ಬಿಜೋರ್: ಭಕ್ತಿ ಎಂಬುದು ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಲ್ಲ, ಅದು ಮೂಕ ಪ್ರಾಣಿಗಳಿಗೂ ಅನ್ವಯಿಸುತ್ತದೆ ಎಂಬುದು ಅಚ್ಚರಿಯಾದರೂ ಸತ್ಯ. ಈ ಹಿಂದೆ ಮಹಾರಾಷ್ಟ್ರದ ಶನಿ ದೇಗುಲದಲ್ಲಿ ಬೆಕ್ಕೊಂದು ಪ್ರದಕ್ಷಿಣೆ ಹಾಕಿದ ಘಟನೆ ಮಾಸುವ ಮುನ್ನವೇ, ಈಗ ಉತ್ತರ ಪ್ರದೇಶದ ಬಿಜೋರ್ ಜಿಲ್ಲೆಯಲ್ಲಿ ಅಂತಹದ್ದೇ ಒಂದು ರೋಮಾಂಚಕ ಘಟನೆ ನಡೆದಿದೆ. ಹನುಮಾನ್ ದೇವಸ್ಥಾನವೊಂದರಲ್ಲಿ ನಾಯಿಯೊಂದು ಕಳೆದ 48 ಗಂಟೆಗಳಿಂದ ನಿರಂತರವಾಗಿ ಪ್ರದಕ್ಷಿಣೆ ಹಾಕುತ್ತಿದ್ದು, ಸಾವಿರಾರು ಭಕ್ತರನ್ನು ಆಶ್ಚರ್ಯಗೊಂಡಿದ್ದಾರೆ.
ಬಿಜೋರ್ ಜಿಲ್ಲೆಯ ನಗೀನಾ ತೆಹಸಿಲ್ ವ್ಯಾಪ್ತಿಯ ನಂದಪುರ ಗ್ರಾಮದ ಪ್ರಾಚೀನ ಹನುಮಾನ್ ದೇವಾಲಯದಲ್ಲಿ ಈ ಪವಾಡ ಸದೃಶ ದೃಶ್ಯ ಕಂಡುಬಂದಿದೆ. ಸೋಮವಾರ ಬೆಳಗಿನ ಜಾವ 4 ಗಂಟೆಯಿಂದ ಆರಂಭವಾದ ಶ್ವಾನ ಪ್ರದಕ್ಷಿಣೆ ದಣಿವರಿಯಿಲ್ಲದೆ ಮುಂದುವರಿಯುತ್ತಿದೆ. ಯಾವುದೇ ಆಹಾರ ಅಥವಾ ವಿಶ್ರಾಂತಿಯ ಹಂಬಲವಿಲ್ಲದೆ, ಆ ನಾಯಿಯು ಹನುಮಂತನ ವಿಗ್ರಹಕ್ಕೆ ಸುತ್ತು ಬರುತ್ತಿರುವುದು ಅಲ್ಲಿಗೆ ಭೇಟಿ ನೀಡುವ ಭಕ್ತರಿಗೆ ಆಶ್ಚರ್ಯ ತಂದಿದೆ.
