ಬೆಂಗಳೂರು (ಮೇ 1): ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ದುರ್ಘಟನೆ ಬೆಳಕಿಗೆ ಬಂದಿದೆ. ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದ ಯುವತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಿಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೇಘಾಲಯ ಮೂಲದ ಅಗತ ಬೈತಿಯಂಗುಂ (36) ಮೃತ ಯುವತಿಯಾಗಿದ್ದು, ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ಹೌಸ್‌ಕೀಪಿಂಗ್ ಕೆಲಸ ಮಾಡುತ್ತಿದ್ದರು.
ಅಗತ ಅವರು ಕಳೆದ ಮೂರು ವರ್ಷಗಳಿಂದ ಮಣಿಪುರ ಮೂಲದ ನವಾಜ್ ಶರೀಫ್ (20) ಎಂಬ ಯುವಕನೊಂದಿಗೆ ಸಂಜೀವಿನಿ ನಗರದ ಬಾಡಿಗೆ ಮನೆಯಲ್ಲಿ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿ ವಾಸವಾಗಿದ್ದರು. ಇವರಿಬ್ಬರ ನಡುವೆ 16 ವರ್ಷ ವಯಸ್ಸಿನ ಅಂತರ ಇದ್ದಿದ್ದು, ಇದರಿಂದಾಗಿ ಪದೇಪದೇ ಮನಸ್ತಾಪಗಳು ಉಂಟಾಗುತ್ತಿದ್ದವು ಎನ್ನಲಾಗಿದೆ.
ಅಗತ ಅವರಿಗೆ ನವಾಜ್ ಶರೀಫ್ ಬೇರೆ ಯುವತಿಯರೊಂದಿಗೆ ಸಂಪರ್ಕದಲ್ಲಿದ್ದಾನೆ ಎಂಬ ಅನುಮಾನ ಇದ್ದಿತ್ತು. ಇದೇ ವಿಷಯವಾಗಿ ಇಬ್ಬರ ಮಧ್ಯೆ ಜಗಳಗಳು ನಡೆಯುತ್ತಿತ್ತು. ಕಳೆದ ಬುಧವಾರ ರಾತ್ರಿ ಘಟನೆ ಸಂಭವಿಸಿದ್ದು, ನವಾಜ್ ತನ್ನ ತಾಯಿಯೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದ ವೇಳೆ ಅಗತ ಅವರು ಶಂಕೆಯಿಂದ ಜಗಳ ಆರಂಭಿಸಿದ್ದರು. ಈ ವೇಳೆ ಮಾತಿನ ಚಕಮಕಿ ತೀವ್ರಗೊಂಡು, ಬೇಸರಗೊಂಡ ನವಾಜ್ ಮನೆ ಬಿಟ್ಟು ಹೊರಗೆ ಹೋಗಿದ್ದಾನೆ ಎಂದು ತಿಳಿದುಬಂದಿದೆ.
ನಂತರ ಮನೆಯಲ್ಲಿ ಒಬ್ಬರೇ ಇದ್ದ ಅಗತ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ರಾತ್ರಿ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಮಾಹಿತಿ ತಿಳಿದ ಕೂಡಲೇ ಕೊಡಿಗೇಹಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ನಂತರ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ನವಾಜ್ ಶರೀಫ್ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
