ಇರಾನ್‌ನಲ್ಲಿ ಹಿಜಾಬ್‌ ಧರಿಸದೇ ಮ್ಯಾರಥಾನ್‌ನಲ್ಲಿ ಭಾಗವಹಿಸಿದ ಮಹಿಳೆಯರು!

Untitled design 2026 09 19T162214.553

ಟೆಹ್ರಾನ್: ಇರಾನ್‌ನ ರಾಜಧಾನಿ ಟೆಹ್ರಾನ್‌ನಲ್ಲಿ ನಡೆದ 10 ಕಿಲೋಮೀಟರ್ ಓಟದ ಸ್ಪರ್ಧೆಯಲ್ಲಿ ನೂರಾರು ಮಹಿಳೆಯರು ಕಡ್ಡಾಯ ಶಿರವಸ್ತ್ರ ಅಥವಾ ಹಿಜಾಬ್ ಧರಿಸದೆ ಭಾಗವಹಿಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಹಿಜಾಬ್ ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಹೆಸರಾಗಿರುವ ಇರಾನ್‌ನಲ್ಲಿ ಮಹಿಳೆಯರು ಈ ರೀತಿಯಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದು ಗಮನ ಸೆಳೆದಿದೆ.

ಟೆಹ್ರಾನ್‌ನ ವೆಲಾಯತ್ ಪಾರ್ಕ್‌ನಲ್ಲಿ ‘ಟೆಹ್ರಾನ್ 10ಕೆ’ ಓಟ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕ ಓಟಗಳನ್ನು ನಡೆಸಲಾಗಿದ್ದು, ಮಹಿಳೆಯರ ವಿಭಾಗದಲ್ಲಿ ಎರಡು ಲ್ಯಾಪ್‌ಗಳಲ್ಲಿ ಒಟ್ಟು 10 ಕಿಲೋಮೀಟರ್ ಓಟ ಆಯೋಜಿಸಲಾಗಿತ್ತು. ಈ ವೇಳೆ ಮಹಿಳೆಯರು ತಲೆಗೂದಲನ್ನು ಮುಚ್ಚಿಕೊಳ್ಳದೆ ಉತ್ಸಾಹದಿಂದ ಓಡುತ್ತಿರುವ ವಿಡಿಯೋಗಳು ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.

ಇರಾನ್‌ನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಹಿಜಾಬ್ ಧರಿಸುವುದು ದೀರ್ಘಕಾಲದಿಂದ ಕಡ್ಡಾಯ ನಿಯಮವಾಗಿದೆ. ಆದರೆ ಕಳೆದ ಕೆಲವು ವರ್ಷಗಳಿಂದ ಈ ನಿಯಮದ ವಿರುದ್ಧ ಮಹಿಳೆಯರ ಅಸಮ್ಮತಿ ಹಲವು ಸಂದರ್ಭಗಳಲ್ಲಿ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿದೆ. 2022ರಲ್ಲಿ ಮಹ್ಸಾ ‘ಜಿನಾ’ ಅಮಿನಿ ಅವರ ಸಾವಿನ ಬಳಿಕ ದೇಶಾದ್ಯಂತ ಹಿಜಾಬ್ ವಿರೋಧಿ ಪ್ರತಿಭಟನೆಗಳು ತೀವ್ರಗೊಂಡಿದ್ದವು. ಹಿಜಾಬ್ ಸರಿಯಾಗಿ ಧರಿಸಿಲ್ಲ ಎಂಬ ಆರೋಪದ ಹಿನ್ನೆಲೆ ನೈತಿಕ ಪೊಲೀಸ್ ವಶಕ್ಕೆ ಪಡೆದಿದ್ದ ಅಮಿನಿ ಮೃತಪಟ್ಟ ನಂತರ ಭುಗಿಲೆದ್ದ ಪ್ರತಿಭಟನೆಗಳು ಇರಾನ್‌ನ ಸಾಮಾಜಿಕ ವಾತಾವರಣದ ಮೇಲೆ ದೊಡ್ಡ ಪರಿಣಾಮ ಬೀರಿದವು.

