ತಿರುಪ್ಪರಂಕುಂದ್ರಂ ಬೆಟ್ಟದಲ್ಲಿ ನಾಳೆ ಕಾರ್ತಿಕ ದೀಪ ಬೆಳಗಿಸಿ: ತಮಿಳುನಾಡು ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಚಾಟಿ!

Untitled design 2026 11 27T162218.823

ನವದೆಹಲಿ: ತಮಿಳುನಾಡಿನ ಮಧುರೈ ಜಿಲ್ಲೆಯ ತಿರುಪ್ಪರಂಕುಂದ್ರಂ ಬೆಟ್ಟದ ಕಾರ್ತಿಕ ದೀಪ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಬೆಟ್ಟದ ಮೇಲಿರುವ ವಿವಾದಿತ ಕಲ್ಲಿನ ಸ್ತಂಭವಾದ ‘ದೀಪತ್ತೂನ್‌’ನಲ್ಲಿ ನವೆಂಬರ್ 28ರಂದು ಕಾರ್ತಿಕ ದೀಪ ಬೆಳಗಿಸುವಂತೆ ನ್ಯಾಯಾಲಯ ನಿರ್ದೇಶನ ನೀಡಿದೆ. ಇದೇ ವೇಳೆ, ಈ ಹಿಂದಿನ ಆದೇಶವನ್ನು ಪಾಲಿಸದ ತಮಿಳುನಾಡು ಸರ್ಕಾರ ಮತ್ತು ಮಧುರೈ ಜಿಲ್ಲಾ ಆಡಳಿತದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ವಿಪುಲ್ ಪಾಂಚೋಲಿ ಅವರನ್ನೊಳಗೊಂಡ ನ್ಯಾಯಪೀಠ, ನವೆಂಬರ್ 20ರಂದು ನೀಡಿದ್ದ ನಿರ್ದೇಶನವನ್ನು ಜಾರಿಗೊಳಿಸಲು ವಿಫಲವಾದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ, ನ್ಯಾಯಾಲಯದ ಆದೇಶ ಉಲ್ಲಂಘಿಸಿದ ಆರೋಪದ ಹಿನ್ನೆಲೆ ಉಚ್ಚಿಪಿಳ್ಳೈಯಾರ್ ದೇವಸ್ಥಾನದ ಹಾಲಿ ಟ್ರಸ್ಟಿಗಳ ಮಂಡಳಿಯನ್ನು ಅಮಾನತುಗೊಳಿಸಿದೆ.

ನಿವೃತ್ತ ನ್ಯಾಯಮೂರ್ತಿಗಳಿಗೆ ಆಡಳಿತದ ಹೊಣೆ

ದೇವಸ್ಥಾನದ ಆಡಳಿತ ನಿರ್ವಹಣೆಗಾಗಿ ನಿವೃತ್ತ ನ್ಯಾಯಮೂರ್ತಿಗಳಾದ ವೈದ್ಯನಾಥನ್ ಮತ್ತು ಪಾರ್ಥಿಬನ್ ಅವರನ್ನು ರಿಸೀವರ್‌ಗಳಾಗಿ ನೇಮಕ ಮಾಡಲಾಗಿದೆ. ನವೆಂಬರ್ 28ರಂದು ದೀಪತ್ತೂನ್‌ನಲ್ಲಿ ಕಾರ್ತಿಕ ದೀಪ ಬೆಳಗಿಸುವ ಜವಾಬ್ದಾರಿಯನ್ನು ಈ ಇಬ್ಬರು ರಿಸೀವರ್‌ಗಳಿಗೆ ವಹಿಸಲಾಗಿದೆ.

