ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ 2026ಕ್ಕೆ ದಿನಗಣನೆ ಆರಂಭವಾಗಿದ್ದು, ಈ ಬಾರಿಯ ಜಂಬೂಸವಾರಿ ಮೆರವಣಿಗೆಗೆ ಕನ್ನಡ ಚಿತ್ರರಂಗದ ತಾರೆಯರು ವಿಶೇಷ ಮೆರುಗು ನೀಡಲಿದ್ದಾರೆ. ಸ್ಯಾಂಡಲ್‌ವುಡ್‌ನ ಸುಮಾರು 30 ಪ್ರಮುಖ ನಟ-ನಟಿಯರನ್ನು ಜಂಬೂಸವಾರಿಯಲ್ಲಿ ಭಾಗವಹಿಸುವಂತೆ ಆಹ್ವಾನಿಸಲು ದಸರಾ ಸಮಿತಿ ಸಿದ್ಧತೆ ನಡೆಸಿದೆ. ತಾರೆಯರು ತೆರೆದ ಅಂಬಾರಿ ಬಸ್‌ನಲ್ಲಿ ಮೆರವಣಿಗೆಯಲ್ಲಿ ಸಾಗಲಿದ್ದಾರೆ.
ಜಂಬೂಸವಾರಿಯಲ್ಲಿ ಸ್ಯಾಂಡಲ್‌ವುಡ್ ಸ್ಟಾರ್‌ಗಳ ಪಯಣ
ಮೈಸೂರು ದಸರಾ ಜಂಬೂಸವಾರಿ ದೇಶ-ವಿದೇಶದ ಪ್ರವಾಸಿಗರನ್ನು ಆಕರ್ಷಿಸುವ ವಿಶ್ವವಿಖ್ಯಾತ ಕಾರ್ಯಕ್ರಮವಾಗಿದೆ. ಈ ಬಾರಿ ಕನ್ನಡ ಚಿತ್ರರಂಗದ ಜನಪ್ರಿಯ ತಾರೆಯರನ್ನು ಮೆರವಣಿಗೆಯಲ್ಲಿ ಸೇರಿಸುವ ಮೂಲಕ ಮತ್ತಷ್ಟು ವಿಶೇಷವಾಗಿಸಲು ಯೋಜಿಸಲಾಗಿದೆ.
ಅಂಬಾವಿಲಾಸ ಅರಮನೆಯಿಂದ ಕೆ.ಆರ್. ವೃತ್ತದವರೆಗೆ ನಡೆಯುವ ಜಂಬೂಸವಾರಿ ಮೆರವಣಿಗೆಯಲ್ಲಿ ನಟ-ನಟಿಯರು ತೆರೆದ ಅಂಬಾರಿ ಬಸ್‌ನಲ್ಲಿ ಸಂಚರಿಸಲಿದ್ದಾರೆ. ಈ ವೇಳೆ ತಾರೆಯರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಹಾಗೂ ಸಾರ್ವಜನಿಕರಿಗೆ ಅವಕಾಶ ಸಿಗಲಿದೆ.
ಯಶ್‌ನಿಂದ ಸುದೀಪ್‌ವರೆಗೆ ದಿಗ್ಗಜರಿಗೆ ಆಹ್ವಾನ
ಸ್ಯಾಂಡಲ್‌ವುಡ್‌ನ ಹಲವು ದಿಗ್ಗಜ ನಟರಿಗೆ ದಸರಾ ಸಮಿತಿಯಿಂದ ವಿಶೇಷ ಆಹ್ವಾನ ನೀಡಲು ನಿರ್ಧರಿಸಲಾಗಿದೆ. ರಾಕಿಂಗ್ ಸ್ಟಾರ್ ಯಶ್, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್, ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಕಿಚ್ಚ ಸುದೀಪ್ ಹಾಗೂ ಕ್ರೇಜಿಸ್ಟಾರ್ ರವಿಚಂದ್ರನ್ ಸೇರಿದಂತೆ ಕನ್ನಡ ಚಿತ್ರರಂಗದ ಪ್ರಮುಖ ತಾರೆಯರನ್ನು ಆಹ್ವಾನಿಸಲಾಗುತ್ತಿದೆ.
ದಿಗ್ಗಜ ನಟರು ಮೆರವಣಿಗೆಯಲ್ಲಿ ಭಾಗವಹಿಸಿದರೆ ದಸರಾ ಜಂಬೂಸವಾರಿಗೆ ಮತ್ತಷ್ಟು ಸ್ಟಾರ್‌ವ್ಯಾಲ್ಯೂ ಸಿಗಲಿದೆ. ಆದರೆ ಆಹ್ವಾನಿತರ ಪೈಕಿ ಅಂತಿಮವಾಗಿ ಯಾರೆಲ್ಲ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂಬುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.
