ಪಟ್ನಾ, ಅಕ್ಟೋಬರ್ 13, 2025: ಬಿಹಾರ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಎನ್‌ಡಿಎ ಭಾನುವಾರ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಅಂತಿಮಗೊಳಿಸಿದೆ. 243 ವಿಧಾನಸಭಾ ಕ್ಷೇತ್ರಗಳ ಪೈಕಿ, ಬಿಜೆಪಿ ಮತ್ತು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜನತಾ ದಳ (ಯುನೈಟೆಡ್) (ಜೆಡಿಯು) ತಲಾ 101 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ. ಉಳಿದ 41 ಸ್ಥಾನಗಳನ್ನು ಇತರೆ ಮೈತ್ರಿ ಪಕ್ಷಗಳಾದ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್), ಎಚ್‌ಎಎಂ, ಮತ್ತು ರಾಷ್ಟ್ರೀಯ ಲೋಕ ಮೋರ್ಚಾಗೆ ಹಂಚಿಕೆ ಮಾಡಲಾಗಿದೆ.
ಈ ಸೀಟು ಹಂಚಿಕೆಯನ್ನು ಜೆಡಿಯು ಕಾರ್ಯಾಧ್ಯಕ್ಷ ಸಂಜಯ್ ಕುಮಾರ್ ಝಾ ಮತ್ತು ಬಿಜೆಪಿ ಮುಖಂಡ ಸಾಮ್ರಾಟ್ ಚೌಧರಿ ಎಕ್ಸ್ ಪೋಸ್ಟ್‌ನಲ್ಲಿ ದೃಢಪಡಿಸಿದ್ದಾರೆ. ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) 29 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ಅವರ ಹಿಂದುಸ್ಥಾನ್ ಆವಾಮ್ ಮೋರ್ಚಾ (ಎಚ್‌ಎಎಂ) 15 ಸ್ಥಾನಗಳಿಗೆ ಒತ್ತಾಯಿಸಿತ್ತಾದರೂ, 6 ಸ್ಥಾನಗಳನ್ನು ಪಡೆದಿದೆ. ರಾಜ್ಯಸಭಾ ಸದಸ್ಯ ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಮೋರ್ಚಾವೂ 6 ಸ್ಥಾನಗಳಲ್ಲಿ ಕಣಕ್ಕಿಳಿಯಲಿದೆ.
ಜೆಡಿಯು ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದ್ದು, ಆಶ್ಚರ್ಯಕರವಾಗಿ ನಾಲ್ಕು ಹಾಲಿ ಶಾಸಕರನ್ನು ಕೈಬಿಟ್ಟಿದೆ. ಕ್ಷೇತ್ರದ ಮತದಾರರ ಅಭಿಪ್ರಾಯವನ್ನು ಆಧರಿಸಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗಿದೆ ಎಂದು ಜೆಡಿಯು ಮುಖಂಡರೊಬ್ಬರು ಹೆಸರು ಗುಪ್ತವಾಗಿಡಲು ಇಚ್ಛಿಸಿ ತಿಳಿಸಿದ್ದಾರೆ. ಈ ನಿರ್ಧಾರವು ಪಕ್ಷದ ಒಳಗಿನ ರಾಜಕೀಯ ಚರ್ಚೆಗೆ ಕಾರಣವಾಗಿದೆ.
ರಾಂಚಿಯಿಂದ ಕಾಂಗ್ರೆಸ್ ಮುಖಂಡ ಪವನ್ ಖೇರಾ, ಮಹಾಘಟಬಂಧನ್‌ನಲ್ಲಿ ಸೀಟು ಹಂಚಿಕೆಯಲ್ಲಿ ಯಾವುದೇ ಗೊಂದಲವಿಲ್ಲ. ಒಕ್ಕೂಟವು ಒಟ್ಟಾಗಿ ಚುನಾವಣೆಯನ್ನು ಎದುರಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಪ್ರಧಾನ ಕಾರ್ಯದರ್ಶಿ ಸುಪ್ರಿಯೊ ಭಟ್ಟಾಚಾರ್ಯ, ಇಂಡಿಯಾ ಕೂಟವು ಅಕ್ಟೋಬರ್ 14ರ ಒಳಗೆ ಸೀಟು ಹಂಚಿಕೆಯನ್ನು ಅಂತಿಮಗೊಳಿಸದಿದ್ದರೆ, ಜೆಎಂಎಂ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಲಿದೆ,” ಎಂದು ಎಚ್ಚರಿಕೆ ನೀಡಿದ್ದಾರೆ. ಜೆಎಂಎಂ ಕನಿಷ್ಠ 12 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಗುರಿಯನ್ನು ಹೊಂದಿದೆ.