ಈ ಹಿಂದೆ ನವೆಂಬರ್ 20ರಂದು ನೀಡಿದ್ದ ಆದೇಶದಲ್ಲಿ ಸೀಮಿತ ಸಂಖ್ಯೆಯ ಭಕ್ತರಿಗೆ ಮಾತ್ರ ದೀಪ ಬೆಳಗಿಸಲು ಅವಕಾಶ ಕಲ್ಪಿಸಲಾಗಿತ್ತು. ಆದರೆ, ಇದೀಗ ಸುಪ್ರೀಂ ಕೋರ್ಟ್ ತನ್ನ ನಿರ್ದೇಶನವನ್ನು ಮತ್ತಷ್ಟು ಸ್ಪಷ್ಟಪಡಿಸಿದೆ. ವಿವಾದಿತ ದೀಪ ಬೆಳಗಿಸುವ ಸ್ಥಳದ ಸಮೀಪದಲ್ಲಿರುವ ದರ್ಗಾದಿಂದ ಎಲ್ಲಾ ದಿಕ್ಕುಗಳಲ್ಲಿಯೂ ಕನಿಷ್ಠ 50 ಮೀಟರ್ ಅಂತರ ಕಾಯ್ದುಕೊಂಡು ಭಕ್ತರು ದೀಪ ಬೆಳಗಿಸಬಹುದು ಎಂದು ತಿಳಿಸಿದೆ.

ದರ್ಗಾಕ್ಕೆ ಭದ್ರತೆ ನೀಡಲು ಸಿಆರ್‌ಪಿಎಫ್‌ಗೆ ಸೂಚನೆ

ದೀಪ ಬೆಳಗಿಸುವ ಕಾರ್ಯಕ್ರಮದ ಸಂದರ್ಭದಲ್ಲಿ ದರ್ಗಾಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ದರ್ಗಾಕ್ಕೆ ಸೂಕ್ತ ಭದ್ರತೆ ಒದಗಿಸುವುದರ ಜತೆಗೆ, ಅಲ್ಲಿಗೆ ಭೇಟಿ ನೀಡುವ ಭಕ್ತರು ಯಾವುದೇ ಅಡೆತಡೆಯಿಲ್ಲದೆ ಪ್ರಾರ್ಥನೆ ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF)ಗೆ ನಿರ್ದೇಶನ ನೀಡಿದೆ.

ಈ ಮೂಲಕ ದೀಪ ಬೆಳಗಿಸುವ ಕಾರ್ಯಕ್ರಮ ಮತ್ತು ದರ್ಗಾದಲ್ಲಿ ನಡೆಯುವ ಧಾರ್ಮಿಕ ಚಟುವಟಿಕೆಗಳ ನಡುವೆ ಯಾವುದೇ ಸಂಘರ್ಷ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ನ್ಯಾಯಾಲಯ ಸೂಚಿಸಿದೆ.

ತಮಿಳುನಾಡು ಅಧಿಕಾರಿಗಳಿಗೆ ನ್ಯಾಯಾಂಗ ನಿಂದನೆ ನೋಟಿಸ್

ನ್ಯಾಯಾಲಯದ ಆದೇಶ ಪಾಲನೆಯಾಗದ ಹಿನ್ನೆಲೆಯಲ್ಲಿ ತಮಿಳುನಾಡು ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ), ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯ ಕಾರ್ಯದರ್ಶಿ ಹಾಗೂ ಆಯುಕ್ತರು, ಮಧುರೈ ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು, ಪೊಲೀಸ್ ವರಿಷ್ಠಾಧಿಕಾರಿ ಮತ್ತು ದೇವಸ್ಥಾನದ ಅಧಿಕಾರಿಗಳಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿಗೊಳಿಸಲಾಗಿದೆ.

ಅಲ್ಲದೆ, ದೀಪ ಬೆಳಗಿಸುವ ವಿಚಾರವಾಗಿ ಅಧಿಕಾರಿಗಳ ನಡುವೆ ನಡೆದಿರುವ ಇಮೇಲ್ ಸಂವಹನ, ದೂರವಾಣಿ ಕರೆಗಳು ಮತ್ತು ಸಂದೇಶಗಳ ಸಂಪೂರ್ಣ ವಿವರಗಳನ್ನು ಒಳಗೊಂಡ ಅಫಿಡವಿಟ್ ಸಲ್ಲಿಸುವಂತೆ ಮುಖ್ಯ ಕಾರ್ಯದರ್ಶಿಗೆ ನ್ಯಾಯಪೀಠ ಸೂಚಿಸಿದೆ. ಮುಂದಿನ ವಿಚಾರಣೆಯ ವೇಳೆ ಖುದ್ದಾಗಿ ಹಾಜರಾಗುವಂತೆಯೂ ಆದೇಶಿಸಿದೆ.

