ವಿವಾಹಿತ ಮಹಿಳೆಯ ಕೊ*ಲೆಗೈದು ಶವವನ್ನು ಫ್ರಿಡ್ಜ್‌ನಲ್ಲಿಟ್ಟ ನೌಕಾಪಡೆಯ ಉದ್ಯೋಗಿ

Untitled design 2026 03 30T113517.222

ಹೈದರಾಬಾದ್, ಮಾರ್ಚ್ 30: ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯಲ್ಲಿ ದಾರುಣ ಘಟನೆಯೊಂದು ನಡೆದಿದೆ. ನೌಕಾಪಡೆಯ ಉದ್ಯೋಗಿಯೊಬ್ಬ ವಿವಾಹಿತ ಮಹಿಳೆಯನ್ನು ಕೊಲೆಗೈದು, ಮೃತದೇಹವನ್ನು ತುಂಡರಿಸಿ ಫ್ರಿಡ್ಜ್ನಲ್ಲಿ ತುಂಬಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಆರೋಪಿ ರವೀಂದ್ರ ನಂತರ ಪೊಲೀಸರಿಗೆ ಶರಣಾಗಿದ್ದಾನೆ.

ವಿಜಯನಗರ ಜಿಲ್ಲೆಯ ಮೂಲದ ರವೀಂದ್ರ ನೌಕಾಪಡೆಯಲ್ಲಿ ಉದ್ಯೋಗಿಯಾಗಿದ್ದಾನೆ. ಈತನ ಪತ್ನಿ ಇತ್ತೀಚೆಗೆ ತವರು ಮನೆಗೆ ತೆರಳಿದ್ದಳು. ಪತ್ನಿ ಊರಲ್ಲಿಲ್ಲದ ಸಮಯದಲ್ಲಿ ರವೀಂದ್ರಗೆ ವಿವಾಹಿತ ಮಹಿಳೆ ಮೌನಿಕಾ (28) ಪರಿಚಯವಾಗಿದ್ದಳು. ಕಾಲಕ್ರಮೇಣ ಇಬ್ಬರ ನಡುವೆ ಅಕ್ರಮ ಸಂಬಂಧ ಬೆಳೆಯಿತು.

ಕೊಲೆಗೆ ಕಾರಣವೇನು?

ಆರಂಭದಲ್ಲಿ ಇಬ್ಬರ ಸಂಬಂಧದ ಸುಗಮವಾಗಿ ಮುಂದುವರೆದಿತ್ತು. ನಂತರ ಮೌನಿಕಾ ಹಣಕ್ಕಾಗಿ ರವೀಂದ್ರ ಮೇಲೆ ಒತ್ತಡ ಹೇರಲಾರಂಭಿಸಿದ್ದಳು. ಈ ವಿಚಾರವಾಗಿ ಇಬ್ಬರ ನಡುವೆ ಆಗಾಗ್ಗೆ ಜಗಳವಾಗುತ್ತಿತ್ತು. ಈ ಕಾರಣದಿಂದಾಗಿ ಇಬ್ಬರ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿತು.

ಘಟನೆ ನಡೆದ ದಿನ, ರವೀಂದ್ರ ತನ್ನ ಪತ್ನಿ ಮನೆಯಲ್ಲಿ ಇಲ್ಲದಿರುವುದನ್ನು ನೋಡಿಕೊಂಡು ಮೌನಿಕಾಳನ್ನು ತನ್ನ ಮನೆಗೆ ಕರೆದಿದ್ದಾನೆ. ಇಬ್ಬರ ನಡುವೆ ನಡೆದ ಮಾತುಕತೆ ತೀವ್ರ ವಾಗ್ವಾದಕ್ಕೆ ತಿರುಗಿದೆ. ಕೋಪದಿಂದ ರವೀಂದ್ರ, ಮೌನಿಕಾಳ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಈ ದಾಳಿಯಲ್ಲಿ ಮೌನಿಕಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಶವವನ್ನು ಫ್ರಿಡ್ಜ್ ನಲ್ಲಿ ಇರಿಸಿದ್ದು ಹೇಗೆ?

ಕೊಲೆ ಮಾಡಿದ ಬಳಿಕ ರವೀಂದ್ರ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿದ್ದಾನೆ. ಅದರಲ್ಲಿ ಅರ್ಧಭಾಗವನ್ನು ಫ್ರಿಡ್ಜ್ ನಲ್ಲಿ ತುಂಬಿಟ್ಟಿದ್ದಾನೆ. ಉಳಿದ ಅರ್ಧಭಾಗವನ್ನು ಒಂದು ಬಂಡಲ್ ನಲ್ಲಿ ಸುತ್ತಿ ಮನೆಯ ಮತ್ತೊಂದು ಮೂಲೆಯಲ್ಲಿ ಇರಿಸಿದ್ದಾನೆ. ಈ ಕೃತ್ಯದ ಬಳಿಕ ರವೀಂದ್ರ ಸ್ವತಃ ತಾನೇ ಪೊಲೀಸರಿಗೆ ಶರಣಾಗಿದ್ದಾನೆ.

ಪೊಲೀಸ್ ತನಿಖೆ ಪ್ರಾರಂಭ

ಗಾಜುವಾಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಆರೋಪಿ ರವೀಂದ್ರನನ್ನು ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹವನ್ನು ವಶಕ್ಕೆ ಪಡೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆರೋಪಿಯ ವಿರುದ್ಧ ಕೊಲೆ ಮತ್ತು ಸಾಕ್ಷ್ಯ ನಾಶಪಡಿಸಿದ ಪ್ರಕರಣ ದಾಖಲಾಗಿದೆ.

Exit mobile version