ಮಧ್ಯಪ್ರದೇಶ: ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ನಲ್ಲಿ ಪ್ರೇಮಿಗಳ ದಿನದಂದೇ ಬೆಚ್ಚಿಬೀಳಿಸುವ ಹತ್ಯೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ನಿಶಾತ್‌ಪುರ ಪ್ರದೇಶದ ಖಾಲಿ ಜಾಗದಲ್ಲಿರುವ ಸೆಪ್ಟಿಕ್ ಟ್ಯಾಂಕ್‌ನಿಂದ 33 ವರ್ಷದ ಮಹಿಳೆಯ ಕೊಳೆತ ಶವ ಪತ್ತೆಯಾಗಿದೆ. ಪ್ರೀತಿ, ದ್ರೋಹ, ಜಗಳ ಹಾಗೂ ಬ್ಲ್ಯಾಕ್‌ಮೇಲ್ ಆರೋಪಗಳ ನಡುವೆ ನಡೆದ ಈ ಹತ್ಯೆ ಪ್ರಕರಣವನ್ನು ಪೊಲೀಸರು ಕೇವಲ 24 ಗಂಟೆಗಳಲ್ಲಿ ಭೇದಿಸಿದ್ದಾರೆ.
ಮೃತ ಮಹಿಳೆಯನ್ನು ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ನಿವಾಸಿ ಅಶ್ರಫಿ ಅಲಿಯಾಸ್ ಸಿಯಾ (33) ಎಂದು ಗುರುತಿಸಲಾಗಿದೆ. ತನಿಖೆಯ ಪ್ರಕಾರ, ಸಿಯಾ ಸುಮಾರು ಒಂದು ವರ್ಷದ ಹಿಂದೆ ಇನ್‌ಸ್ಟಾಗ್ರಾಂ ಮೂಲಕ ಭೋಪಾಲ್ ನಿವಾಸಿ ಸಮೀರ್ ಎಂಬ ವ್ಯಕ್ತಿಯನ್ನು ಪರಿಚಯಿಸಿಕೊಂಡಿದ್ದಳು. ಆರಂಭದಲ್ಲಿ ಸಾಮಾನ್ಯ ಚಾಟ್‌ಗಳಿಂದ ಶುರುವಾದ ಈ ಪರಿಚಯ ಶೀಘ್ರದಲ್ಲೇ ಪ್ರೀತಿಗೆ ತಿರುಗಿತ್ತು.
ಸಿಯಾ, ಮೂರು ತಿಂಗಳ ಹಿಂದೆ ಮಹಾರಾಷ್ಟ್ರದಲ್ಲಿದ್ದ ತನ್ನ ಮನೆ ಬಿಟ್ಟು ಭೋಪಾಲ್‌ಗೆ ಬಂದು ಸಮೀರ್ ಜೊತೆ ವಾಸಿಸಲು ಆರಂಭಿಸಿದ್ದಳು. ತನ್ನ ಜೀವನದ ಹೊಸ ಅಧ್ಯಾಯ ಆರಂಭವಾಗುತ್ತಿದೆ ಎಂದು ಆಕೆ ಭಾವಿಸಿದ್ದಳು. ಆದರೆ ಭೋಪಾಲ್‌ಗೆ ಬಂದ ಬಳಿಕ ಸಮೀರ್ ಈಗಾಗಲೇ ವಿವಾಹಿತನಾಗಿದ್ದು, ಇಬ್ಬರು ಮಕ್ಕಳ ತಂದೆ ಎಂಬ ಸತ್ಯ ಸಿಯಾ ಮುಂದೆ ಬಯಲಾಯಿತು.
ಈ ವಿಚಾರದಿಂದ ಮನೆಯಲ್ಲಿ ಆಗಾಗ ಜಗಳಗಳು ಉಂಟಾಗುತ್ತಿದ್ದವು. ಸಮೀರ್ ಪತ್ನಿ ಮತ್ತು ಸಿಯಾ ನಡುವೆ ಮಾತಿನ ಚಕಮಕಿ ನಡೆಯುತ್ತಿತ್ತು. ಸಮೀರ್ ತನ್ನ ವೈವಾಹಿಕ ಜೀವನದ ಹಲವು ಸಂಗತಿಗಳನ್ನು ಸಿಯಾ ಮುಂದೆ ಮರೆಮಾಡಿದ್ದನೆಂದು ಹೇಳಲಾಗಿದೆ.
