ಪಾಟ್ನಾ: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಿಹಾರ ಕಾರ್ಯಕ್ರಮಕ್ಕೆ ಕಡಿಮೆ ಜನ ಭಾಗವಹಿಸಿದ್ದಕ್ಕೆ ಬಕ್ಸಾರ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮನೋಜ್ ಕುಮಾರ್ ಪಾಂಡೆಯನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ.
ಮನೋಜ್ ಕುಮಾರ್ ಪಾಂಡೆಯನ್ನು ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಿ, ಪಕ್ಷದ ಎಲ್ಲಾ ಹುದ್ದೆಗಳಿಂದ ತೆಗೆದುಹಾಕಲಾಗಿದೆ ಎಂದು ಬಿಹಾರ ಪ್ರದೇಶ ಕಾಂಗ್ರೆಸ್ ಸಮಿತಿಯ ಮಾಧ್ಯಮ ಕೋಶದ ಅಧ್ಯಕ್ಷ ರಾಜೇಶ್ ರಾಥೋಡ್ ತಿಳಿಸಿದ್ದಾರೆ.
ಭಾನುವಾರ ಬಕ್ಸಾರ್‌ನ ದಲ್ಸಾಗರ್ ಕ್ರೀಡಾಂಗಣದಲ್ಲಿ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್’ ಕಾರ್ಯಕ್ರಮ ನಡೆದಿತ್ತು. ಆದರೆ, ಖರ್ಗೆ ಆಗಮನದ ವಿಷಯ ತಿಳಿದಿದ್ದರೂ, ಅನೇಕ ಕುರ್ಚಿಗಳು ಖಾಲಿಯಾಗಿದ್ದವು. ಈ ಖಾಲಿ ಕುರ್ಚಿಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಕಾಂಗ್ರೆಸ್ ಶಾಸಕ ಸಂಜಯ್ ಕುಮಾರ್ ತಿವಾರಿ ಜನರನ್ನು ಕುರ್ಚಿಗಳಲ್ಲಿ ಕುಳಿತುಕೊಳ್ಳಲು ಕೇಳಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ಬಿಹಾರ ಕಾಂಗ್ರೆಸ್ ಉಸ್ತುವಾರಿ ಕೃಷ್ಣ ಅಲ್ಲವರು, ರಾಜ್ಯಾಧ್ಯಕ್ಷ ಅಖಿಲೇಶ್ ಪ್ರಸಾದ್ ಸಿಂಗ್, ಆರ್ಜೆಡಿ ಸಂಸದ ಸುಧಾಕರ್ ಸಿಂಗ್, ಕಾಂಗ್ರೆಸ್ ಸಂಸದ ಮನೋಜ್ ಕುಮಾರ್ ರಾಮ್ ಸೇರಿ ಹಿರಿಯ ನಾಯಕರು ಭಾಗವಹಿಸಿದ್ದರು. ಕಡಿಮೆ ಜನರ ಉಪಸ್ಥಿತಿ ಮತ್ತು ಖಾಲಿ ಕುರ್ಚಿಗಳು ನಾಯಕರಿಗೆ ಮುಜುಗರ ಉಂಟುಮಾಡಿದ್ದವು. ಈ ಕಾರಣಕ್ಕೆ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಈ ವರ್ಷದ ಅಕ್ಟೋಬರ್-ನವೆಂಬರ್‌ನಲ್ಲಿ ಬಿಹಾರ ವಿಧಾನಸಭೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಮತ್ತು ಆರ್ಜೆಡಿ ಮೈತ್ರಿಯಲ್ಲಿದ್ದರೆ, ಬಿಜೆಪಿ, ಜೆಡಿಯು, ಎಲ್ಜೆಪಿ ಒಗ್ಗಟ್ಟಿನಲ್ಲಿವೆ.
