ಬೆಳಗಾವಿ: ಸೈಬರ್ ಲೋಕದ ಮಾಯಾಜಾಲ ಮತ್ತು ಪ್ರೀತಿಯ ಹೆಸರಿನಲ್ಲಿ ನಡೆಯುವ ವಂಚನೆಗಳು ಒಂದಲ್ಲ ಎರಡಲ್ಲ. ಇದೇ ರೀತಿಯಾಗಿ ಯುವಕನೊಬ್ಬ ಪ್ರೀತಿಯ ಹೆಸರಿನಲ್ಲಿ ಯುವತಿಯೊಬ್ಬಳಿಗೆ ನಂಬಿಸಿ, ವಂಚಿಸಿದ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಯುವತಿಗೆ ಲಕ್ಷಾಂತರ ರೂಪಾಯಿ ವಂಚಿಸಿ, ಯುವತಿಯ ಖಾಸಗಿ ವಿಡಿಯೋ ದೃಶ್ಯಗಳನ್ನ ವೈರಲ್ ಮಾಡೋದಾಗಿ ಬ್ಲಾಕ್‌ಮೇಲ್ ಮಾಡೋದಾಗಿ ವಂಚಿಸಿದ ಪ್ರಕರಣ ವರದಿಯಾಗಿದೆ.
ಯುವಕನೊಬ್ಬ ಮದುವೆಯಾಗುವ ನಾಟಕವಾಡಿ ಪ್ರೇಯಸಿಯ ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್‌ಮೇಲ್ ಮಾಡುವ ಮೂಲಕ ಯುವಕನೊಬ್ಬ ಬರೋಬ್ಬರಿ 19 ಲಕ್ಷ ರೂಪಾಯಿ ಹಣ ಹಾಗೂ 150 ಗ್ರಾಂ ಚಿನ್ನಾಭರಣವನ್ನು ದೋಚಿರುವ ಘಟನೆ ಬೆಳಗಾವಿಯ ಶಹಾಪುರದಲ್ಲಿ ನಡೆದಿದೆ.
ಫೇಸ್‌ಬುಕ್ ಪರಿಚಯ ತಂದ ಸಂಕಷ್ಟ
ಬೆಳಗಾವಿಯ ಮಾಧವಾ ಕಾಲೋನಿ ನಿವಾಸಿ ಈಶ್ವರಸಿಂಗ್ ಪ್ರೇಮಸಿಂಗ್ ಬಡಗೂಜರ್ ಎಂಬಾತ ಈ ಪ್ರಕರಣದ ಆರೋಪಿಯಾಗಿದ್ದಾನೆ. ಆರೋಪಿ ಈಶ್ವರಸಿಂಗ್ ಫೇಸ್‌ಬುಕ್ ಮೂಲಕ ಯುವತಿಯ ಪರಿಚಯ ಮಾಡಿಕೊಂಡಿದ್ದ. ಆರಂಭದಲ್ಲಿ ಸ್ನೇಹದಿಂದ ಶುರುವಾದ ಸಂಬಂಧ, ಇಬ್ಬರ ನಡುವೆ ಪ್ರೀತಿಯಾಗಿದೆ. ಜೊತೆಗೆ ಯುವಕ ಆಕೆಯನ್ನ ಮದುವೆಯಾಗಿ ಭಸರಸೆ ನೀಡಿ, ಆಕೆಯನ್ನು ಹಲವೆಡೆ ಸುತ್ತಾಡಿಸಿದ್ದಾನೆ. ಈ ವೇಳೆ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದಲ್ಲದೆ, ಆಕೆಗೆ ತಿಳಿಯದಂತೆ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿಕೊಂಡಿದ್ದಾನೆ.
ಆ ವಿಡಿಯೋಗಳನ್ನ ಇಟ್ಟುಕೊಂಡು, ನೀನು ಕೇಳಿದಷ್ಟು ಹಣ ನೀಡದಿದ್ದರೆ ಈ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಡುತ್ತೇನೆ, ನಿನ್ನ ಮಾನ ಹರಾಜು ಹಾಕುತ್ತೇನೆ ಎಂದು ಬೆದರಿಸಿದ್ದಾನೆ. ಇದರಿಂದ ಹೆದರಿದ ಸಂತ್ರಸ್ತೆ, ಹಂತ ಹಂತವಾಗಿ ತನ್ನ ತಂದೆ-ತಾಯಿಯ ಬಳಿ ಇದ್ದ ಹಣವನ್ನೆಲ್ಲ ಈತನಿಗೆ ನೀಡಿದ್ದಾಳೆ.
