ಪಾಟ್ನಾ: ಬಿಹಾರದಲ್ಲಿ ಸರನ್ ಜಿಲ್ಲೆ ಚುನಾವಣಾ ಕ್ಷೇತ್ರದಲ್ಲಿ ನಡೆದ ರ್ಯಾಲಿಯೊಂದರಲ್ಲಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ದರೋಡೆಕೋರ ಮೊಹಮ್ಮದ್ ಶಹಾಬುದ್ದೀನ್ ಅವರ ಪುತ್ರ ಒಸಾಮಾ ಶಹಾಬ್ ಅವರನ್ನು ಆರ್‌ಜೆಡಿ ಪಕ್ಷವು ಅಭ್ಯರ್ಥಿಯಾಗಿ ನಿಲ್ಲಿಸಿದ್ದನ್ನು ತೀವ್ರ ಟೀಕಿಸಿದ್ದಾರೆ. ಇಂತಹ ಅಪರಾಧಿ ಪರಿವಾರದ ವ್ಯಕ್ತಿಗೆ ಚುನಾವಣಾ ಟಿಕೆಟ್ ನೀಡಿದ್ದು ಆರ್‌ಜೆಡಿ ಪಕ್ಷದ ‘ನೈತಿಕ ದಿವಾಳಿತನ’ ಎಂದು ಅಮಿತ್ ಶಾ ಖಂಡಿಸಿದ್ದಾರೆ.
ಸಿವಾನ್ ಜಿಲ್ಲೆಯ ರಘುನಾಥಪುರ ವಿಧಾನಸಭಾ ಕ್ಷೇತ್ರದಿಂದ ಒಸಾಮಾ ಶಹಾಬ್ ಅವರನ್ನು ಆರ್‌ಜೆಡಿ ಅಭ್ಯರ್ಥಿಯಾಗಿ ಮಾಡಿರುವ ನಿರ್ಧಾರವನ್ನು ಟೀಕಿಸಿದ ಅಮಿತ್ ಶಾ, ಇಂತಹ ಅಪರಾಧಿ ಮನೆತನದ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ, ಬಿಹಾರದ ಸಾಮಾನ್ಯ ನಾಗರಿಕರ ಭದ್ರತೆ ಏನಾಗುತ್ತದೆ ? ಜನರು ನಿರ್ಭಯವಾಗಿ ಬಾಳಬಲ್ಲರೇ ? ಎಂದು ಪ್ರಶ್ನೆ ಕೇಳಿದ್ದಾರೆ.
ಈ ಟೀಕೆಯೊಂದಿಗೆ, ಅಮಿತ್ ಶಾ ಬಿಹಾರದಲ್ಲಿ ಎನ್‌ಡಿಏ ಒಕ್ಕೂಟವು 20 ವರ್ಷಗಳ ಇತಿಹಾಸದಲ್ಲೇ ಅತಿ ದೊಡ್ಡ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಹಾರದ ಮತದಾರರು ಭಯ ಮತ್ತು ಅಪರಾಧೀಕರಣದ ರಾಜಕೀಯವನ್ನು ತಿರಸ್ಕರಿಸಿ, ಬಿಜೆಪಿ ನೇತೃತ್ವದ ಎನ್‌ಡಿಏ ಒಕ್ಕೂಟದ ಅಭಿವೃದ್ಧಿಯನ್ನ ಜನರು ಬೆಂಬಲಿಸುತ್ತಾರೆ ಎಂದು ಹೇಳಿದರು.