ನವದೆಹಲಿ: ದೇಶದ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿರುವ ಬಿಹಾರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗವು ಇಂದು ಸುದ್ದಿಗೋಷ್ಠಿ ನಡೆಸಿ ರಾಜ್ಯದ 243 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆಯ ದಿನಾಂಕ ಮತ್ತು ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ನೇತೃತ್ವದಲ್ಲಿ ಈ ಪ್ರಮುಖ ಸುದ್ದಿಗೋಷ್ಠಿ ನಡೆಯಿತು.
ಈ ಬಾರಿ ಬಿಹಾರದಲ್ಲಿ 2 ಹಂತಗಳಲ್ಲಿ ಮತದಾನ ನಡೆಯಲಿದ್ದು, ನವೆಂಬರ್ 6 ಮತ್ತು ನವೆಂಬರ್ 11 ರಂದು ಮತದಾನ ನಡೆಯಲಿದೆ. ನವೆಂಬರ್ 14 ರಂದು ಫಲಿತಾಂಶ ಪ್ರಕಟವಾಗುತ್ತದೆ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಈ ಚುನಾವಣೆಯಲ್ಲಿ ಒಟ್ಟು 7.43 ಕೋಟಿ ಮತದಾರರು ತಮ್ಮ ಮತದಾನದ ಹಕ್ಕನ್ನು ಬಳಸಲಿದ್ದಾರೆ. ಇದರಲ್ಲಿ 3.92 ಕೋಟಿ ಪುರುಷ ಮತದಾರರು ಮತ್ತು 3.50 ಕೋಟಿ ಮಹಿಳಾ ಮತದಾರರಿದ್ದಾರೆ. ಇದರ ಜೊತೆಗೆ, 1,725 ತೃತೀಯ ಲಿಂಗದ ಮತದಾರರನ್ನು ನೋಂದಾಯಿಸಲಾಗಿದೆ.
ಈ ಬಾರಿ 14 ಲಕ್ಷ ಯುವಕ-ಯುವತಿಯರು ಮೊದಲ ಬಾರಿಗೆ ಮತದಾನ ಮಾಡಲಿದ್ದಾರೆ ಎಂದು ಚಿನಾವಣಾ ಆಯೋಗ ತಿಳಿಸಿದೆ. ಇದು ಚುನಾವಣಾ ಫಲಿತಾಂಶದ ಮೇಲೆ ಗಮನಾರ್ಹ ಪ್ರಭಾವ ಬೀರಬಹುದಾದ ಅಂಶವಾಗಿದೆ. ಅಲ್ಲದೆ, 4.25 ಲಕ್ಷ ಹಿರಿಯ ನಾಗರಿಕರು (80 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು) ಮತ್ತು 100 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ ಮತದಾರರೂ ಈ ಚುನಾವಣಾ ಪ್ರಕ್ರಿಯೆಯ ಭಾಗಿಯಾಗಲಿದ್ದಾರೆ.
ಚುನಾವಣಾ ಆಯೋಗವು ಸುಗಮ ಮತ್ತು ನಿಷ್ಪಕ್ಷಪಾತ ಚುನಾವಣೆ ನಡೆಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ರಾಜ್ಯದ ಎಲ್ಲಾ ಮತದಾನ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಖಚಿತಪಡಿಸಲಾಗಿದೆ. ಪ್ರತಿ ಮತದಾನ ಕೇಂದ್ರದಲ್ಲೂ ಸುಮಾರು 1,200 ಮತದಾರರು ಮತದಾನ ಮಾಡಬಹುದೆಂದು ತಿಳಿಸಲಾಗಿದೆ. ಇದರಿಂದ ಮತದಾನ ಪ್ರಕ್ರಿಯೆ ವೇಗವಾಗಿ ಮತ್ತು ಸುಲಭವಾಗಿ ನಡೆಯಲು ಸಹಾಯಕವಾಗಿದೆ.
ಈ ಬಾರಿಯ ಚುನಾವಣೆಯಲ್ಲಿ ಚುನಾವಣಾ ಆಯೋಗವು ತನ್ನ ‘ಚುನಾವಣಾ ತರಬೇತಿ ಸಂಸ್ಥೆ’ (ಟ್ರೈನಿಂಗ್ ಇನ್ಸ್ಟಿಟ್ಯೂಟ್) ಮೂಲಕ ಒಂದು ಅಭೂತಪೂರ್ವ ಯೋಜನೆಯನ್ನು ಕೈಗೊಂಡಿದ್ದು, ಮೊದಲ ಬಾರಿಗೆ, ಜಿಲ್ಲಾ ಮತ್ತು ಕ್ಷೇತ್ರ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಏಜೆಂಟ್‌ಗಳಿಗೆ (ಅಧಿಕಾರಿಗಳು) ವ್ಯವಸ್ಥಿತ ತರಬೇತಿ ನೀಡಲಾಗುತ್ತಿದೆ. ಈ ತರಬೇತಿಯು ಮತದಾನ ಪ್ರಕ್ರಿಯೆ, ಭದ್ರತಾ ವ್ಯವಸ್ಥೆ, ಇವಿಎಂ ಮಷೀನುಗಳ ಬಳಕೆ ಮತ್ತು ಮಾದರಿ ನಡವಳಿಕೆ ಸಂಹಿತೆಯಂತಹ ವಿಷಯಗಳನ್ನು ಒಳಗೊಂಡಿದೆ. ಇದರಿಂದ ಚುನಾವಣೆಯು ಹೆಚ್ಚು ಪಾರದರ್ಶಕವಾಗಿ ಮತ್ತು ಸುವ್ಯವಸ್ಥಿತವಾಗಿ ನಡೆಯಲು ಸಹಾಯಕವಾಗಲಿದೆ.