ಇನ್‌ಸ್ಟಾಗ್ರಾಮ್‌ಗೆ ಸೋನಿಯಾ ಗಾಂಧಿ ಎಂಟ್ರಿ; ‘ಬಿಲಾಂಗಿಂಗ್’ ಪುಸ್ತಕ ಕುರಿತು ಪೋಸ್ಟ್‌

Untitled design 2026 10 22T162509.289

ನವದೆಹಲಿ: ಕಾಂಗ್ರೆಸ್‌ನ ಹಿರಿಯ ನಾಯಕಿ ಹಾಗೂ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ಇನ್‌ಸ್ಟಾಗ್ರಾಮ್‌ಗೆ ಅಧಿಕೃತವಾಗಿ ಪ್ರವೇಶಿಸುವ ಮೂಲಕ ಗಮನ ಸೆಳೆದಿದ್ದಾರೆ. ತಮ್ಮ ಬಹುನಿರೀಕ್ಷಿತ ಆತ್ಮಚರಿತ್ರೆ ‘Belonging: A Journey of Love’ ಪುಸ್ತಕದ ಮೊದಲ ನೋಟವನ್ನು ವಿಡಿಯೋ ರೀಲ್ ಮೂಲಕ ಹಂಚಿಕೊಂಡಿರುವ ಅವರು, ಸಾಮಾಜಿಕ ಜಾಲತಾಣದಲ್ಲಿ ಹೊಸ ಅಧ್ಯಾಯ ಆರಂಭಿಸಿದ್ದಾರೆ.

79ನೇ ವಯಸ್ಸಿನಲ್ಲಿ ಇನ್‌ಸ್ಟಾಗ್ರಾಮ್‌ಗೆ ಪ್ರವೇಶಿಸಿರುವ ಸೋನಿಯಾ ಗಾಂಧಿ ಅವರ ಈ ನಡೆ ರಾಜಕೀಯ ವಲಯದಲ್ಲಿ  ಕುತೂಹಲ ಮೂಡಿಸಿದೆ. ಇದುವರೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕವಾಗಿ ಹೆಚ್ಚು ಸಕ್ರಿಯರಾಗಿರದ ಅವರು, ಇದೀಗ ತಮ್ಮ ಆತ್ಮಚರಿತ್ರೆಯ ಮೂಲಕ ಡಿಜಿಟಲ್ ಜಗತ್ತಿನತ್ತ ಮೊದಲ ಹೆಜ್ಜೆ ಇಟ್ಟಿದ್ದಾರೆ.

ಮೊದಲ ಪೋಸ್ಟ್‌ನಲ್ಲೇ ಆತ್ಮಚರಿತ್ರೆಯ ಪರಿಚಯ

ಸೋನಿಯಾ ಗಾಂಧಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಮೊದಲ ವಿಡಿಯೋದಲ್ಲಿ, ತಮ್ಮ ಆತ್ಮಚರಿತ್ರೆಯ ಮುದ್ರಿತ ಪ್ರತಿಯನ್ನು ಮೊದಲ ಬಾರಿಗೆ ಕೈಗೆತ್ತಿಕೊಳ್ಳುವ ಕ್ಷಣವನ್ನು ಕಾಣಬಹುದು. ಪುಸ್ತಕದ ಪುಟಗಳನ್ನು ತಿರುವುತ್ತಾ ಅದರಲ್ಲಿರುವ ಹಳೆಯ ಛಾಯಾಚಿತ್ರಗಳನ್ನು ಅವರು ಕುತೂಹಲದಿಂದ ವೀಕ್ಷಿಸುತ್ತಾರೆ.

ಈ ಸಂದರ್ಭದಲ್ಲಿ ಅವರ ಪುತ್ರಿ ಪ್ರಿಯಾಂಕಾ ಗಾಂಧಿ ಕೂಡ ಪಕ್ಕದಲ್ಲೇ ಕುಳಿತಿರುತ್ತಾರೆ. ಪುಸ್ತಕದಲ್ಲಿರುವ ಅಪರೂಪದ ಹಳೆಯ ಚಿತ್ರಗಳನ್ನು ಮಗಳಿಗೆ ತೋರಿಸುತ್ತಾ, “ಪ್ರಿಯಾಂಕಾ, ನೋಡು, ಇಲ್ಲಿ ತುಂಬಾ ಹಳೆಯ ಚಿತ್ರಗಳಿವೆ” ಎಂದು ಸೋನಿಯಾ ಗಾಂಧಿ ಸಂತಸ ವ್ಯಕ್ತಪಡಿಸುತ್ತಾರೆ. ತಾಯಿ ಮತ್ತು ಮಗಳ ನಡುವಿನ ಈ ಆತ್ಮೀಯ ಕ್ಷಣ ವಿಡಿಯೋಗೆ ವಿಶೇಷ ಮೆರುಗು ನೀಡಿದೆ.

