ಕೊನೇ ಕ್ಷಣದಲ್ಲಿ ಬದಲಾಗ್ತಾರಾ ದಾವಣಗೆರೆ ಬಿಜೆಪಿ ಅಭ್ಯರ್ಥಿ ? ಹೊಸ ಬಾಂಬ್‌ ಸಿಡಿಸಿದ ಯತ್ನಾಳ್‌

Untitled design 2026 03 19T170250.005

ವಿಜಯಪುರ: ಕರ್ನಾಟಕ ರಾಜಕಾರಣದ ‘ಫೈರ್ ಬ್ರ್ಯಾಂಡ್’ ಎಂದೇ ಗುರುತಿಸಿಕೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಮ್ಮೆ ಸ್ಫೋಟಕ ಹೇಳಿಕೆ ನೀಡುವ ಮೂಲಕ ಸಂಚಲನ ಮೂಡಿಸಿದ್ದಾರೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಯ್ಕೆ ಅಂತಿಮವಲ್ಲ, ಕೊನೇ ಕ್ಷಣದಲ್ಲಿ ಬದಲಾದರೂ ಅಚ್ಚರಿಯಿಲ್ಲ ಎಂದು ಹೇಳುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.

ಇದು ಕೇವಲ ತಾತ್ಕಾಲಿಕ ಆಯ್ಕೆ!

ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಯತ್ನಾಳ್, ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಸದ್ಯ ಮಾಜಿ ಸಂಸದ ಸಿದ್ದೇಶ್ವರ್ ಅವರ ಆಪ್ತರಿಗೆ ಟಿಕೆಟ್ ನೀಡಲಾಗಿದೆ. ಆದರೆ, ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ ಮುಗಿಯುವವರೆಗೂ ಯಾರನ್ನೂ ಅಧಿಕೃತ ಅಭ್ಯರ್ಥಿ ಎಂದು ನಂಬುವ ಹಾಗಿಲ್ಲ. ಒಂದು ವೇಳೆ ಕಾಂಗ್ರೆಸ್ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿದರೆ, ಇಲ್ಲಿ ಬಿಜೆಪಿಯ ಲೆಕ್ಕಾಚಾರಗಳು ಸಂಪೂರ್ಣವಾಗಿ ಬದಲಾಗಲಿವೆ ಎಂದು ಭವಿಷ್ಯ ನುಡಿದಿದ್ದಾರೆ.

ಶಾಮನೂರು ಶಿವಶಂಕರಪ್ಪ ಅವರ ಕುಟುಂಬದ ಉಪಕಾರ ಪೂಜ್ಯ ತಂದೆ ಯಡಿಯೂರಪ್ಪ ಮತ್ತು ಅವರ ಮಕ್ಕಳ ಮೇಲೆ ಬಹಳಷ್ಟಿದೆ. ಈ ಹಿಂದೆ ರಾಘವೇಂದ್ರ ಮತ್ತು ವಿಜಯೇಂದ್ರ ಚುನಾವಣೆಯಲ್ಲಿ ಗೆಲ್ಲಲು ಶಾಮನೂರು ಕುಟುಂಬದ ಸಹಾಯ ಪಡೆದಿದ್ದರು. ಆ ಉಪಕಾರ ತೀರಿಸಲು ಈಗಿನ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ, ಶಾಮನೂರು ಕುಟುಂಬಕ್ಕೆ ಪೂರಕವಾಗುವಂತೆ ನಡೆದುಕೊಳ್ಳಬಹುದು ಎಂದು ಹೇಳಿದ್ದಾರೆ.

ಸಿದ್ದೇಶ್ವರ ಆಪ್ತರಿಗೆ ಈಗ ಟಿಕೆಟ್ ನೀಡಿರುವುದು ಕೇವಲ ಕಣ್ಣೊರೆಸುವ ತಂತ್ರ. ಕೊನೇ ಕ್ಷಣದಲ್ಲಿ ಶಾಮನೂರು ಕುಟುಂಬದವರೇ ಬಿಜೆಪಿ ಅಭ್ಯರ್ಥಿಯಾಗಿ ಬರಬಹುದು ಅಥವಾ ಒಳಗೊಳಗೆ ಅವರನ್ನು ಗೆಲ್ಲಿಸುವ ತಂತ್ರ ನಡೆಯಬಹುದು ಎಂದು ಯತ್ನಾಳ್ ಶಂಕೆ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ಶಾಮನೂರು ಋಣ ತೀರಿಸಲು ತಂದೆ ಮತ್ತು ಮಕ್ಕಳು ಏನು ಬೇಕಾದರೂ ಮಾಡುತ್ತಾರೆ ಎಂದು ಕಿಡಿಕಾರಿದ್ದಾರೆ.

ಬಾಗಲಕೋಟೆ ಅಭ್ಯರ್ಥಿ ವಿಚಾರವಾಗಿಯೂ ಮಾತನಾಡಿದ ಅವರು, ಅಲ್ಲಿ ವೀರಣ್ಣ ಚರಂತಿಮಠ ಅವರೇ ಸೂಕ್ತ ಅಭ್ಯರ್ಥಿ ಎಂದು ಬೆಂಬಲ ಸೂಚಿಸಿದರು. ಒಟ್ಟಾರೆಯಾಗಿ ಯತ್ನಾಳ್ ಅವರ ಈ ಹೇಳಿಕೆ ದಾವಣಗೆರೆ ಜಿಲ್ಲಾ ರಾಜಕಾರಣದಲ್ಲಿ ಮಾತ್ರವಲ್ಲದೆ, ರಾಜ್ಯ ಬಿಜೆಪಿಯಲ್ಲೂ ಬಿಸಿ ಏರಿಸಿದೆ.

Exit mobile version