ಬಿಜೆಪಿಯೊಳಗೆ ಜಾತಿ ಬೆಂಕಿ ಇಟ್ಟ ರೆಬೆಲ್ ಶಾಸಕ ಯತ್ನಾಳ್: ಹೊಸ ಪಾರ್ಟಿ ಕಟ್ತಾರಾ.?

111 (19)

ಬಿಜೆಪಿಯ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕರ್ನಾಟಕ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣರಾಗಿದ್ದಾರೆಬಿವೈ ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕೆಂದು ದಿನೇ ದಿನೇ ಒಂದಿಲ್ಲ ಒಂದು ಪ್ರಯತ್ನ ಮಾಡುತ್ತಾ ಬಂದಿರುವ ಯತ್ನಾಳ್ ಅವರು, ತಮ್ಮ ಕಾರ್ಯತಂತ್ರವನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.

ಇಂದು ಕೂಡ ಅದರ ಭಾಗವಾಗಿ ಯತ್ನಾಳ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಇಂದು ಮತ್ತೊಂದು ಲಿಂಗಾಯತ ಮುಖಂಡರ ಸಭೆ ನಡೆಸಿದ್ದಾರೆ.   ಸಭೆಗೆ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್ ಮತ್ತು ಬಿಜೆಪಿ ನಾಯಕ ಬಿ.ಪಿ. ಹರೀಶ್ ಹಾಜರಿದ್ದರು. ಈ ಮೂಲಕ ವಿಜಯೇಂದ್ರ ಪರವಾಗಿರುವ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದ್ದಾರೆ.

ಸಭೆಯಲ್ಲಿ ಲಿಂಗಾಯತ ನಾಯಕತ್ವ, ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಕೆಳಗಿಸಳಿಸುವ ವಿಚಾರ,  ಮುಂದಿನ ನಡೆ, ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಮಾತ್ರವಲ್ಲ ದೆಹಲಿಗೆ ಲಿಂಗಾಯತ‌ ಮುಖಂಡರ‌ ನಿಯೋಗ ಕೊಂಡೊಯ್ಯುವ ಬಗ್ಗೆಯೂ ಸಮಾಲೋಚನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಅಮಿತ್ ಶಾ ಸೂಚನೆಯಂತೆ ದೆಹಲಿಯಲ್ಲಿ ಲಿಂಗಾಯತ ನಿಯೋಗವನ್ನು ಸಂಘಟಿಸಲು ಯತ್ನಾಳ್ ಯೋಜನೆ ರೂಪಿಸಿದ್ದಾರೆ. ದೆಹಲಿಯಲ್ಲಿ ಲಿಂಗಾಯತ ಸಮುದಾಯದ ರಾಜಕೀಯ ಬಲ ಪ್ರದರ್ಶಿಸಲು ತಂತ್ರ ರೂಪಿಸಿದ್ದು, ವಿರೋಧಿಗಳಿಗೆ ಲಿಂಗಾಯತ ಅಸ್ತ್ರದ ಮೂಲಕ ಟಕ್ಕರ್‌ ಕೊಡಲು ಮುಂದಾಗಿದ್ದಾರೆ.

ಇದರ ಹಿಂದೆ, ದೆಹಲಿಯಲ್ಲಿ ಲಿಂಗಾಯತ ಸಮುದಾಯದ ರಾಜಕೀಯ ಬಲವನ್ನು ಪ್ರದರ್ಶಿಸುವ ಗುರಿ ಇದೆ ಎನ್ನಲಾಗುತ್ತಿದ್ದು, ಯತ್ನಾಳ್ ರವರು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ಚಾಲನೆ ನೀಡಿರುವುದು ಮತ್ತು ಪಕ್ಷದೊಳಗಿನ ವಿರೋಧಿಗಳಿಗೆ, ಲಿಂಗಾಯತ ಅಸ್ತ್ರವನ್ನು ಬಳಸುವ ಪ್ರಯತ್ನಗಳು ಪಕ್ಷದಲ್ಲಿ ಒತ್ತಡವನ್ನು ಹೆಚ್ಚಿಸಿವೆ.

ಯತ್ನಾಳ್‌ ಹೊಸ ಪಕ್ಷ?

