ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ: ವಿಧವೆಯ ಮೇಲೆ ಸಾಮೂಹಿಕ ಅ*ತ್ಯಾಚಾ*ರ!

BeFunky collage 2026 01 06T085633.100

ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲಿನ ದಾಳಿಗಳು ನಿರಂತರವಾಗಿ ನಡೆಯುತ್ತಿರುವ ನಡುವೆ, ಜನವರಿ 5ರಂದು ಇಬ್ಬರು ಹಿಂದೂಗಳ ಮೇಲೆ ಭಯಾನಕ ದಾಳಿ ನಡೆದಿದೆ. ಒಬ್ಬ ಹಿಂದೂ ಪತ್ರಕರ್ತ ಮತ್ತು ಐಸ್ ಕಾರ್ಖಾನೆ ಮಾಲೀಕನನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿದ್ದು, ಮತ್ತೊಬ್ಬ ಹಿಂದೂ ವಿಧವಾ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಚಿತ್ರಹಿಂಸೆ ನೀಡಲಾಗಿದೆ. ಇದು ಕಳೆದ ಮೂರು ವಾರಗಳಲ್ಲಿ ನಡೆದ ಐದನೇ ಹಿಂದೂ ಹತ್ಯೆಯಾಗಿದ್ದು, ದೇಶದಲ್ಲಿ ಕೋಮು ಉದ್ವಿಗ್ನತೆಯನ್ನು ಹೆಚ್ಚಿಸಿದೆ.

ಪತ್ರಕರ್ತ ರಾಣಾ ಪ್ರತಾಪ್ ಬೈರಾಗಿ ಹತ್ಯೆ

ಜಶೋರ್ ಜಿಲ್ಲೆಯ ಮಣಿರಾಂಪುರ ಉಪಜಿಲ್ಲಾ ಕೊಪಾಲಿಯಾ ಬಜಾರ್‌ನಲ್ಲಿ ರಾಣಾ ಪ್ರತಾಪ್ ಬೈರಾಗಿ (45) ಅವರನ್ನು ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ತಲೆಗೆ ಮೂರು ಬಾರಿ ಗುಂಡು ಹಾರಿಸಿ, ಕುತ್ತಿಗೆ ಕೊಯ್ದು ಹತ್ಯೆ ಮಾಡಿದ್ದಾರೆ. ರಾಣಾ ಅವರು ಐಸ್ ಕಾರ್ಖಾನೆ ಮಾಲೀಕರಾಗಿದ್ದಲ್ಲದೆ, ‘ದೈನಿಕ್ ಬಿಡಿ ಖಬರ್’ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರೂ ಆಗಿದ್ದರು. ಪೊಲೀಸರು ಸ್ಥಳದಿಂದ ಏಳು ಖಾಲಿ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿಯ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂದೂ ವಿಧವೆಯ ಮೇಲೆ ಸಾಮೂಹಿಕ ಅ*ತ್ಯಾಚಾ*ರ ಮತ್ತು ಚಿತ್ರಹಿಂಸೆ

ಝಿನೈದಹ ಜಿಲ್ಲೆಯ ಕಾಲಿಗಂಜ್ ಪ್ರದೇಶದಲ್ಲಿ 40 ವರ್ಷದ ಹಿಂದೂ ವಿಧವಾ ಮಹಿಳೆಯ ಮೇಲೆ ಶಾಹೀನ್ ಮತ್ತು ಹಸನ್ ಎಂಬ ಇಬ್ಬರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಆಕೆಯನ್ನು ಮರಕ್ಕೆ ಕಟ್ಟಿ ಕೂದಲು ಕತ್ತರಿಸಿ, ಹಣ ಕೇಳಿ ಚಿತ್ರಹಿಂಸೆ ನೀಡಿದ್ದಾರೆ. ದಾಳಿಯ ವೀಡಿಯೋವನ್ನೂ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಆಕೆ ಭೂಮಿ ಮತ್ತು ಮನೆ ಖರೀದಿಸಿದ ನಂತರ ದುಷ್ಕರ್ಮಿಗಳು ಕಿರುಕುಳ ನೀಡುತ್ತಿದ್ದರು ಎಂದು ತಿಳಿದುಬಂದಿದೆ. ಸಂತ್ರಸ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಘಟನೆಗಳು ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯದಲ್ಲಿ ಭೀತಿಯ ವಾತಾವರಣ ಸೃಷ್ಟಿಸಿವೆ. ಕಳೆದ ಮೂರು ವಾರಗಳಲ್ಲಿ ದೀಪು ಚಂದ್ರ ದಾಸ್, ಅಮೃತ್ ಮೊಂಡಲ್, ಖೊಕೋನ್ ಚಂದ್ರ ದಾಸ್ ಸೇರಿದಂತೆ ಐದು ಹತ್ಯೆಗಳು ನಡೆದಿವೆ. ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ನೇತೃತ್ವದ ಆಡಳಿತ ಅಲ್ಪಸಂಖ್ಯಾತರ ರಕ್ಷಣೆಯಲ್ಲಿ ವಿಫಲವಾಗಿದೆ ಎಂದು ಆರೋಪಿಸಲಾಗಿದೆ.

ಭಾರತ ಸರ್ಕಾರ ಮತ್ತು ಅಂತಾರಾಷ್ಟ್ರೀಯ ಮಾನವ ಹಕ್ಕು ಸಂಘಟನೆಗಳು ಈ ಘಟನೆಗಳನ್ನು ಖಂಡಿಸಿದ್ದು, ಕಾನೂನು ಸುವ್ಯವಸ್ಥೆಯ ಹದಗೆಡುವಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿವೆ. ಹಿಂದೂ ಸಮುದಾಯದ ನಾಯಕರು ತಕ್ಷಣದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

Exit mobile version