ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್‌ನಲ್ಲಿ ಮೊಬೈಲ್ ಪತ್ತೆಯಾದ ಪ್ರಕರಣ ಇದೀಗ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ. ಪ್ರಕರಣದಲ್ಲಿ ಜೈಲು ಅಧಿಕಾರಿಗಳ ಪಾತ್ರವೂ ಇರಬಹುದು ಎಂಬ ಸುಳಿವನ್ನು ಗೃಹ ಸಚಿವ ಪ್ರಿಯಾಂಕ್ ಖರ್ಗೆ ನೀಡಿದ್ದಾರೆ. ಈ ಕುರಿತು ಸಂಪೂರ್ಣ ತನಿಖೆ ನಡೆಯುತ್ತಿದ್ದು, ಮೊಬೈಲ್ ಜೈಲಿನೊಳಗೆ ಹೇಗೆ ಬಂತು ಮತ್ತು ಅದನ್ನು ಯಾರು ನೀಡಿದ್ದಾರೆ ಎಂಬುದು ತನಿಖೆಯಿಂದ ಬಯಲಾಗಲಿದೆ ಎಂದು ಅವರು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೋ ಕುರಿತು ಪ್ರತಿಕ್ರಿಯಿಸಿದರು. ಆ ವೀಡಿಯೋ 2025ರ ಡಿಸೆಂಬರ್‌ನದ್ದಾಗಿರಬಹುದು ಎಂದು ಅವರು ಹೇಳಿದ್ದಾರೆ. ಪ್ರಜ್ವಲ್ ರೇವಣ್ಣ ಅವರ ಸೆಲ್‌ಗೆ ಮಾತ್ರ ದಾಳಿ ನಡೆಸಲಾಗಿರಲಿಲ್ಲ. ಬದಲಾಗಿ ಇಡೀ ಜೈಲಿನ ಮೇಲೆ ದಾಳಿ ನಡೆಸಲಾಗಿತ್ತು ಎಂದು ಸಚಿವರು ಸ್ಪಷ್ಟಪಡಿಸಿದರು.
ಪ್ರಕರಣದ ತನಿಖೆ ಈಗಾಗಲೇ ನಡೆಯುತ್ತಿದೆ. ಮೊಬೈಲ್ ಅನ್ನು ಜೈಲಿನೊಳಗೆ ಯಾರು ನೀಡಿದ್ದಾರೆ, ಅದಕ್ಕೆ ಯಾರಾದರೂ ಸಹಾಯ ಮಾಡಿದ್ದಾರೆಯೇ ಎಂಬುದನ್ನು ತನಿಖಾ ತಂಡ ಪರಿಶೀಲಿಸುತ್ತಿದೆ. ಈ ಪ್ರಕರಣದಲ್ಲಿ “ನಮ್ಮ ಅಧಿಕಾರಿಗಳ ಕೈವಾಡವೂ ಇದೆ” ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ..
ಜೈಲಿನ ಭದ್ರತಾ ವ್ಯವಸ್ಥೆಯಲ್ಲೇ ಒಳಗಿನವರ ಸಹಕಾರ ಇದ್ದರೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುತ್ತದೆ ಎಂದು ಸಚಿವರು ಸೂಚಿಸಿದ್ದಾರೆ. ಇದೇ ಸಂದರ್ಭದಲ್ಲಿ ಅವರು “ಬೇಲಿಯೇ ಎದ್ದು ಹೊಲ ಮೇಯ್ದರೆ ಹೇಗೆ?” ಎಂಬ ಮಾತಿನ ಮೂಲಕ ಜೈಲು ವ್ಯವಸ್ಥೆಯೊಳಗಿನ ಸಂಭಾವ್ಯ ಲೋಪದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜೈಲಿನೊಳಗೆ ಮೊಬೈಲ್ ಫೋನ್ ಪತ್ತೆಯಾಗಿರುವುದು ಭದ್ರತಾ ವ್ಯವಸ್ಥೆಯ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಜೈಲಿನಂತಹ ಅತ್ಯಂತ ಸುರಕ್ಷಿತ ಪ್ರದೇಶದಲ್ಲಿ ಕೈದಿಗಳಿಗೆ ಮೊಬೈಲ್ ತಲುಪಲು ಸಾಧ್ಯವಾಗಿರುವುದು ಹೇಗೆ ಎಂಬ ಪ್ರಶ್ನೆ ಪ್ರಮುಖವಾಗಿದೆ. ಜೈಲು ಸಿಬ್ಬಂದಿಯ ಪರಿಶೀಲನೆ, ಪ್ರವೇಶ-ನಿರ್ಗಮನ ನಿಯಂತ್ರಣ ಹಾಗೂ ಸಿಸಿಟಿವಿ ನಿಗಾ ವ್ಯವಸ್ಥೆಯ ಕಾರ್ಯವೈಖರಿಯನ್ನೂ ಅಧಿಕಾರಿಗಳು ಪರಿಶೀಲಿಸುವ ಸಾಧ್ಯತೆ ಇದೆ.
ಈ ನಡುವೆ ಜೈಲುಗಳ ಭದ್ರತೆಯನ್ನು ಮತ್ತಷ್ಟು ಬಲಪಡಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ರಾಜ್ಯದಲ್ಲಿ ಸುಮಾರು ₹20 ಕೋಟಿ ವೆಚ್ಚದಲ್ಲಿ AI ಆಧಾರಿತ ಕ್ಯಾಮೆರಾಗಳನ್ನು ಪಡೆಯಲಾಗಿದೆ ಎಂದು ಅವರು ತಿಳಿಸಿದರು. ಮುಂದಿನ ಹಂತದಲ್ಲಿ ಜೈಲುಗಳಲ್ಲಿ AI ಕ್ಯಾಮೆರಾಗಳನ್ನು ಅಳವಡಿಸುವ ಕಾರ್ಯ ಕೈಗೊಳ್ಳಲಾಗುವುದು ಎಂದು ಹೇಳಿದರು.
ಪ್ರಸ್ತುತ ವ್ಯವಸ್ಥೆಯಲ್ಲೇ ಕೆಲವು ನ್ಯೂನ್ಯತೆಗಳಿವೆ ಎಂಬುದನ್ನು ಸಚಿವರು ಒಪ್ಪಿಕೊಂಡಿದ್ದಾರೆ. ಈ ಲೋಪಗಳನ್ನು ಗುರುತಿಸಿ ಸರಿಪಡಿಸುವ ಅಗತ್ಯವಿದೆ. ಜೈಲಿನಲ್ಲಿ ಕೆಲವರಿಗೆ VVIP ಟ್ರೀಟ್‌ಮೆಂಟ್ ಸಿಕ್ಕಿರುವ ಆರೋಪಗಳೂ ಕೇಳಿಬಂದಿದ್ದು, ಇಂತಹ ವ್ಯವಸ್ಥೆಯನ್ನು ಸಂಪೂರ್ಣವಾಗಿ ತಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
