ಬೆಂಗಳೂರು, ಮಾರ್ಚ್ 18: ನಾಡಿನಾದ್ಯಂತ ಮಾರ್ಚ್ 19 ರಂದು ಯುಗಾದಿ ಹಬ್ಬವನ್ನು (Yugadi Festival 2026) ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನ (Bangalore) ಹೃದಯಭಾಗವಾದ ಕೆಆರ್ ಮಾರುಕಟ್ಟೆಯಲ್ಲಿ (KR Market) ಬುಧವಾರ ಬೆಳ್ಳಂಬೆಳಿಗ್ಗೆಯಿಂದಲೇ ಖರೀದಿ ಭರಾಟೆ ಜೋರಾಗಿದೆ. ಹೊಸ ವರ್ಷದ ಸಂಭ್ರಮದಲ್ಲಿ ಮುಳುಗಿರುವ ಜನತೆ ಹಬ್ಬಕ್ಕೆ ಬೇಕಾದ ಹೂವು, ಹಣ್ಣು, ತರಕಾರಿ ಹಾಗೂ ಪೂಜಾ ಸಾಮಗ್ರಿಗಳನ್ನು ಕೊಳ್ಳಲು ಮುಗಿಬಿದ್ದಿದ್ದಾರೆ.
ಕೆಆರ್ ಮಾರ್ಕೆಟ್‌ನಲ್ಲಿ ಜನಸಾಗರ
ಸಾಮಾನ್ಯ ದಿನಗಳಿಗಿಂತ ಇಂದು ಕೆಆರ್ ಮಾರುಕಟ್ಟೆಯಲ್ಲಿ ಅಪಾರ ಸಂಖ್ಯೆಯ ಜನರು ಸೇರಿದ್ದರು. ಹಬ್ಬದ ಪ್ರಯುಕ್ತ ಮನೆಗಳಲ್ಲಿ ವಿಶೇಷ ಪೂಜೆ ಸಲ್ಲಿಸಲು ಬೇಕಾದ ಸಾಮಗ್ರಿಗಳ ಖರೀದಿಗೆ ಆದ್ಯತೆ ನೀಡಲಾಗಿತ್ತು. ವಿಶೇಷವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಆಗಮಿಸಿದ್ದು, ಬೆಳಿಗ್ಗೆ 6 ಗಂಟೆಯಿಂದಲೇ ಮಾರುಕಟ್ಟೆಯಲ್ಲಿ ಚಟುವಟಿಕೆಗಳು ಶುರುವಾಗಿದ್ದವು.
ಹೂವುಗಳಿಗೆ ಭಾರೀ ಬೇಡಿಕೆ, ದರ ಏರಿಕೆ
ಯುಗಾದಿ ಹಬ್ಬದ ಪ್ರಯುಕ್ತ ಹೂವುಗಳಿಗೆ ಅಪಾರ ಬೇಡಿಕೆ ಇದ್ದು, ದರದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಮಲ್ಲಿಗೆ ಹೂವು ಸಾಮಾನ್ಯ ದಿನಗಳಿಗಿಂತ ದುಬಾರಿಯಾಗಿದೆ.
ಹೂವು ದರ ವಿವರ (ಕೆಜಿಗೆ ರೂ.ಗಳಲ್ಲಿ)
-
ಮಲ್ಲಿಗೆ – 1,000 ರೂ.
-
ಮಲ್ಲಿಗೆ ಹೂವಿನ ಹಾರ – 100 ರೂ.
-
ಸೇವಂತಿಗೆ – 200-250 ರೂ.
-
ಗುಲಾಬಿ – 250 ರೂ.
-
ಚೆಂಡು ಹೂ – 40-50 ರೂ.
-
ಒಂದು ಕಟ್ಟು ಬೇವಿನ ಸೊಪ್ಪು – 20 ರೂ.
-
ಒಂದು ಕಟ್ಟು ಮಾವಿನ ಸೊಪ್ಪು – 25 ರೂ.
ಹಣ್ಣುಗಳ ದರದಲ್ಲೂ ಏರಿಕೆ
ಯುಗಾದಿ ಪಂಚಾಂಗ ಶ್ರವಣಕ್ಕೆ ಬೇಕಾದ ಬೇಲದ ಹಣ್ಣು ಮತ್ತು ಖರಬೂಜ ಸೇರಿದಂತೆ ವಿವಿಧ ಹಣ್ಣುಗಳಿಗೂ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಇದರಿಂದಾಗಿ ಹಣ್ಣುಗಳ ದರದಲ್ಲೂ ಸ್ವಲ್ಪಮಟ್ಟಿನ ಏರಿಕೆಯಾಗಿದೆ.
ಹಣ್ಣುಗಳ ದರ ವಿವರ (ಕೆಜಿಗೆ ರೂ.ಗಳಲ್ಲಿ)
-
ಖರಬೂಜ (ಕಲ್ಲಂಗಡಿ) – 100 ರೂ.
-
ಬೇಲದ ಹಣ್ಣು – 50 ರೂ.
-
ದ್ರಾಕ್ಷಿ – 120 ರೂ.
-
ದಾಳಿಂಬೆ – 220 ರೂ.
-
ಸೇಬು – 180-200 ರೂ.
-
ಬಾಳೆಹಣ್ಣು (ಯಾಲಕ್ಕಿ ಬಾಳೆ) – 60-70 ರೂ. (ಡಜನ್)
ಇತರ ಮಾರುಕಟ್ಟೆಗಳಲ್ಲೂ ಸಡಗರ
ಕೆಆರ್ ಮಾರ್ಕೆಟ್ ಮಾತ್ರವಲ್ಲದೆ ಮಲ್ಲೇಶ್ವರಂ, ಗಾಂಧಿ ಬಜಾರ್, ಜಯನಗರ, ಯಶವಂತಪುರ, ರಾಜಾಜಿನಗರ ಸೇರಿದಂತೆ ನಗರದ ವಿವಿಧ ಮಾರುಕಟ್ಟೆಗಳಲ್ಲೂ ಯುಗಾದಿ ಹಬ್ಬದ ಖರೀದಿ ಸಡಗರ ಕಂಡುಬರುತ್ತಿದೆ. ಎಲ್ಲೆಡೆ ಜನದಟ್ಟಣೆ ಸಾಮಾನ್ಯವಾಗಿತ್ತು. ಅಂಗಡಿಗಳಲ್ಲಿ ಹೂವು, ಹಣ್ಣು, ತರಕಾರಿ, ಬೆಲ್ಲ, ಬೇಳೆಗಳ ಖರೀದಿ ಭರಾಟೆ ಜೋರಾಗಿತ್ತು.