ಸಿಯಾ ಸಮೀರ್ ಮೇಲೆ ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಳು ಎನ್ನಲಾಗಿದೆ. ಸಮೀರ್ ನಿರಾಕರಿಸಿದರೆ ಐದು ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದಳು ಮತ್ತು ಕಾನೂನು ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಒತ್ತಡದಿಂದಾಗಿ ಸಮೀರ್ ಕುಟುಂಬದಲ್ಲಿ ಜಗಳು ಹೆಚ್ಚಾಗಿತ್ತು. ಕೊನೆಗೆ ಸಮೀರ್ ಪತ್ನಿ ಜಬಲ್ಪುರದಲ್ಲಿರುವ ತನ್ನ ಪೋಷಕರ ಮನೆಗೆ ತೆರಳಿದ್ದಾಳೆ ಎನ್ನಲಾಗಿದೆ.
ಸೋಮವಾರ ಸಂಜೆ ಸಿಯಾ ಮತ್ತು ಸಮೀರ್ ನಡುವೆ ಮತ್ತೊಂದು ತೀವ್ರ ವಾಗ್ವಾದ ನಡೆದಿದೆ. ಕೋಪದ ಭರದಲ್ಲಿ ಸಮೀರ್ ಸಿಯಾಳನ್ನು ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಅಪರಾಧದ ಕುರುಹುಗಳನ್ನು ಅಳಿಸಲು ಸಮೀರ್ ತನ್ನ ಸಹೋದರ, ತಾಯಿ ಮತ್ತು ಸಹೋದರಿಯ ಸಹಾಯ ಪಡೆದಿದ್ದಾನೆ. ಮೃತದೇಹವನ್ನು ಕಬ್ಬಿಣದ ಪೆಟ್ಟಿಗೆಯಲ್ಲಿ ತುಂಬಿ, ಮನೆಯ ಸಮೀಪದ ಖಾಲಿ ಜಾಗದಲ್ಲಿದ್ದ ಸೆಪ್ಟಿಕ್ ಟ್ಯಾಂಕ್‌ಗೆ ಮಂಗಳವಾರ ಮಧ್ಯರಾತ್ರಿ ಎಸೆದಿದ್ದಾರೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.
ಗುರುವಾರ ಸಂಜೆ ಟ್ಯಾಂಕ್‌ನಿಂದ ದುರ್ವಾಸನೆ ಬರುತ್ತಿದೆ ಎಂದು ಹತ್ತಿರದಲ್ಲಿ ಆಟವಾಡುತ್ತಿದ್ದ ಮಕ್ಕಳು ದೂರು ನೀಡಿದ ಹಿನ್ನೆಲೆ ಸ್ಥಳೀಯರು ಪರಿಶೀಲನೆ ನಡೆಸಿದರು. ಸ್ಥಳೀಯರು ಟ್ಯಾಂಕ್ ಒಳಗೆ ಕಬ್ಬಿಣದ ಪೆಟ್ಟಿಗೆ ತೇಲುತ್ತಿರುವುದು ಕಂಡು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಪೆಟ್ಟಿಗೆಯನ್ನು ತೆರೆಯುತ್ತಿದ್ದಂತೆ ಒಳಗೆ ಕೊಳೆತ ಸ್ಥಿತಿಯಲ್ಲಿದ್ದ ಸಿಯಾಳ ಶವ ಪತ್ತೆಯಾಯಿತು.
ದೇಹವು ಕೊಳೆಯುವಿಕೆಯಿಂದ ಗಾಯದ ಗುರುತುಗಳು ಇರಲಿಲ್ಲ. ಆದರೆ ಕೈಯಲ್ಲಿ ಇದ್ದ ವಿಶಿಷ್ಟ ಹಚ್ಚೆ ಹಾಗೂ “26 ಮೇ 1992” ಎಂಬ ದಿನಾಂಕದ ಆಧಾರದಲ್ಲಿ ಗುರುತು ಪತ್ತೆಯಾಯಿತು. ನಿಶಾತ್‌ಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮನೋಜ್ ಪಟ್ವಾ ಪ್ರಕಾರ, ಶವವು ಮೂರರಿಂದ ನಾಲ್ಕು ದಿನಗಳಷ್ಟು ಹಳೆಯದಾಗಿದೆ.
ಪ್ರಕರಣದ ಬಳಿಕ ಸಮೀರ್ ತಲೆಮರೆಸಿಕೊಂಡಿದ್ದಾನೆ. ಆದರೆ ಶವವನ್ನು ವಿಲೇವಾರಿ ಮಾಡಲು ಸಹಾಯ ಮಾಡಿದ ಆರೋಪದ ಮೇಲೆ ಆತನ ಸಹೋದರ, ತಾಯಿ ಮತ್ತು ಸಹೋದರಿಯನ್ನು ಬಂಧಿಸಲಾಗಿದೆ. ಸಮೀರ್ ಪತ್ನಿಯ ಮೇಲೂ ಪೊಲೀಸರು ನಿಗಾ ಇಟ್ಟಿದ್ದಾರೆ.