ಲಖನೌ: ಉತ್ತರ ಪ್ರದೇಶದ ಅಯೋಧ್ಯೆಯ ಪುರ ಕಲಂದರ್ ಪೊಲೀಸ್ ಠಾಣೆ ವ್ಯಾಪ್ತಿಯ ಪಾಗ್ಲಾ ಭಾರಿ ಗ್ರಾಮದಲ್ಲಿ ಸಂಭವಿಸಿದ ಭೀಕರ ಸ್ಫೋಟವೊಂದರಿಂದ ಮನೆಯೊಂದು ಕುಸಿದು ಬಿದ್ದಿದ್ದು, ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ.
ಈ ಸ್ಫೋಟದಿಂದ ಮನೆ ಸಂಪೂರ್ಣವಾಗಿ ಜಖಂ ಆಗಿದ್ಹದು,ಹಲವರು ಗಾಯಗೊಂಡಿದ್ದು, ಅವಶೇಷಗಳಡಿಯಲ್ಲಿ ಇನ್ನೂ ಕೆಲವರು ಸಿಲುಕಿರಬಹುದೆಂದು ಶಂಕಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಗಾಗಿ ಸ್ಥಳೀಯ ಪೊಲೀಸರು, ಅಗ್ನಿಶಾಮಕ ದಳ, ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ (ಎನ್‌ಡಿಆರ್‌ಎಫ್) ತಂಡಗಳು ತಕ್ಷಣ ಸ್ಥಳಕ್ಕೆ ಧಾವಿಸಿವೆ.
ಸ್ಫೋಟವು ಪುರ ಕಲಂದರ್ ಪೊಲೀಸ್ ಠಾಣೆಯಿಂದ ಸ್ವಲ್ಪ ದೂರದಲ್ಲಿ ಸಂಭವಿಸಿದ್ದು, ಇದರ ಶಬ್ದವು ಗ್ರಾಮದಾದ್ಯಂತ ಕೇಳಿಬಂದಿತು. ಈ ಘಟನೆಯಿಂದ ಸುತ್ತಮುತ್ತಲಿನ ಮನೆಗಳಿಗೂ ಹಾನಿಯಾಗಿದ್ದು, ನಿವಾಸಿಗಳಲ್ಲಿ ಭೀತಿಯ ವಾತಾವರಣವನ್ನು ಸೃಷ್ಟಿಸಿದೆ. ಸ್ಥಳಕ್ಕೆ ಆಗಮಿಸಿದ ರಕ್ಷಣಾ ತಂಡಗಳು ತೀವ್ರ ಕಾರ್ಯಾಚರಣೆಯಲ್ಲಿ ತೊಡಗಿವೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಯೋಧ್ಯಾ ವೃತ್ತದ ಪೊಲೀಸ್ ಅಧಿಕಾರಿ ದೇವೇಶ್ ಚತುರ್ವೇದಿ ಅವರು, ಈ ಸ್ಫೋಟಕ್ಕೆ ಗೃಹಬಳಕೆಯ ಅನಿಲ ಸಿಲಿಂಡರ್ ಕಾರಣವಿರಬಹುದು ಎಂದು ಆರಂಭಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಹೇಳಿದ್ದಾರೆ. “ಇಲ್ಲಿಯವರೆಗೆ ಐದು ಸಾವುಗಳು ದೃಢಪಟ್ಟಿವೆ. ರಕ್ಷಣಾ ಕಾರ್ಯಾಚರಣೆಗಳು ಇನ್ನೂ ನಡೆಯುತ್ತಿವೆ, ಮತ್ತು ಇನ್ನಷ್ಟು ಸಾವು-ನೋವುಗಳ ಸಂಖ್ಯೆಯ ಬಗ್ಗೆ ಸ್ಪಷ್ಟತೆಗಾಗಿ ಕಾಯಲಾಗುತ್ತಿದೆ,” ಎಂದು ತಿಳಿಸಿದ್ದಾರೆ. ಸ್ಫೋಟದ ನಿಖರ ಕಾರಣವನ್ನು ಗುರ್ತಿಸಲು ವಿಧಿವಿಜ್ಞಾನ ತಂಡಗಳನ್ನು ಕರೆಯಲಾಗಿದ್ದು, ತನಿಖೆಯು ತೀವ್ರಗೊಂಡಿದೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ದುರಂತದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳಿಗೆ ತಕ್ಷಣದ ಚಿಕಿತ್ಸೆ ಮತ್ತು ಸಿಲುಕಿರುವವರ ರಕ್ಷಣೆಗಾಗಿ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. “ಈ ಘಟನೆಯಿಂದ ಉಂಟಾದ ಜೀವಹಾನಿಯಿಂದ ತೀವ್ರವಾಗಿ ಕಳವಳಗೊಂಡಿದ್ದೇನೆ. ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತಗೊಳಿಸಲಾಗಿದೆ, ಮತ್ತು ಗಾಯಾಳುಗಳಿಗೆ ಎಲ್ಲಾ ಸಹಾಯವನ್ನು ಒದಗಿಸಲಾಗುವುದು,” ಎಂದು ಅವರು ಹೇಳಿದ್ದಾರೆ. ಸ್ಥಳೀಯ ಆಡಳಿತವು ಗಾಯಾಳುಗಳಿಗೆ ವೈದ್ಯಕೀಯ ಸೌಲಭ್ಯವನ್ನು ಒದಗಿಸುವ ಜೊತೆಗೆ, ಸಂತ್ರಸ್ತ ಕುಟುಂಬಗಳಿಗೆ ಬೆಂಬಲ ನೀಡಲು ಕ್ರಮ ಕೈಗೊಂಡಿದೆ.