ಅಂದಿನಿಂದ ಕೆಲವು ಇರಾನಿ ಮಹಿಳೆಯರು ಸರ್ಕಾರದ ನಿಯಮಗಳು ಮತ್ತು ಎಚ್ಚರಿಕೆಗಳ ನಡುವೆಯೂ ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಇಲ್ಲದೆ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಕಿಶ್ ದ್ವೀಪದಲ್ಲಿ ನಡೆದ ರೋಡ್ ರೇಸ್‌ನಲ್ಲೂ ಮಹಿಳೆಯರು ಹಿಜಾಬ್ ಇಲ್ಲದೆ ಭಾಗವಹಿಸಿದ್ದ ಘಟನೆ ಗಮನ ಸೆಳೆದಿತ್ತು. ಇದೀಗ ಟೆಹ್ರಾನ್‌ನ 10ಕೆ ಓಟದಲ್ಲಿನ ದೃಶ್ಯಗಳು ಇದೇ ರೀತಿಯ ಚರ್ಚೆಗೆ ಕಾರಣವಾಗಿವೆ.

ಈ ಬೆಳವಣಿಗೆಯ ನಡುವೆ, ಅದೇ ದಿನ ಟೆಹ್ರಾನ್‌ನ ಮತ್ತೊಂದು ಭಾಗದಲ್ಲಿ ನಡೆದ ಸರ್ಕಾರಿ ಪ್ರಾಯೋಜಿತ ಬೃಹತ್ ರ್ಯಾಲಿಯೂ ಗಮನ ಸೆಳೆಯಿತು. ‘ಜನ್‌ಫದಾ-ಯೇ ಇರಾನ್’ ಹೆಸರಿನ ಈ ಕಾರ್ಯಕ್ರಮದಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ಅಮೆರಿಕ ಮತ್ತು ಇಸ್ರೇಲ್‌ನೊಂದಿಗಿನ ಸಂಘರ್ಷದ ಹಿನ್ನೆಲೆ ಆಯೋಜಿಸಲಾಗಿದ್ದ ಈ ರ್ಯಾಲಿಯಲ್ಲಿ ಇರಾನ್‌ನ ಸೈನಿಕ ಸಾಮರ್ಥ್ಯ ಹಾಗೂ ರಾಷ್ಟ್ರೀಯ ಏಕತೆಯನ್ನು ಪ್ರದರ್ಶಿಸುವ ಪ್ರಯತ್ನ ನಡೆದಿತ್ತು.

ರ್ಯಾಲಿಯಲ್ಲಿ ಇರಾನ್ ನಿರ್ಮಿತ ಮಿಲಿಟರಿ ಡ್ರೋನ್‌ಗಳ ಪ್ರದರ್ಶನ, ಯುದ್ಧದ ಹಿರಿಯ ಯೋಧರ ಪಥಸಂಚಲನ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆದವು. ದೇಶದ ರಕ್ಷಣೆಗೆ ತ್ಯಾಗ ಮಾಡಲು ಸಿದ್ಧ ಎಂಬ ಸಂದೇಶ ಸಾರುವ ರೀತಿಯಲ್ಲಿ ಕಫನ್ ಧರಿಸಿದ ನಾಗರಿಕರೂ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ರೆವಲ್ಯೂಷನರಿ ಗಾರ್ಡ್‌ಗೆ ಸೇರಿದ ಮಹಿಳಾ ಯೋಧರು ರೈಫಲ್‌ಗಳನ್ನು ಹಿಡಿದು ಪಥಸಂಚಲನ ನಡೆಸಿದರು.

ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಇರಾನ್ ಅಧ್ಯಕ್ಷ ಮಸೌದ್ ಪೆಝಶ್ಕಿಯನ್, ಸಾರ್ವಜನಿಕರ ಭಾಗವಹಿಸುವಿಕೆಯನ್ನು ಶ್ಲಾಘಿಸಿ, ಇದನ್ನು ರಾಷ್ಟ್ರೀಯ ಶಕ್ತಿ, ಘನತೆ ಮತ್ತು ಸಾರ್ವಭೌಮತ್ವದ ಸಂಕೇತ ಎಂದು ಬಣ್ಣಿಸಿದರು.

 

Exit mobile version