ಗುಜರಾತ್‌ನ ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ನ ಗ್ಯಾಟ್‌ವಿಕ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ (AI-171) ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಮೇಘನಿನಗರದ ರೆಸಿಡೆನ್ಷಿಯಲ್ ಏರಿಯಾದಲ್ಲಿ ಪತನಗೊಂಡಿದೆ. ಈ ದುರಂತದಲ್ಲಿ 242 ಜನರಿದ್ದ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನದಲ್ಲಿ 169 ಭಾರತೀಯರು, 53 ಬ್ರಿಟಿಷ್ ಪ್ರಜೆಗಳು, 7 ಪೋರ್ಚುಗೀಸರು ಮತ್ತು ಒಬ್ಬರು ಕೆನಡಾದ ನಾಗರಿಕರಿದ್ದರು ಎಂದು ಏರ್ ಇಂಡಿಯಾ ದೃಢಪಡಿಸಿದೆ. ರಕ್ಷಣಾ ಕಾರ್ಯಾಚರಣೆಗಳು ತೀವ್ರಗೊಂಡಿದ್ದು, ಈ ಘಟನೆಯು ಭಾರತದ ವಿಮಾನಯಾನ ಇತಿಹಾಸದಲ್ಲಿ ಮತ್ತೊಂದು ದುರಂತವಾಗಿ ದಾಖಲಾಗಿದೆ.
ಭಾರತದಲ್ಲಿ ಸಂಭವಿಸಿದ ಕೆಲವು ಪ್ರಮುಖ ವಿಮಾನ ದುರಂತಗಳು
-
2020 ಆಗಸ್ಟ್ 7: ದುಬೈ-ಕೋಯಿಕ್ಕೋಡ್ ಮಾರ್ಗದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಕೇರಳದ ಕ್ಯಾಲಿಕಟ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್‌ವೇನಿಂದ ಜಾರಿ ಕಂದಕಕ್ಕೆ ಬಿದ್ದಿತ್ತು. ಈ ಘಟನೆಯಲ್ಲಿ 18 ಜನ ಮೃತಪಟ್ಟಿದ್ದರೆ, 172 ಜನ ಗಾಯಗೊಂಡಿದ್ದರು.
-
2010 ಮೇ 22: ದುಬೈ-ಮಂಗಳೂರು ಮಾರ್ಗದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಸಮಯದಲ್ಲಿ ರನ್‌ವೇನಿಂದ ಜಾರಿ ಕಂದಕಕ್ಕೆ ಬಿದ್ದಿತ್ತು. ಈ ದುರಂತದಲ್ಲಿ 158 ಜನ ಮೃತಪಟ್ಟಿದ್ದರೆ, ಕೇವಲ 8 ಜನ ಬದುಕುಳಿದಿದ್ದರು.
-
2000 ಜುಲೈ 17: ಬಿಹಾರದ ಪಟ್ನಾದ ವಸತಿ ಪ್ರದೇಶದಲ್ಲಿ ಅಲೈನ್ಸ್ ಏರ್ ವಿಮಾನ 7412 ಪತನಗೊಂಡು 60 ಜನ ಸಾವನ್ನಪ್ಪಿದ್ದರು.
-
1996 ನವೆಂಬರ್ 12: ಹರಿಯಾಣದ ಚಕ್ರಿಡಬ್ರಿ ಬಳಿ ಸೌದಿ ಅರೇಬಿಯಾದ ವಿಮಾನ ಮತ್ತು ಕಜಕಿಸ್ತಾನದ ವಿಮಾನ ಆಗಸದಲ್ಲಿ ಡಿಕ್ಕಿಯಾಗಿ 349 ಜನ ಮೃತಪಟ್ಟಿದ್ದರು.
-
1993 ಏಪ್ರಿಲ್ 26: ಔರಂಗಾಬಾದ್‌ನಲ್ಲಿ ಇಂಡಿಯನ್ ಏರ್‌ಲೈನ್ಸ್ ವಿಮಾನ ಟೇಕ್‌ಆಫ್ ಸಮಯದಲ್ಲಿ ರನ್‌ವೇನಲ್ಲಿದ್ದ ಟ್ರಕ್‌ಗೆ ಡಿಕ್ಕಿಯಾಗಿ 55 ಜನ ಸಾವನ್ನಪ್ಪಿದ್ದರು.
-
1991 ಆಗಸ್ಟ್ 16: ಇಂಫಾಲದಲ್ಲಿ ಇಂಡಿಯನ್ ಏರ್‌ಲೈನ್ಸ್ ವಿಮಾನ ಅಪಘಾತಕ್ಕೀಡಾಗಿ 69 ಜನ ಮೃತಪಟ್ಟಿದ್ದರು.
-
1990 ಫೆಬ್ರವರಿ 14: ಬೆಂಗಳೂರಿನಲ್ಲಿ ಇಂಡಿಯನ್ ಏರ್‌ಲೈನ್ಸ್ ವಿಮಾನ ಲ್ಯಾಂಡಿಂಗ್ ಸಮಯದಲ್ಲಿ ಅಪಘಾತಕ್ಕೀಡಾಗಿ 92 ಜನ ಸಾವನ್ನಪ್ಪಿದ್ದರು.
-
1988 ಅಕ್ಟೋಬರ್ 19: ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಇಂಡಿಯನ್ ಏರ್‌ಲೈನ್ಸ್ ವಿಮಾನ ಅಪಘಾತಕ್ಕೀಡಾಗಿ 133 ಜನ ಮೃತಪಟ್ಟಿದ್ದರು.
-
1982 ಜೂನ್ 21: ಮುಂಬೈನಲ್ಲಿ ಪ್ರತಿಕೂಲ ಹವಾಮಾನದಿಂದ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿ 17 ಜನ ಸಾವನ್ನಪ್ಪಿದ್ದರು.
-
1978 ಜನವರಿ 1: ಮುಂಬೈನ ಬಾಂದ್ರಾದ ಕರಾವಳಿಯಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡು 213 ಜನ ಮೃತಪಟ್ಟಿದ್ದರು.
ಇಂದು ಅಹಮದಾಬಾದ್‌ನಲ್ಲಿ ನಡೆದ ದುರಂತವು ತನಿಖೆಯ ಹಂತದಲ್ಲಿದ್ದು, ವಿಮಾನಯಾನ ನಿಯಂತ್ರಣ ಸಂಸ್ಥೆಗಳು ಘಟನೆಯ ಕಾರಣವನ್ನು ಪತ್ತೆಹಚ್ಚುತ್ತಿವೆ.