ವಿಶಾಖಪಟ್ಟಣ : ವಿಶಾಖ ಉಕ್ಕು ಕಾರ್ಖಾನೆಯಲ್ಲಿ ಭಾರೀ ಪ್ರಮಾಣದ ಲೋಹ ಹರಿದು 8 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದು, ಈ ಸುದ್ದಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಧಾವಿಸಿದ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಪರಿಶೀಲನೆ ನಡೆಸಿದರು. ಮೃತ ಕುಟುಂಬಸ್ಥರಿಗೆ 25 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.
ದುರಂತದ ಮಾಹಿತಿ ತಿಳಿಯುತ್ತಿದ್ದಂತೆ ಬೆಂಗಳೂರಿನಿಂದ ವಿಶಾಖಪಟ್ಟಣಕ್ಕೆ ಧಾವಿಸಿದ ಸಚಿವರು, ವಿಮಾನ ನಿಲ್ದಾಣದಿಂದ ನೇರವಾಗಿ ದುರ್ಘಟನೆ ಸಂಭವಿಸಿದ ಸ್ಥಳಕ್ಕೆ ತೆರಳಿದರು.
ಉಕ್ಕು ಕರಗಿಸುವ ಘಟಕದಲ್ಲಿನ ಉಷ್ಣ ನಿರೋಧಕ ದ್ರವರೂಪದ ಕೊಳಗದಿಂದ ದ್ರವರೂಪದ ಲೋಹ ಸೋರಿಕೆಯಾದ ಹಿನ್ನೆಲೆ ಸ್ಪೋಟ ಸಂಭವಿಸಿ ದುರಂತ ಸಂಭವಿಸಿರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದು, ಈ ಬಗ್ಗೆ ಸಚಿವ ಕುಮಾರಸ್ವಾಮಿ ಅವರಿಗೆ ವಿವರಣೆ ನೀಡಿದರು.
ಅಲ್ಲದೆ, ದುರಂತದಲ್ಲಿ ಸಾವನ್ನಪ್ಪಿದ ಕಾರ್ಮಿಕರ ಬಗ್ಗೆ ಹಾಗೂ ದುರಂತಕ್ಕೆ ಕಾರಣವಾದ ಅಂಶಗಳ ಬಗ್ಗೆ ತಕ್ಷಣವೇ ವರದಿ ನೀಡುವಂತೆ ಕಾರ್ಖಾನೆಯ ಆಡಳಿತ ಮಂಡಳಿಗೆ ಸಚಿವ ಕುಮಾರಸ್ವಾಮಿ ಅವರು ಸೂಚನೆ ನೀಡಿದರು.
ತಲಾ ₹25 ಲಕ್ಷ ಪರಿಹಾರ ಪ್ಯಾಕೇಜ್ ಘೋಷಿಸಿದ ಹೆಚ್ಡಿಕೆ
ದುರಂತದಲ್ಲಿ ಮೃತಪಟ್ಟ ಕುಟುಂಬ ಸದಸ್ಯರಲ್ಲಿ ಒಬ್ಬರಿಗೆ ಉದ್ಯೋಗ ಮತ್ತು ಅವರಿಗೆ ದೊರೆಯುವ ಪ್ರಯೋಜನಗಳ ಜತೆಗೆ ₹25 ಲಕ್ಷ ಪರಿಹಾರವನ್ನು ನೀಡಲಾಗುವುದು. ತೀವ್ರವಾಗಿ ಗಾಯಗೊಂಡ ಕಾರ್ಮಿಕರಿಗೆ ₹10 ಲಕ್ಷ ಪರಿಹಾರ ನೀಡಲಾಗುವುದು. ಅಲ್ಲದೆ ಗಾಯಾಳುಗಳ ವೈದ್ಯಕೀಯ ವೆಚ್ಚವನ್ನು ಸಂಪೂರ್ಣವಾಗಿ ಕಾರ್ಖಾನೆಗೆ ಭರಿಸಲಿದೆ ಎಂದು ಸಚಿವರು ಘೋಷಿಸಿದರು.
ಜತೆಗೆ, ಮೃತರ ಕುಟುಂಬ ಸದಸ್ಯರು ಮೃತರ ನಿವೃತ್ತಿಯ ದಿನಾಂಕದವರೆಗೆ ಸ್ಟೀಲ್ ಪ್ಲಾಂಟ್ ಟೌನ್‌ಶಿಪ್‌ನಲ್ಲಿ ತಮ್ಮ ವಸತಿ ಗೃಹಗಳಲ್ಲಿ ವಾಸಿಸಲು ಅನುಮತಿಸಲಾಗಿದೆ. ಇದನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಲಾಗಿದೆ. ಹಾಗೆಯೇ, ಮೃತ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸದ ವೆಚ್ಚವನ್ನು ಕಾರ್ಖಾನೆ ಭರಿಸಲಿದೆ ಎಂದು ಸಚಿವರು ಹೇಳಿದರು.
ರಾತ್ರಿ ಒಂದುವರೆವರೆಗೂ ಆಸ್ಪತ್ರೆಯಲ್ಲೇ ಇದ್ದ ಸಚಿವರು
ದುರ್ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ಬೆಂಗಳೂರಿನಿಂದ ವಿಶಾಖ ಕಾರ್ಖಾನೆಗೆ ಧಾವಿಸಿಬಂದ ಸಚಿವರು, ದುರ್ಘಟನಾ ಸ್ಥಳ ಪರಿಶೀಲಿಸಿದ ನಂತರ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿದರು. ನಂತರ ಮೃತ ಕಾರ್ಮಿಕರ ಕುಟುಂಬಗಳ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಹೇಳಿದರು.
