ಡಿಜಿಟಲ್ ಜೂಜಾಟಕ್ಕೆ ಬ್ರೇಕ್: 242 ಅಕ್ರಮ ಬೆಟ್ಟಿಂಗ್ ಸೈಟ್‌ಗಳನ್ನು ನಿರ್ಬಂಧಿಸಿದ ಕೇಂದ್ರ ಸರ್ಕಾರ

Untitled design 2026 01 16T223823.105

ನವದೆಹಲಿ:ಇತ್ತೀಚೆಗೆ ಆನ್ಲೈನ್‌ ಗೇಮಿಂಗ್‌ ಆಪ್‌ ಮೂಲಕ ಸಾಕಷ್ಟು ಜನರು ಅದರಲ್ಲೂ ಯುವಕರು ಹಣ ವ್ಯಯ ಮಾಡುತ್ತಿದ್ದಾರೆ. ಈ ಯುವಜನತೆಯನ್ನು ಆರ್ಥಿಕ ಸುಳಿಯಿಂದ ರಕ್ಷಿಸಲು ಮತ್ತು ಡಿಜಿಟಲ್ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರವು ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಮತ್ತು ಜೂಜಾಟದ ಸೈಟ್‌ಗಳ ವಿರುದ್ಧ ಕಾರ್ಯಾಚರಣೆಯನ್ನು ಚುರುಕುಗೊಳಿಸಿದೆ. ಇಂದು (ಜನವರಿ 16) ಹೊಸದಾಗಿ 242 ಅಕ್ರಮ ಸೈಟ್‌ಗಳ ಲಿಂಕ್‌ಗಳನ್ನು ಸರ್ಕಾರ ನಿರ್ಬಂಧಿಸಿದೆ.

ಕೇಂದ್ರ ಸರ್ಕಾರವು ಇದುವರೆಗೆ ದೇಶಾದ್ಯಂತ ಒಟ್ಟು 7,800ಕ್ಕೂ ಹೆಚ್ಚು ಅಕ್ರಮ ಜೂಜಾಟದ ವೆಬ್‌ಸೈಟ್‌ಗಳನ್ನು ಮತ್ತು ಆ್ಯಪ್‌ಗಳನ್ನು ನಿಷೇಧಿಸಿದೆ. 2022ರಿಂದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ಈ ಅಕ್ರಮ ಜಾಲವನ್ನು ಭೇದಿಸಲು ನಿರಂತರವಾಗಿ ಕೆಲಸ ಮಾಡುತ್ತಿದೆ. ಈ ಸೈಟ್‌ಗಳು ಕೇವಲ ಹಣಕಾಸಿನ ನಷ್ಟವನ್ನು ಉಂಟುಮಾಡುವುದಲ್ಲದೆ, ವೈಯಕ್ತಿಕ ಡೇಟಾ ಸೋರಿಕೆ ಮತ್ತು ಮಾನಸಿಕ ಒತ್ತಡಕ್ಕೂ ಕಾರಣವಾಗುತ್ತಿವೆ ಎಂದು ಸರ್ಕಾರ ಎಚ್ಚರಿಕೆ ನೀಡಿದೆ.

ಇತ್ತೀಚೆಗಷ್ಟೇ ಸಂಸತ್ತಿನಲ್ಲಿ ಅಂಗೀಕಾರಗೊಂಡು, ರಾಷ್ಟ್ರಪತಿಗಳ ಅಂಕಿತಕ್ಕಾಗಿ ಕಾಯುತ್ತಿರುವ ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ 2025 ಈ ಕಾರ್ಯಾಚರಣೆಗೆ ಹೆಚ್ಚಿನ ಬಲ ನೀಡಿದೆ. ಹೊಸ ಕಾನೂನಿನ ಅನ್ವಯ, ಅನುಮೋದನೆ ಇಲ್ಲದ ಅಥವಾ ಬೆಟ್ಟಿಂಗ್ ಪ್ರಚೋದಿಸುವ ಯಾವುದೇ ವೇದಿಕೆಗಳ ವಿರುದ್ಧ ಅಧಿಕಾರಿಗಳು ತಕ್ಷಣದ ಕ್ರಮ ಕೈಗೊಳ್ಳಲು ಅಧಿಕಾರ ಹೊಂದಿದ್ದಾರೆ. ಈ ಮಸೂದೆಯು ಇ-ಸ್ಪೋರ್ಟ್ಸ್ (E-sports) ಮತ್ತು ಸಾಮಾಜಿಕ ಗೇಮಿಂಗ್‌ಗೆ ಉತ್ತೇಜನ ನೀಡಿದರೆ, ಹಣದ ಆಮಿಷವೊಡ್ಡುವ ಜೂಜಾಟಕ್ಕೆ ಕಠಿಣ ದಂಡದ ಎಚ್ಚರಿಕೆ ನೀಡಿದೆ.

ಯುವಜನತೆಯ ರಕ್ಷಣೆಯೇ ಪ್ರಮುಖ ಆದ್ಯತೆ:

ಈ ಕುರಿತು ಮಾಹಿತಿ ನೀಡಿದ ಕೇಂದ್ರ ಸರ್ಕಾರ ಮೂಲಗಳು, ಅಕ್ರಮ ಬೆಟ್ಟಿಂಗ್ ಸೈಟ್‌ಗಳು ಯುವಜನರನ್ನು ಸುಲಭವಾಗಿ ಆಕರ್ಷಿಸಿ ಅವರನ್ನು ಸಾಲದ ಸುಳಿಗೆ ತಳ್ಳುತ್ತಿವೆ. ಇದು ಕೇವಲ ಹಣದ ವಿಚಾರವಲ್ಲ, ಬದಲಾಗಿ ದೇಶದ ಭವಿಷ್ಯದ ಸುರಕ್ಷತೆಯ ಪ್ರಶ್ನೆಯಾಗಿದೆ ಎಂದು ತಿಳಿಸಿವೆ. ಭವಿಷ್ಯದಲ್ಲಿ ಇಂತಹ ಸೈಟ್‌ಗಳು ಮಿರರ್ ಲಿಂಕ್‌ಗಳ ಮೂಲಕ ಮರಳಿ ಬಾರದಂತೆ ತಡೆಯಲು ಸಚಿವಾಲಯವು ಸುಧಾರಿತ ತಂತ್ರಜ್ಞಾನವನ್ನು ಬಳಸುತ್ತಿದೆ ಎಂದು ತಿಳಿಸಿವೆ.

Exit mobile version