ಸರಿಯಾದ ಸಮಯಕ್ಕೆ ಬ್ಲೌಸ್‌ ಕೊಡದ ಟೈಲರ್‌‌: 7 ಸಾವಿರ ದಂಡ ವಿಧಿಸಿದ ಕೋರ್ಟ್

Untitled design 2025 10 28t210841.195

ಗುಜರಾತ್‌: ಸಮಯಕ್ಕೆ ಸರಿಯಾಗಿ ಬ್ಲೌಸ್‌ ಹೊಲಿಯದ ಟೈಲರ್‌ಗೆ ಗ್ರಾಹಕ ನ್ಯಾಯಾಲಯವು 7,000 ರೂಪಾಯಿ ದಂಡ ವಿಧಿಸಿದ ಘಟನೆ ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದಿದೆ.  ಇದರ ಜೊತೆಗೆ, ಮಹಿಳೆಯೊಬ್ಬರು ಮುಂಗಡವಾಗಿ ಪಾವತಿಸಿದ್ದ 4,395 ರೂಪಾಯಿಯನ್ನು ಬಡ್ಡಿಯೊಂದಿಗೆ ಮರುಪಾವತಿಸಲು ಆದೇಶಿಸಲಾಗಿದೆ.

ಪ್ರಕರಣದ ವಿವರ

ಒಬ್ಬ ಮಹಿಳೆ ತನ್ನ ಮದುವೆಗಾಗಿ ಬ್ಲೌಸ್‌ ಹೊಲಿಯಲು ಸ್ಥಳೀಯ ಟೈಲರ್‌ಗೆ ಒಪ್ಪಿಸಿದ್ದರು. ಬಟ್ಟೆಯನ್ನು ಕೊಡುವಾಗ, ನಿಗದಿತ ಸಮಯಕ್ಕೆ ಸರಿಯಾಗಿ ಒದಗಿಸುವಂತೆ ಮಹಿಳೆ ಒತ್ತಾಯಿಸಿದ್ದರು. ಟೈಲರ್ ಕೂಡ ಈ ಭರವಸೆಯನ್ನು ನೀಡಿ, ಮುಂಗಡವಾಗಿ 4,395 ರೂಪಾಯಿಯನ್ನು ಸ್ವೀಕರಿಸಿದ್ದರು. ಆದರೆ, ಒಪ್ಪಂದದ ಸಮಯಕ್ಕೆ ಮಹಿಳೆ ಬಟ್ಟೆಯನ್ನು ಪಡೆಯಲು ಟೈಲರ್‌ ಬಳಿಗೆ ತೆರಳಿದಾಗ, ಬ್ಲೌಸ್‌ ಸರಿಯಾಗಿ ಹೊಲಿದಿರಲಿಲ್ಲ. ಅಳತೆಯಲ್ಲಿ ತಪ್ಪಿದ್ದ ಬಟ್ಟೆಯನ್ನು ಕಂಡು ಮಹಿಳೆ ನಿರಾಸೆಗೊಂಡರು.

ಈ ತಪ್ಪನ್ನು ಸರಿಪಡಿಸಲು ಟೈಲರ್‌ಗೆ ಮತ್ತೊಂದು ಗಡುವು ನೀಡಲಾಯಿತು. ಆದರೆ, ಎರಡನೇ ಬಾರಿಯೂ ಟೈಲರ್‌ ಸರಿಯಾಗಿ ಕೆಲಸ ಮಾಡದೆ, ಬಟ್ಟೆಯನ್ನು ಒದಗಿಸುವಲ್ಲಿ ವಿಳಂಬ ಮಾಡಿದರು. ಇದರಿಂದ ಕೋಪಗೊಂಡ ಮಹಿಳೆ, ಟೈಲರ್‌ಗೆ ಕಾನೂನು ನೋಟಿಸ್‌ ಜಾರಿ ಮಾಡಿದರು. ಆದರೂ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ, ಅವರು ಗ್ರಾಹಕ ವಿವಾದ ಪರಿಹಾರ ಆಯೋಗದ ಮೊರೆ ಹೋದರು.

ಗ್ರಾಹಕ ನ್ಯಾಯಾಲಯದಲ್ಲಿ ವಿಚಾರಣೆ ನಡೆದಾಗ, ಟೈಲರ್‌ ಹಾಜರಾಗದಿರುವುದು ಆಯೋಗದ ಗಮನಕ್ಕೆ ಬಂದಿತು. ಟೈಲರ್‌ನ ನಿರ್ಲಕ್ಷ್ಯದ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿದ ಆಯೋಗ, ಗ್ರಾಹಕರಿಗೆ ಉಂಟಾದ ತೊಂದರೆಗೆ ಪರಿಹಾರವಾಗಿ ದಂಡ ವಿಧಿಸಿತು. ನ್ಯಾಯಾಲಯವು ಟೈಲರ್‌ಗೆ 4,395 ರೂಪಾಯಿಯನ್ನು ಬಡ್ಡಿಯೊಂದಿಗೆ ಮರುಪಾವತಿಸಲು ಆದೇಶಿಸಿತು. ಇದರ ಜೊತೆಗೆ, ಮಾನಸಿಕ ಒತ್ತಡ ಮತ್ತು ಕಾನೂನು ವೆಚ್ಚಕ್ಕಾಗಿ 7,000 ರೂಪಾಯಿ ಹೆಚ್ಚುವರಿ ಪರಿಹಾರವನ್ನು ಒದಗಿಸುವಂತೆ ತೀರ್ಪು ನೀಡಿತು.

Exit mobile version