ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಮತ್ತು ದೆಹಲಿ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ. ಹರಿಯಾಣ ಸರ್ಕಾರ ಯಮುನಾ ನದಿ ನೀರಿನಲ್ಲಿ ವಿಷ ಬೆರೆಸುತ್ತಿದೆ ಎಂದು ಆರೋಪಿಸಿದ್ದ ಕೇಜ್ರಿವಾಲ್ ವಿರುದ್ಧ ಇದೀಗ ಕೇಸ್ ದಾಖಲಾಗಿದೆ. ಹರಿಯಾಣದಲ್ಲಿ ದಾಖಲಾಗಿರುವ ಪ್ರಕರಣದಲ್ಲಿ, ಆಮ್ ಆದ್ಮಿ ಪಕ್ಷದ ಮುಖ್ಯಸ್ಥನ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ವಿಭಾಗಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ.
ಈ ಆರೋಪಗಳಲ್ಲಿ ಗಲಭೆಗಳನ್ನು ಪ್ರಚೋದಿಸುವುದು, ದ್ವೇಷವನ್ನು ಉತ್ತೇಜಿಸುವುದು, ಯಾರಿಗಾದರೂ ಹಾನಿ ಮಾಡುವ ಉದ್ದೇಶದಿಂದ ಸುಳ್ಳು ಆರೋಪ ಮಾಡುವುದು ಮತ್ತು ನಾಗರಿಕರ ಧಾರ್ಮಿಕ ಭಾವನೆಗಳನ್ನು ಅವಮಾನಿಸುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳನ್ನು ಮಾಡುವುದು ಸೇರಿವೆ.
ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ವಕೀಲ
ಕೇಜ್ರಿವಾಲ್ ವಿರುದ್ಧ ಶಹಾಬಾದ್ ವಕೀಲ ಜಗಮೋಹನ್ ಮಂಚಂದ ದೂರು ನೀಡಿದ್ದರು. ದೂರನ್ನು ಆಧರಿಸಿ ಶಹಾಬಾದ್ ಪೊಲೀಸ್ ಠಾಣೆಯಲ್ಲಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಗಂಭೀರ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನ್ಯಾಯಾಲಯದ ಆದೇಶದ ಮೇರೆಗೆ ಈ ಪ್ರಕರಣ ದಾಖಲಾಗಿದೆ. ಇತ್ತೀಚೆಗೆ ಅರವಿಂದ್ ಕೇಜ್ರಿವಾಲ್ ಅವರು ಹರಿಯಾಣದ ಬಿಜೆಪಿ ಸರ್ಕಾರ ಯಮುನಾ ನೀರಿನಲ್ಲಿ ವಿಷ ಬೆರೆಸಿ ದೆಹಲಿಗೆ ಕಳುಹಿಸುತ್ತಿದೆ ಎಂದು ಹೇಳಿಕೆ ನೀಡಿದ್ದರು. ವಕೀಲ ಜಗಮೋಹನ್ ಮಂಚಂದ ಈ ಹೇಳಿಕೆಯನ್ನು ರಾಜಕೀಯ ಎಂದು ಕರೆದು ಕೇಜ್ರಿವಾಲ್ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು, ನಂತರ ಶಹಾಬಾದ್ ಪೊಲೀಸ್ ಠಾಣೆಯಲ್ಲಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಪ್ರಕರಣ ದಾಖಲಾಗಿದೆ.
ಕೇಜ್ರಿವಾಲ್ ಹೇಳಿದ್ದೇನು?
ಹರಿಯಾಣ ಸರ್ಕಾರದ ವಿರುದ್ಧ ಆರೋಪ ಮಾಡುವ ಭರದಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಹರಿಯಾಣ ಸರ್ಕಾರ ಯಮುನಾ ನೀರಿನಲ್ಲಿ ವಿಷ ಬೆರೆಸಿದೆ ಎಂದು ಹೇಳಿದ್ದರು. ಯಮುನಾ ನದಿಯಲ್ಲಿ ಅಮೋನಿಯಾ ಪ್ರಮಾಣವನ್ನು ಪತ್ತೆಹಚ್ಚಿದ ದೆಹಲಿ ಸರ್ಕಾರದ ಎಂಜಿನಿಯರ್‌ಗಳಿಗೆ ಧನ್ಯವಾದಗಳು. ಇದು ದೆಹಲಿಯನ್ನು ದೊಡ್ಡ ಪ್ರಮಾಣದ ನರಮೇಧದಿಂದ ರಕ್ಷಿಸಿತು. ಹರಿಯಾಣ ಸರ್ಕಾರ ಯಮುನಾ ನದಿಗೆ ಅಮೋನಿಯಾ ಎಂಬ ವಿಷವನ್ನು ಬಿಡುಗಡೆ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದರು. ಇದು ದೆಹಲಿ ಜನರ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂದು ಕೇಜ್ರಿವಾಲ್ ಆರೋಪ ಮಾಡಿದ್ದರು.
ಅರವಿಂದ್ ಕೇಜ್ರಿವಾಲ್ ಹರಿಯಾಣ ಸರ್ಕಾರದ ಮೇಲೆ ಅಂತಹ ಹೇಳಿಕೆಯನ್ನು ನೀಡಿದ್ದು ಅವರ ತೊಂದರೆಗಳನ್ನು ಹೆಚ್ಚಿಸಿದೆ. ಈ ಹೇಳಿಕೆಯ ವಿರುದ್ಧ ಬಿಜೆಪಿ ಮತ್ತು ಹರಿಯಾಣ ಸರ್ಕಾರ ಎರಡೂ ಕೇಜ್ರಿವಾಲ್ ವಿರುದ್ಧ ಕಿಡಿ ಕಾರಿ ಚುನಾವಣಾ ಆಯೋಗಕ್ಕೂ ದೂರು ನೀಡಿದವು. ಇದಾದ ನಂತರ, ಆಮ್ ಆದ್ಮಿ ಪಕ್ಷದ ನಿಯೋಗವೊಂದು ಈ ವಿಷಯದ ಬಗ್ಗೆ ಚುನಾವಣಾ ಆಯೋಗವನ್ನು ಭೇಟಿ ಮಾಡಿತು. ನಂತರ, ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಕೂಡ ಚುನಾವಣಾ ಆಯೋಗವನ್ನು ತಲುಪಿದ್ದರು. ಕೇಜ್ರಿವಾಲ್ ಅವರ ಆರೋಪಗಳನ್ನು ತನಿಖೆ ಮಾಡಬೇಕೆಂದು ಎರಡೂ ವಿರೋಧ ಪಕ್ಷಗಳು ಒತ್ತಾಯಿಸಿದವು. ಅಲ್ಲದೆ, ಯಾವುದೇ ಪಕ್ಷವು ಸುಳ್ಳು ಹೇಳಿಕೆಗಳನ್ನು ನೀಡುತ್ತಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದವು. ಇದಾದ ಸ್ವಲ್ಪ ಸಮಯದ ನಂತರ, ಆಯೋಗವು ಅರವಿಂದ್ ಕೇಜ್ರಿವಾಲ್ ಅವರಿಂದ ಉತ್ತರವನ್ನು ಕೇಳಿತ್ತು.