ರಾಜಕೀಯ ನಾಯಕರ ಅಣತಿಯಂತೆ ಅಧಿಕಾರಿಗಳ ನಡೆ?

ಪ್ರಕರಣದ ಬೆಳವಣಿಗೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಕಾರ್ಯಾಂಗದ ಅಧಿಕಾರಿಗಳು ತಮ್ಮ ರಾಜಕೀಯ ನಾಯಕರ ಸೂಚನೆಯಂತೆ ನಡೆದುಕೊಂಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ನ್ಯಾಯಾಲಯದ ಆದೇಶವನ್ನು ಪಾಲಿಸದಿರುವುದು ತಮಿಳುನಾಡು ಆಡಳಿತದಲ್ಲಿ, ಕನಿಷ್ಠ ಮಧುರೈ ಜಿಲ್ಲೆಯಲ್ಲಿ ಆಡಳಿತಾತ್ಮಕ ಅರಾಜಕತೆ ಇರುವುದನ್ನು ತೋರಿಸುತ್ತದೆ ಎಂದು ಪೀಠ ಹೇಳಿದೆ. ಇಂತಹ ಪರಿಸ್ಥಿತಿಯನ್ನು ಕಠಿಣವಾಗಿ ನಿಯಂತ್ರಿಸದಿದ್ದರೆ ಸಾಂವಿಧಾನಿಕ ಅರಾಜಕತೆಗೆ ದಾರಿಯಾಗಬಹುದು ಎಂದು ಎಚ್ಚರಿಸಿದೆ.

ದೇವಸ್ಥಾನದ ಟ್ರಸ್ಟಿಗಳ ಮಂಡಳಿಯೇ ನ್ಯಾಯಾಲಯದ ಆದೇಶ ಪಾಲಿಸುವುದಿಲ್ಲ ಎಂದು ನಿರ್ಣಯ ಕೈಗೊಂಡಿರುವುದನ್ನು ನ್ಯಾಯಪೀಠ ತೀವ್ರವಾಗಿ ಖಂಡಿಸಿದೆ. ಇದು ಉದ್ದೇಶಪೂರ್ವಕ ಮತ್ತು ಬಹಿರಂಗ ಉಲ್ಲಂಘನೆಯಾಗಿದೆ ಎಂದು ಕಿಡಿಕಾರಿದೆ.

ನ್ಯಾಯಾಲಯದ ಆದೇಶಕ್ಕೆ ಎಲ್ಲರೂ ಬದ್ಧರಾಗಿರಬೇಕು

ನ್ಯಾಯಾಲಯದ ಆದೇಶವನ್ನು ಪಾಲಿಸಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ಸರ್ಕಾರ ಅಥವಾ ಅಧಿಕಾರಿಗಳು ತಮ್ಮ ಕೈಗೆ ತೆಗೆದುಕೊಳ್ಳುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ನ್ಯಾಯಾಲಯದ ಆದೇಶವು ಯಾವುದೇ ಸಂಧಾನ ಅಥವಾ ಚರ್ಚೆಗೆ ಆಹ್ವಾನವಲ್ಲ. ನ್ಯಾಯಾಲಯವೇ ಅದನ್ನು ಬದಲಾಯಿಸುವವರೆಗೆ ಸರ್ಕಾರ, ಅಧಿಕಾರಿಗಳು ಮತ್ತು ಧಾರ್ಮಿಕ ಸಂಸ್ಥೆಗಳು ಅದಕ್ಕೆ ಬದ್ಧವಾಗಿರಬೇಕು ಎಂದು ಹೇಳಿದೆ.

Exit mobile version