ಪುಸ್ತಕದಲ್ಲಿ ಸೋನಿಯಾ ಗಾಂಧಿ ಅವರ ಕುಟುಂಬದ ಹಲವು ನೆನಪುಗಳಿಗೆ ಸಂಬಂಧಿಸಿದ ಛಾಯಾಚಿತ್ರಗಳಿವೆ. ಪತಿ, ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ, ಪುತ್ರ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರ ಬಾಲ್ಯದ ಕ್ಷಣಗಳ ಚಿತ್ರಗಳೂ ಈ ಕೃತಿಯಲ್ಲಿವೆ ಎಂದು ತಿಳಿಸಲಾಗಿದೆ. ವಿಡಿಯೋ ಕೊನೆಯಲ್ಲಿ ಸಿಹಿ ಹಂಚಿಕೊಂಡು ಸಂಭ್ರಮಿಸುವ ದೃಶ್ಯವೂ ಗಮನ ಸೆಳೆಯುತ್ತದೆ.

ಪ್ರೀತಿ, ಕರ್ತವ್ಯ ಮತ್ತು ಬದುಕಿನ ಪಯಣದ ಕಥೆ

ತಮ್ಮ ಮೊದಲ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಸೋನಿಯಾ ಗಾಂಧಿ ಆತ್ಮಚರಿತ್ರೆಯ ಕುರಿತು ಭಾವನಾತ್ಮಕ ಸಂದೇಶವನ್ನೂ ಹಂಚಿಕೊಂಡಿದ್ದಾರೆ.

‘Belonging: A Journey of Love’ ಕೃತಿಯು ಪ್ರೀತಿ, ಕರ್ತವ್ಯ, ಅಗಲಿಕೆಯ ನೋವು ಹಾಗೂ ಬದುಕಿನ ನೈಜ ಅರ್ಥವನ್ನು ಕಂಡುಕೊಳ್ಳುವ ಪಯಣದ ಕಥೆಯಾಗಿದೆ ಎಂದು ಅವರು ವಿವರಿಸಿದ್ದಾರೆ. ಈ ಪುಸ್ತಕವನ್ನು ಓದುಗರ ಕೈಗೆ ತಲುಪಿಸಲು ತಾವು ಕಾತರದಿಂದ ಕಾಯುತ್ತಿರುವುದಾಗಿಯೂ ಸಂತಸ ಹಂಚಿಕೊಂಡಿದ್ದಾರೆ.

ಆತ್ಮಚರಿತ್ರೆಯ ಮೂಲಕ ತಮ್ಮ ಜೀವನದ ಅನುಭವಗಳು, ಕುಟುಂಬದ ನೆನಪುಗಳು ಹಾಗೂ ಬದುಕಿನಲ್ಲಿ ಎದುರಿಸಿದ ವಿವಿಧ ಸನ್ನಿವೇಶಗಳನ್ನು ಓದುಗರೊಂದಿಗೆ ಹಂಚಿಕೊಳ್ಳಲು ಸೋನಿಯಾ ಗಾಂಧಿ ಮುಂದಾಗಿದ್ದಾರೆ. 

ಯಾರನ್ನೆಲ್ಲ ಫಾಲೋ ಮಾಡುತ್ತಿದ್ದಾರೆ?

ತಮ್ಮ ಮೊದಲ ಪೋಸ್ಟ್‌ನಲ್ಲಿ ಸೋನಿಯಾ ಗಾಂಧಿ ಅವರು ಪುತ್ರ ರಾಹುಲ್ ಗಾಂಧಿ, ಪುತ್ರಿ ಪ್ರಿಯಾಂಕಾ ಗಾಂಧಿ ಹಾಗೂ ಪುಸ್ತಕದ ಪ್ರಕಾಶನ ಸಂಸ್ಥೆಯಾದ ಹಾರ್ಪರ್‌ಕಾಲಿನ್ಸ್ ಇಂಡಿಯಾವನ್ನು ಟ್ಯಾಗ್ ಮಾಡಿದ್ದಾರೆ.

ಆರಂಭಿಕ ಹಂತದಲ್ಲಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಕಾಂಗ್ರೆಸ್‌ನ ಅಧಿಕೃತ ಖಾತೆ, ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಫಾಲೋ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

Exit mobile version