ಯತ್ನಾಳ್ ಹೊಸ ಪಕ್ಷ ಸ್ಥಾಪಿಸುವ ಸಾಧ್ಯತೆ ಕುರಿತು ರಾಜಕೀಯ ವಲಯಗಳಲ್ಲಿ ಚರ್ಚೆ ನಡೆಯುತ್ತಿದೆ. ಯಡಿಯೂರಪ್ಪ ಅವರು ಅಂದಿನ ದಿನಗಳಲ್ಲಿ ಹೇಗೆ ಬಿಜೆಪಿ ತೊರೆದು ಹೊಸ ಪಕ್ಷ ಆರಂಭಿಸಿ ನಂತರ ಮತ್ತೆ ಬಿಜೆಪಿಗೆ ಸೇರಿಕೊಂಡರೋ, ಅದೇ ಹಾದಿಯಲ್ಲಿ ಯತ್ನಾಳ್ ಕೂಡಾ ಹೋಗುವ ಸಾಧ್ಯತೆ ಇದೆ. ಹೈಕಮಾಂಡ್ ಅವರ ವಿರುದ್ಧ ಕ್ರಮ ಕೈಗೊಂಡರೆ, ಯತ್ನಾಳ್ ಹೊಸ ಹಿಂದೂ ಪಕ್ಷವನ್ನು ಸ್ಥಾಪಿಸುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

ಹಿಂದೂತ್ವದ ಅಜೆಂಡಾದೊಂದಿಗೆ ಹೊಸ ಪಕ್ಷ?

ಯತ್ನಾಳ್ ಅವರ ಹೊಸ ಪಕ್ಷ ಹಿಂದೂತ್ವ ನಿಲುವಿನೊಂದಿಗೆ ಬರಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಪಕ್ಷ 70ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂಬ ಮಾತುಗಳು ಕೇಳಿ ಬಂದಿದ್ದು, ಇದರಿಂದ ಕರ್ನಾಟಕದ ಬಿಜೆಪಿಯಲ್ಲಿ ಮತಬ್ಯಾಂಕಾದ ಲಿಂಗಾಯತ ಸಮುದಾಯದಲ್ಲಿ ವಿಭಜನೆ ಸೃಷ್ಟಿಯಾಗುವ ಸಾಧ್ಯತೆ ಇದೆ.

ಬಿಜೆಪಿ ಹೈಕಮಾಂಡ್‌ನಲ್ಲಿ ಗೊಂದಲ

ಯತ್ನಾಳ್ ಅವರ ಈ ನಡೆ ಬಿಜೆಪಿಗೆ ಹೊಸ ತಲೆನೋವು ತಂದಿದೆ. ಹೈಕಮಾಂಡ್ ಕೂಡಾ ಈ ಬಗ್ಗೆ ತಲೆಕೆಡಿಸಿಕೊಂಡಿದೆ. ಯತ್ನಾಳ್ ಅವರನ್ನು ಸಮಾಧಾನ ಪಡಿಸುವ ಸಲುವಾಗಿ ಹೈಕಮಾಂಡ್ ಹಲವು ಆಲೋಚನೆಗಳನ್ನು ನಡೆಸುತ್ತಿದೆ. ಆದರೆ, RSS ಮುಖಂಡ ಮುಕುಂದ್ ಅವರೊಂದಿಗೆ ಚರ್ಚೆ ನಡೆಸಿದ ನಂತರ ಯತ್ನಾಳ್  ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಬಿಜೆಪಿಯ ಲಿಂಗಾಯತ ರಾಜಕೀಯ ಈಗ ತೀವ್ರ ತಿರುವು ಪಡೆದಿದೆ.  ಮುಂದಿನ ದಿನಗಳಲ್ಲಿ ಯತ್ನಾಳ್ ಹೊಸ ಪಕ್ಷ ಘೋಷಣೆ ಮಾಡುತ್ತಾರಾ ಅಥವಾ ಪಕ್ಷದೊಳಗೆಯೇ ಉಳಿದು ಬದಲಾವಣೆ ತರಲು ಪ್ರಯತ್ನಿಸುತ್ತಾರಾ ಎಂಬುದು ಕುತೂಹಲ ಮೂಡಿಸಿದೆ.

 

Exit mobile version