ಸರ್ಕಾರಿ ನೌಕರರಿಗೆ ಸೋಶಿಯಲ್ ಮೀಡಿಯಾ ಲಾಕ್ ! ಪೂರ್ವಾನುಮತಿ ಇಲ್ಲದೆ ಖಾತೆ ತೆರೆದರೆ, ಕಠಿಣ ಕ್ರಮ

Untitled design 2026 01 30T232919.965

ಪಾಟ್ನಾ: ಸರ್ಕಾರಿ ನೌಕರರು ಇನ್ಮುಂದೆ ಫೇಸ್‌ಬುಕ್, ಎಕ್ಸ್ (ಟ್ವಿಟರ್), ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ಗಳಲ್ಲಿ ತಮಗಿಷ್ಟ ಬಂದಂತೆ ಪೋಸ್ಟ್ ಹಾಕುವಂತಿಲ್ಲ. ಡಿಜಿಟಲ್ ಲೋಕದಲ್ಲಿ ಸರ್ಕಾರಿ ಅಧಿಕಾರಿಗಳ ಘನತೆ ಮತ್ತು ಶಿಸ್ತನ್ನು ಕಾಪಾಡುವ ಉದ್ದೇಶದಿಂದ ಬಿಹಾರ ಸರ್ಕಾರವು ತನ್ನ ಎಲ್ಲಾ ಸಿಬ್ಬಂದಿಗೆ ಕಟ್ಟುನಿಟ್ಟಿನ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ರಾಜ್ಯ ಸಚಿವ ಸಂಪುಟದ ಅನುಮೋದನೆ ಪಡೆದಿರುವ ಈ ನಿಯಮಗಳು ಹಿರಿಯ ಅಧಿಕಾರಿಗಳಿಂದ ಹಿಡಿದು ಕೆಳ ಹಂತದ ನೌಕರರವರೆಗೂ ಅನ್ವಯವಾಗಲಿವೆ.

ಹೊಸ ನಿಯಮದ ಪ್ರಕಾರ, ಯಾವುದೇ ಸರ್ಕಾರಿ ನೌಕರ ಹೊಸದಾಗಿ ಸಾಮಾಜಿಕ ಮಾಧ್ಯಮ ಖಾತೆ ತೆರೆಯಬೇಕೆಂದರೂ ತಮ್ಮ ಇಲಾಖೆಯ ಹಿರಿಯ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಅನಾಮಧೇಯ ಅಥವಾ ನಕಲಿ (Fake) ಖಾತೆಗಳನ್ನು ಸೃಷ್ಟಿಸುವುದು ಈಗ ಶಿಕ್ಷಾರ್ಹ ಅಪರಾಧವಾಗಿದೆ. ಅಲ್ಲದೆ, ವೈಯಕ್ತಿಕ ಖಾತೆಗಳನ್ನು ತೆರೆಯಲು ಅಥವಾ ಬಳಸಲು ಸರ್ಕಾರದ ಅಧಿಕೃತ ಇಮೇಲ್ ಐಡಿ ಅಥವಾ ಫೋನ್ ನಂಬರ್‌ಗಳನ್ನು ಬಳಸುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ವೈಯಕ್ತಿಕ ವಿಷಯಗಳನ್ನು ಹಂಚಿಕೊಳ್ಳುವಾಗ ನೌಕರರು ತಮ್ಮ ಅಧಿಕೃತ ಹುದ್ದೆ, ಸರ್ಕಾರದ ಲೋಗೋ ಅಥವಾ ಯಾವುದೇ ಸರ್ಕಾರಿ ಚಿಹ್ನೆಗಳನ್ನು ಬಳಸುವಂತಿಲ್ಲ. ಅತಿ ಮುಖ್ಯವಾಗಿ, ಕಚೇರಿಯ ಆಂತರಿಕ ಸಭೆಗಳು, ಸರ್ಕಾರಿ ಕಾರ್ಯಕ್ರಮಗಳ ಫೋಟೋ ಅಥವಾ ವಿಡಿಯೋಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಬಾರದು ಎಂದು ಎಚ್ಚರಿಸಲಾಗಿದೆ. ಸರ್ಕಾರದ ಗೌಪ್ಯ ಮಾಹಿತಿ ಮತ್ತು ಸೂಕ್ಷ್ಮ ವಿಷಯಗಳನ್ನು ಸೋರಿಕೆ ಮಾಡುವುದು ಗಂಭೀರ ಅಪರಾಧವೆಂದು ಪರಿಗಣಿಸಲಾಗುತ್ತದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಸರ್ಕಾರಿ ನೀತಿಗಳು, ಯೋಜನೆಗಳು ಅಥವಾ ಹಿರಿಯ ಅಧಿಕಾರಿಗಳನ್ನು ಸಾರ್ವಜನಿಕವಾಗಿ ಟೀಕಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಜಾತಿ, ಧರ್ಮ, ಸಮುದಾಯ ಅಥವಾ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು ಪ್ರಚೋದನಕಾರಿ, ಅಶ್ಲೀಲ ಅಥವಾ ಸಾಮಾಜಿಕ ಸಾಮರಸ್ಯ ಕದಡುವ ವಿಷಯಗಳನ್ನು ಪೋಸ್ಟ್ ಮಾಡಿದರೆ ಅಂತಹ ನೌಕರರ ವಿರುದ್ಧ ತಕ್ಷಣದ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ. ಲೈಂಗಿಕ ದೌರ್ಜನ್ಯಕ್ಕೊಳಗಾದವರ ಗುರುತನ್ನು ಬಹಿರಂಗಪಡಿಸುವುದು ಅಥವಾ ಯಾವುದೇ ವ್ಯಕ್ತಿಯ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವುದು ಕೆಲಸಕ್ಕೆ ಕುತ್ತು ತರಬಲ್ಲದು.

ಈ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ನೌಕರರ ಮೇಲೆ ಇಲಾಖಾ ವಿಚಾರಣೆ ನಡೆಯಲಿದ್ದು, ಕಠಿಣ ಶಿಕ್ಷೆ ಅಥವಾ ಕೆಲಸದಿಂದ ವಜಾ ಮಾಡುವಂತಹ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ. ನಮ್ಮ ಉದ್ದೇಶ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿಷೇಧಿಸುವುದಲ್ಲ, ಬದಲಾಗಿ ಡಿಜಿಟಲ್ ಮಾಧ್ಯಮಗಳಲ್ಲಿ ಶಿಸ್ತು ಮತ್ತು ಜವಾಬ್ದಾರಿಯುತ ವರ್ತನೆಯನ್ನು ತರುವುದಾಗಿದೆ ಎಂದು ಬಿಹಾರ ಸರ್ಕಾರ ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ.

ಇತ್ತೀಚಿನ ವರ್ಷಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವ ತಪ್ಪು ಮಾಹಿತಿ ಮತ್ತು ಅಧಿಕಾರಿಗಳ ಪ್ರಚೋದನಕಾರಿ ಹೇಳಿಕೆಗಳು ಆಡಳಿತಕ್ಕೆ ಮುಜುಗರ ತರುತ್ತಿರುವ ಹಿನ್ನೆಲೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

Exit mobile version