ಬೆಂಗಳೂರು (ಆ.3): ರಾಜ್ಯ ರಾಜಕೀಯದಲ್ಲಿ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಭಾರೀ ತಲ್ಲಣ ಸೃಷ್ಟಿಯಾಗಿದೆ. ಸಚಿವ ಸ್ಥಾನ ಸಿಗದಿದ್ದಕ್ಕೆ ತೀವ್ರ ಬೇಸರಗೊಂಡ ಹಿರಿಯ ಶಾಸಕ ಯಶವಂತರಾಯ ಗೌಡ ಪಾಟೀಲ್ ಅವರು ತಮ್ಮ ಶಾಸಕ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಈ ದಿಢೀರ್ ಬೆಳವಣಿಗೆಯು ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಭಾರೀ ಶಾಕ್ ನೀಡಿದೆ.
ಸ್ಪೀಕರ್ ರುದ್ರಪ್ಪ ಲಮಾಣಿ ಅವರಿಗೆ ರಾಜೀನಾಮೆ ಪತ್ರ ಹಸ್ತಾಂತರ
ಯಶವಂತರಾಯ ಗೌಡ ಪಾಟೀಲ್ ಅವರು ಇಂದು ವಿಧಾನಸಭೆಯ ಸ್ಪೀಕರ್ ರುದ್ರಪ್ಪ ಲಮಾಣಿ ಅವರನ್ನು ಭೇಟಿಯಾಗಿ ತಮ್ಮ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿದ್ದಾರೆ. ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ವಿಶಾಲಾಕ್ಷಿ ಅವರಿಗೆ ರಾಜೀನಾಮೆ ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ. ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಅವರು, ಇಂಡಿ (Indi) ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಸ್ವಾತಂತ್ರ್ಯದ ನಂತರ ಇಂಡಿ ಕ್ಷೇತ್ರಕ್ಕೆ ಸಚಿವ ಸ್ಥಾನ ಸಿಗದಿರುವುದು ತಮ್ಮ ರಾಜೀನಾಮೆಗೆ ಪ್ರಮುಖ ಕಾರಣ ಎಂದು ಅವರು ಹೇಳಿದ್ದಾರೆ.
‘ನಿಷ್ಠೆ, ಪ್ರಾಮಾಣಿಕತೆಗೆ ಬೆಲೆಯಿಲ್ಲ’ ಎಂದ ಪಾಟೀಲ್
ರಾಜೀನಾಮೆ ಸಲ್ಲಿಸಿದ ಬಳಿಕ ಮಾತನಾಡಿದ ಯಶವಂತರಾಯ ಗೌಡ ಪಾಟೀಲ್ ಅವರು, “ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠೆ, ಪ್ರಾಮಾಣಿಕತೆಗೆ ಬೆಲೆಯಿಲ್ಲ. 2023ರ ಚುನಾವಣೆಯ ಪೂರ್ವದಲ್ಲೇ ನನಗೆ ಸಚಿವ ಸ್ಥಾನದ ಭರವಸೆ ನೀಡಲಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ನನ್ನನ್ನು ಕಡೆಗಣಿಸಲಾಗಿದೆ. ಈಗ ನಾನು ಪಕ್ಷವನ್ನು ಬಿಟ್ಟು ಹೋಗುತ್ತಿಲ್ಲ, ಅವರೇ ನನ್ನನ್ನು ಬಿಟ್ಟಿದ್ದಾರೆ” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
“ಕಳೆದ ಬಾರಿಯೇ ನಿಗಮ ಮಂಡಳಿಗೆ ನನ್ನನ್ನು ನೇಮಿಸುವುದಾಗಿ ಹೇಳಿದ್ದರು. ಆದರೆ, ನಾನು ಅದನ್ನು ನಿರಾಕರಿಸಿದ್ದೆ. ಸ್ವಾತಂತ್ರ್ಯದ ನಂತರ ಇಂದಿನವರೆಗೂ ಇಂಡಿ ಕ್ಷೇತ್ರದ ಯಾರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ನಾನು ರಾಜೀನಾಮೆ ನೀಡಿದ್ದೇನೆ, ಅದನ್ನು ಅಂಗೀಕರಿಸಬೇಕು. ಯಾವುದೇ ಕಾರಣಕ್ಕೂ ನಾನು ರಾಜೀನಾಮೆಯನ್ನು ವಾಪಸ್ ಪಡೆಯುವುದಿಲ್ಲ. ಯಾವುದೇ ಕಾರಣಕ್ಕೂ ನಾನು ಶಾಸಕನಾಗಿ ಮುಂದುವರೆಯುವುದಿಲ್ಲ” ಎಂದು ಸ್ಪಷ್ಟನೆ ನೀಡಿದರು.
ಎಂ.ಬಿ. ಪಾಟೀಲ್ ವಿರುದ್ಧ ತೀವ್ರ ಆಕ್ರೋಶ
ಯಶವಂತರಾಯ ಗೌಡ ಪಾಟೀಲ್ ಅವರು ವಿಜಯಪುರ ಜಿಲ್ಲೆಯ ಪ್ರಮುಖ ನಾಯಕ ಎಂ.ಬಿ. ಪಾಟೀಲ್ ಅವರ ವಿರುದ್ಧವೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಜಿಲ್ಲೆಯ ರಾಜಕಾರಣ ಬೀದಿಗೆ ಬಂದಿದೆ. ಕೆಲವು ನಾಯಕರ ಸ್ವಾರ್ಥಕ್ಕಾಗಿ ಹಿರಿಯ ಶಾಸಕರನ್ನು ಕಡೆಗಣಿಸಲಾಗಿದೆ” ಎಂದು ಅವರು ಕಿಡಿಕಾರಿದ್ದಾರೆ.
ಬೆಂಬಲಿಗರಿಂದ ಪ್ರತಿಭಟನೆ
ಯಶವಂತರಾಯ ಗೌಡ ಪಾಟೀಲ್ ಅವರಿಗೆ ಸಚಿವ ಸ್ಥಾನ ಸಿಗದ್ದಕ್ಕೆ ಬೆಂಬಲಿಗರು ಕಾಂಗ್ರೆಸ್ ಪಕ್ಷಕ್ಕೆ ದಿಕ್ಕಾರ ಕೂಗಿದ್ದಾರೆ. ಮೂರು ಬಾರಿಯ ಹಿರಿಯ ಶಾಸಕರಿಗೆ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಬೆಂಬಲಿಗರು, ಪಕ್ಷದ ವಿರುದ್ಧ ಬೀದಿಗಿಳಿಯುವ ಎಚ್ಚರಿಕೆ ನೀಡಿದ್ದಾರೆ. ಇಂಡಿ ಕ್ಷೇತ್ರದಲ್ಲಿ ಪ್ರತಿಭಟನೆ ನಡೆಸಿದ ಅಭಿಮಾನಿಗಳು, ಶಾಸಕರ ರಾಜೀನಾಮೆಯನ್ನು ಸ್ವಾಗತಿಸಿದ್ದಾರೆ.