ಸಂತ್ರಸ್ತೆಯು ತನ್ನ ತಂದೆಯ ಹೆಸರಿನಲ್ಲಿದ್ದ ಫಿಕ್ಸೆಡ್ ಡಿಪಾಸಿಟ್ (FD) ಹಣ ಮತ್ತು ತಾಯಿಯ ಮೈಮೇಲಿದ್ದ ಸುಮಾರು 150 ಗ್ರಾಂ ಚಿನ್ನಾಭರಣಗಳನ್ನು ಈತನಿಗೆ ನೀಡಿದ್ದಾಳೆ. ಗೂಗಲ್ ಪೇ ಮೂಲಕವೇ ಸುಮಾರು 19 ಲಕ್ಷ ರೂಪಾಯಿಗಳನ್ನು ವರ್ಗಾಯಿಸಿಕೊಂಡಿದ್ದಾನೆ.
3 ಕೋಟಿ ರೂಪಾಯಿ ವರದಕ್ಷಿಣೆ ಬೇಡಿಕೆ
ಇಷ್ಟೆಲ್ಲಾ ಲೂಟಿ ಮಾಡಿದರೂ ಆರೋಪಿ ಮತ್ತಷ್ಟು ವಂಚಿಸಲು ಮುಂದಾಗಿದ್ದಾನೆ. ಅಶ್ಲೀಲ ವಿಡಿಯೋ ಇಟ್ಟುಕೊಂಡೇ ಮದುವೆಯಾಗಲು ಒಪ್ಪಿದ ಈತ, ತನ್ನ ತಾಯಿಯ ಮೂಲಕ ಹೊಸ ದಾಳ ಉರುಳಿಸಿದ್ದಾನೆ. ನನ್ನ ಮಗ ನಿನ್ನನ್ನು ಮದುವೆಯಾಗಬೇಕಾದರೆ 3 ಕೋಟಿ ರೂಪಾಯಿ ಕೊಡಬೇಕು ಎಂದು ಆರೋಪಿಯ ತಾಯಿ ಬೇಡಿಕೆ ಇಟ್ಟಿದ್ದಾಳೆ ಎಂದು ಸಂತ್ರಸ್ತೆ ಕಣ್ಣೀರಿಡುತ್ತಾ ದೂರಿನಲ್ಲಿ ವಿವರಿಸಿದ್ದಾಳೆ.
ಈ ಘಟನೆಯ ಕುರಿತು ಶಹಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರೂ, ನ್ಯಾಯ ಸಿಗುವ ಬದಲು ಅನ್ಯಾಯವಾಗುತ್ತಿದೆ ಎಂಬುದು ಸಂತ್ರಸ್ತೆಯ ಗಂಭೀರ ಆರೋಪ. ಪೊಲೀಸರು ಆರೋಪಿಗಳ ಜೊತೆ ಶಾಮೀಲಾಗಿದ್ದಾರೆ. ಬ್ಯಾಂಕ್‌ನಿಂದ ರಿಕವರಿ ಮಾಡಿದ್ದ ಚಿನ್ನವನ್ನು ಪೊಲೀಸರು ಮರಳಿ ವಂಚಕನಿಗೇ ನೀಡಿದ್ದಾರೆ ಎಂದು ಆಕೆ ಆರೋಪಿಸಿದ್ದಾಳೆ. ಸ್ಥಳೀಯ ಪೊಲೀಸರ ವರ್ತನೆಯಿಂದ ಬೇಸತ್ತ ಯುವತಿ, ನ್ಯಾಯಕ್ಕಾಗಿ ಇಂದು ಬೆಳಗಾವಿ ಪೊಲೀಸ್ ಕಮಿಷನರ್ ಕಚೇರಿಗೆ ಧಾವಿಸಿ ನ್ಯಾಯಕ್ಕಾಗಿ ಮನವಿ ಸಲ್ಲಿಸಿದ್ದಾಳೆ.