ಮಹಾಘಟಬಂಧನ್‌ನಲ್ಲಿ ಸೀಟು ಹಂಚಿಕೆಯ ಗೊಂದಲವು ಇನ್ನೂ ಪರಿಹಾರವಾಗಿಲ್ಲ. ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್, ತಮ್ಮ ಪುತ್ರ ತೇಜಸ್ವಿ ಯಾದವ್ ಮತ್ತು ಪತ್ನಿ, ಮಾಜಿ ಮುಖ್ಯಮಂತ್ರಿ ರಾಬಿಡಿ ದೇವಿ ಜೊತೆ ದೆಹಲಿಗೆ ಭಾನುವಾರ ಧಾವಿಸಿದ್ದಾರೆ. ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್‌ನ ಹಿರಿಯ ಮುಖಂಡರನ್ನು ಭೇಟಿಯಾಗುವ ಸಾಧ್ಯತೆಯಿದೆ. ಇದೇ ವೇಳೆ, ‘ಉದ್ಯೋಗಕ್ಕಾಗಿ ಜಮೀನು ಹಗರಣಕ್ಕೆ ಸಂಬಂಧಿಸಿದಂತೆ ಸೋಮವಾರ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದ್ದು, ಲಾಲು ಈ ವಿಷಯದಲ್ಲೂ ಗಮನಹರಿಸಲಿದ್ದಾರೆ. ಆದರೆ, ದೆಹಲಿಯಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಲಾಲು ಮತ್ತು ರಾಬಿಡಿ ಉತ್ತರಿಸಲು ನಿರಾಕರಿಸಿದರೆ, ತೇಜಸ್ವಿ, ಎಲ್ಲವೂ ಚೆನ್ನಾಗಿದೆ ಎಂದು ಹೇಳಿದ್ದಾರೆ.
ಮತ ಕಳ್ಳರೇ ಗದ್ದುಗೆ ತೊರೆಯಿರಿ ಎಂಬ ಮಹಾಘಟಬಂಧನ್‌ನ ಅಭಿಯಾನವು ಪ್ರಜಾಪ್ರಭುತ್ವವನ್ನು ಉಳಿಸಲು ಶಕ್ತಿಯಾಗಲಿದೆ ಎಂದು ಪವನ್ ಖೇರಾ ಒತ್ತಿ ಹೇಳಿದ್ದಾರೆ. ಬಿಹಾರ ವಿಧಾನಸಭೆ ಚುನಾವಣೆಯು ನವೆಂಬರ್ 6 ಮತ್ತು 11ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ನವೆಂಬರ್ 14ರಂದು ಮತ ಎಣಿಕೆ ನಡೆಯಲಿದೆ. ಎನ್‌ಡಿಎ ಮತ್ತು ಮಹಾಘಟಬಂಧನ್ ನಡುವಿನ ಈ ಚುನಾವಣೆಯು ಬಿಹಾರದ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದೆ. ಆರ್‌ಜೆಡಿಯ ಲಾಲು ಪ್ರಸಾದ್ ಮತ್ತು ತೇಜಸ್ವಿ ಯಾದವ್‌ರ ನಡೆಗಳು ಮಹಾಘಟಬಂಧನ್‌ನ ಸೀಟು ಹಂಚಿಕೆಯಲ್ಲಿ ನಿರ್ಣಾಯಕವಾಗಲಿವೆ. ಇಂಡಿಯಾ ಕೂಟದ ಗೊಂದಲವು ಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮ ಬೀರಬಹುದು ಎಂಬ ಚರ್ಚೆ ಆರಂಭವಾಗಿದೆ.