ಹಿಂದೂ ಧರ್ಮದಲ್ಲಿ ನಾಯಿಯನ್ನು ಕಾಲಭೈರವನ ವಾಹನ ಮತ್ತು ಸ್ವರೂಪವೆಂದು ಪೂಜಿಸಲಾಗುತ್ತದೆ. ಹೀಗಾಗಿ, ಹನುಮಂತನ ಸನ್ನಿಧಿಯಲ್ಲಿ ಶ್ವಾನದ ಈ ವರ್ತನೆಯನ್ನು ಕಂಡು ಜನರು ಇದು ಸಾಕ್ಷಾತ್ ಭೈರವನಾಥನೇ ಹನುಮಂತನ ದರ್ಶನಕ್ಕೆ ಬಂದಿದ್ದಾನೆ ಎಂದು ಹೇಳುತ್ತಿದ್ದಾರೆ. ಅಲ್ಲಿಗೆ ಬರುವ ಭಕ್ತರಿಗೆ ಈ ನಾಯಿ ಯಾವುದೇ ತೊಂದರೆ ನೀಡುತ್ತಿಲ್ಲ, ಬದಲಿಗೆ ಅತ್ಯಂತ ಶಾಂತವಾಗಿ ತನ್ನ ಪ್ರದಕ್ಷಿಣೆಯನ್ನು ಮುಂದುವರಿಸಿದೆ. ಈ ಸುದ್ದಿಯು ಹರಡುತ್ತಿದ್ದು, ಸುತ್ತಮುತ್ತಲಿನ ಹಳ್ಳಿಗಳಿಂದ ಜನರು ಇದನ್ನ ಕಣ್ಣಾರೆ ಕಾಣಲು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ.
ಉತ್ತರ ಭಾರತದಲ್ಲಿ ಸದ್ಯ ವಿಪರೀತ ಚಳಿ ಇರುವುದರಿಂದ, ದೇವಸ್ಥಾನದ ಸಮಿತಿ ಮತ್ತು ಸ್ಥಳೀಯ ಗ್ರಾಮಸ್ಥರು ಈ ಶ್ವಾನದ ರಕ್ಷಣೆಗಾಗಿ ಮುಂದಾಗಿದ್ದಾರೆ. ಚಳಿಯಿಂದ ರಕ್ಷಿಸಲು ಆವರಣದಲ್ಲಿ ಪಾಲಿಥಿನ್ ಹಾಳೆಗಳನ್ನು ಅಳವಡಿಸಲಾಗಿದೆ. ಸ್ಥಳೀಯ ಮುಖಂಡರಾದ ಅನೂಪ್ ಬಾಲ್ಮೀಕಿ ಅವರು ಸ್ಥಳಕ್ಕೆ ಭೇಟಿ ನೀಡಿ, ಇದು ಶುದ್ಧ ನಂಬಿಕೆಯ ವಿಷಯ, ಎಲ್ಲರೂ ಸೌಹಾರ್ದತೆಯಿಂದ ಇರಬೇಕು ಎಂದು ಮನವಿ ಮಾಡಿದ್ದಾರೆ. ಹಿರಿಯ ಗ್ರಾಮಸ್ಥರ ಪ್ರಕಾರ, ಈ ಪ್ರಾಚೀನ ದೇವಾಲಯದಲ್ಲಿ ಇಂತಹ ಘಟನೆ ಇದೇ ಮೊದಲು ನಡೆದಿದೆ ಎನ್ನಲಾಗಿದೆ.
ಒಟ್ಟಾರೆಯಾಗಿ, ಈ ಘಟನೆಯು ವೈಜ್ಞಾನಿಕವಾಗಿ ಚರ್ಚೆಗೆ ಕಾರಣವಾಗಿದ್ದರೂ, ಭಕ್ತರ ಪಾಲಿಗೆ ಇದು ಭಕ್ತಿ ಮತ್ತು ದೈವಿಕ ಶಕ್ತಿಯ ಸಂಕೇತವಾಗಿದೆ. ಮೂಕ ಪ್ರಾಣಿಯೊಂದು ತೋರುತ್ತಿರುವ ಈ ಶ್ರದ್ಧೆಯನ್ನ ನೋಡಿ ಸಾಮಾಜಿಕ ಜಾಲತಾಣದಲ್ಲಿ ಮನುಷ್ಯರಿಗಿಂತ ಮೂಕ ಪ್ರಾಣಿಗಳಿಗೆ ದೇವರ ಮೇಲೆ ಭಕ್ತಿ ಹೆಚ್ಚಿದೆ ಎಂದು ಕಾಮೆಂಟ್ ಮಾಡಿದ್ದಾರೆ.





