಸಿದೆ.


ಕಂಪನಿಗಳಿಗೆ ಸ್ಪಷ್ಟ ನಿರ್ದೇಶನ

ಇದರೊಂದಿಗೆ ದೇಶದ ಎಲ್ಲಾ ಔಷಧ ತಯಾರಿಕಾ ಕಂಪನಿಗಳಿಗೆ (Pharmaceutical Companies) ಸರ್ಕಾರ ಸ್ಪಷ್ಟ ಹಾಗೂ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಈ ರಾಸಾಯನಿಕ ಸಂಯೋಜನೆ ಹೊಂದಿರುವ ಪ್ರತಿಯೊಂದು ಔಷಧದ ಪ್ಯಾಕೇಜಿಂಗ್, ಬಾಕ್ಸ್ ಒಳಗಿರುವ ಮಾಹಿತಿ ಪತ್ರ (Package Insert) ಹಾಗೂ ಜಾಹೀರಾತುಗಳಲ್ಲಿ “ಈ ಔಷಧವನ್ನು 4 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನೀಡಬಾರದು” ಎಂಬ ಎಚ್ಚರಿಕೆಯ ಸಂದೇಶವನ್ನು ಪ್ರಮುಖವಾಗಿ ಮುದ್ರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಇದಕ್ಕೂ ಮೊದಲು 2025ರ ಏಪ್ರಿಲ್ 15ರಂದು ಕೇಂದ್ರ ಸರ್ಕಾರ ಕೆಲವು ಸೀಮಿತ FDC ಔಷಧಗಳ ಮೇಲೆ ಇಂತಹ ಎಚ್ಚರಿಕೆ ಮುದ್ರಿಸುವುದನ್ನು ನಿಯಮ ಮಾಡಿತ್ತು. ಆದರೆ ಈಗ ಹೊರಡಿಸಿರುವ ಹೊಸ ಆದೇಶದ ಪ್ರಕಾರ, ಈ ನಿರ್ದಿಷ್ಟ ಸಂಯೋಜನೆ ಹೊಂದಿರುವ ಎಲ್ಲಾ FDC ಔಷಧಗಳಿಗೂ ಈ ನಿಯಮ ಅನ್ವಯವಾಗಲಿದ್ದು, ಔಷಧ ಕಂಪನಿಗಳು ತಕ್ಷಣವೇ ಈ ಹೊಸ ಮಾನದಂಡಗಳನ್ನು ಪಾಲಿಸಬೇಕಾಗಿದೆ.

ಈ ಆದೇಶದ ಹಿನ್ನೆಲೆಯಲ್ಲಿ ಪಾಲಕರು ತಮ್ಮ 4 ವರ್ಷದೊಳಗಿನ ಮಕ್ಕಳಿಗೆ ಶೀತ-ಕೆಮ್ಮಿಗೆ ಯಾವುದೇ ಔಷಧವನ್ನು ಸ್ವಯಂ ಪ್ರಿಸ್ಕ್ರಿಪ್ಷನ್ ಮೂಲಕ ನೀಡದಿರುವುದು ಸೂಕ್ತ. ಯಾವುದೇ ಔಷಧವನ್ನು ನೀಡುವ ಮೊದಲು ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ. ಈ ಸಂಯೋಜನೆ ಹೊಂದಿರುವ ಔಷಧಗಳನ್ನು ಮಕ್ಕಳಿಗೆ ನೀಡದಂತೆ ವೈದ್ಯರಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. 

 

Exit mobile version