ನಟಿಯರೂ ಜಂಬೂಸವಾರಿಯಲ್ಲಿ ಭಾಗಿ
ನಟರಿಗೆ ಮಾತ್ರವಲ್ಲದೆ ಕನ್ನಡ ಚಿತ್ರರಂಗದ ಜನಪ್ರಿಯ ನಟಿಯರಿಗೂ ದಸರಾ ಸಮಿತಿಯಿಂದ ಆಹ್ವಾನ ನೀಡಲಾಗುತ್ತಿದೆ. ಹಿರಿಯ ನಟಿ ಉಮಾಶ್ರೀ, ರಚಿತಾ ರಾಮ್, ರುಕ್ಮಿಣಿ ವಸಂತ್ ಹಾಗೂ ಸಪ್ತಮಿ ಗೌಡ ಸೇರಿದಂತೆ ಹಲವು ತಾರೆಯರು ಜಂಬೂಸವಾರಿಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ.
ಸರ್ಕಾರದ ಕಡೆಯಿಂದ ಸ್ಯಾಂಡಲ್‌ವುಡ್‌ನ ಪ್ರಮುಖ ನಟ-ನಟಿಯರನ್ನು ಆಹ್ವಾನಿಸುವಂತೆ ಸೂಚನೆ ಬಂದಿರುವ ಹಿನ್ನೆಲೆ ದಸರಾ ಸಮಿತಿ ಈ ನಿಟ್ಟಿನಲ್ಲಿ ಸಿದ್ಧತೆ ನಡೆಸುತ್ತಿದೆ ಎನ್ನಲಾಗಿದೆ.
93 ವರ್ಷಗಳ ಸ್ಯಾಂಡಲ್‌ವುಡ್ ಪಯಣಕ್ಕೆ ಸ್ತಬ್ಧಚಿತ್ರ
ಈ ಬಾರಿಯ ಮೈಸೂರು ದಸರಾ ಮೆರವಣಿಗೆಯಲ್ಲಿ ಕನ್ನಡ ಚಿತ್ರರಂಗದ ಸುದೀರ್ಘ ಇತಿಹಾಸವನ್ನು ಪರಿಚಯಿಸುವ ವಿಶೇಷ ಸ್ತಬ್ಧಚಿತ್ರ ಕೂಡ ಪ್ರಮುಖ ಆಕರ್ಷಣೆಯಾಗಲಿದೆ.
ಕನ್ನಡ ಚಿತ್ರರಂಗದ 93 ವರ್ಷಗಳ ಪಯಣವನ್ನು ಸಾರುವ ರೀತಿಯಲ್ಲಿ ಸ್ತಬ್ಧಚಿತ್ರವನ್ನು ರೂಪಿಸಲಾಗುತ್ತಿದೆ. 1934ರ ಕಪ್ಪು-ಬಿಳುಪು ಚಿತ್ರಗಳ ಕಾಲದಿಂದ ಆರಂಭಿಸಿ ಇಂದಿನ ಮಲ್ಟಿಪ್ಲೆಕ್ಸ್ ಮತ್ತು ಪ್ಯಾನ್-ಇಂಡಿಯಾ ಸಿನಿಮಾಗಳ ಯುಗದವರೆಗೆ ಕನ್ನಡ ಚಿತ್ರರಂಗ ಬೆಳೆದು ಬಂದ ಹಾದಿಯನ್ನು ಸ್ತಬ್ಧಚಿತ್ರದ ಮೂಲಕ ಬಿಂಬಿಸಲಾಗುತ್ತದೆ.
ರಾಜ್‌ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಪುನೀತ್ ಸ್ಮರಣೆ
ಕನ್ನಡ ಚಿತ್ರರಂಗದ ದಿಗ್ಗಜರಾದ ವರನಟ ಡಾ. ರಾಜ್‌ಕುಮಾರ್, ಸಾಹಸಸಿಂಹ ಡಾ. ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಸ್ಮರಣಾರ್ಥ ವಿಶೇಷ ವಿನ್ಯಾಸದ ಶ್ರದ್ಧಾಂಜಲಿ ಸ್ತಬ್ಧಚಿತ್ರವೂ ಮೆರವಣಿಗೆಯಲ್ಲಿ ಇರಲಿದೆ.
