ನೈಸ್ ರಸ್ತೆಯಲ್ಲಿ ಭೀಕರ ಅಪಘಾತ: ಧಗಧಗನೆ ಹೊತ್ತಿ ಉರಿದ ಕೆಮಿಕಲ್ ಟ್ಯಾಂಕರ್

ರಸ್ತೆಯಲ್ಲಿ (7)

ಬೆಂಗಳೂರು: ಜೆನ್ ಕಂಪನಿಗೆ ಸೇರಿದ ಕೆಮಿಕಲ್ ಟ್ಯಾಂಕರ್ ವೊಂದು ಕಾರಿಗೆ ಟಚ್ ಆಗಿ ಪಲ್ಟಿಯಾಗಿ ಬಿದ್ದ ಪರಿಣಾಮ ಕೆಮಿಕಲ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿರುವ ಘಟನೆ ಬೆಂಗಳೂರಿನ ನೈಸ್ ರಸ್ತೆಯಲ್ಲಿ ನಡೆದಿದೆ.

ಘಟನೆ ಹೇಗೆ ನಡೆಯಿತು?

ಕನಕಪುರ ರಸ್ತೆಯ ಟೋಲ್ ಗೇಟ್ ಬಳಿ ಕೆಮಿಕಲ್ ಟ್ಯಾಂಕರ್ ಪಲ್ಟಿಯಾಗಿದ್ದು, ಧಗಧಗನೆ ಬೆಂಕಿ ಹೊತ್ತಿ ಉರಿದಿದೆ. ಜೆನ್ ಕೆಮಿಕಲ್ ಟ್ಯಾಂಕರ್ ಚೆನ್ನೈನಿಂದ ಮುಂಬೈಗೆ ತೆರಳುತ್ತಿದ್ದ ವೇಳೆ ಕನಕಪುರ ಟೋಲ್ ಗೇಟ್ ಬಳಿ ಬರುತ್ತಿದ್ದಂತೆ ಕಾರಿಗೆ ಟ್ಯಾಂಕರ್ ಟಚ್ ಆಗಿ ಈ ಅವಘಡ ಸಂಭವಿಸಿದೆ. ಟ್ಯಾಂಕರ್‌ನಲ್ಲಿ ಒಟ್ಟು ನಾಲ್ಕು ಚಿಕ್ಕ ಚಿಕ್ಕ ಕೆಮಿಕಲ್ ಟ್ಯಾಂಕ್‌ಗಳಿದ್ದು, ಅವುಗಳಲ್ಲಿ ಎರಡು ಟ್ಯಾಂಕ್‌ಗಳು ಹೊತ್ತಿ ಉರಿಯುತ್ತಿವೆ. ಉಳಿದ ಎರಡು ಟ್ಯಾಂಕ್‌ಗಳಿಗೂ ಬೆಂಕಿ ತಗುಲುವ ಸಾಧ್ಯತೆ ಇದ್ದು, ಅವುಗಳೂ ಹೊತ್ತಿ ಉರಿಯುವ ಆತಂಕ ಎದುರಾಗಿದೆ.

ಅಗ್ನಿಶಾಮಕ ದಳದ ಕಾರ್ಯಾಚರಣೆ

ಘಟನಾ ಸ್ಥಳಕ್ಕೆ ಮೂರು ಅಗ್ನಿಶಾಮಕ ವಾಹನಗಳು ದೌಡಾಯಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.. ಉಳಿದ ಎರಡು ಕೆಮಿಕಲ್ ಟ್ಯಾಂಕ್‌ಗಳು ಹೊತ್ತಿ ಉರಿಯುವವರೆಗೂ ಬೆಂಕಿ ತಹಬದಿಗೆ ಬರುವ ಸಾಧ್ಯತೆ ಕಡಿಮೆ ಇದ್ದು. ಆದರೆ ಸ್ಫೋಟಗೊಳ್ಳದಂತೆ ಬೆಂಕಿ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಗ್ನಿಶಾಮಕ ಸಿಬ್ಬಂದಿಗಳು ತಿಳಿಸಿದ್ದಾರೆ.

ಭಾರೀ ಟ್ರಾಫಿಕ್ ಜಾಮ್

ನಡುರಸ್ತೆಯಲ್ಲೇ ಟ್ಯಾಂಕರ್ ಪಲ್ಟಿಯಾಗಿ ಹೊತ್ತಿ ಉರಿಯುತ್ತಿರುವ ಹಿನ್ನೆಲೆ ನೈಸ್ ರಸ್ತೆಯಲ್ಲಿ ವಾಹನಗಳು ಸಾಲು ಸಾಲಾಗಿ ನಿಂತಿದ್ದು, ಸುಮಾರು 8-10 ಕಿ.ಮೀವರೆಗೆ ಟ್ರಾಫಿಕ್ ಜಾಮ್ ಉಂಟಾಗಿದೆ. ಘಟನಾ ಸ್ಥಳದಲ್ಲಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೀಡು ಬಿಟ್ಟಿದ್ದು, ಯಾವುದೇ ಅನಾಹುತ ಸಂಭವಿಸದಂತೆ ಕ್ರಮ ಕೈಗೊಳ್ಳುತ್ತಿದ್ದಾರೆ. ತಲಘಟ್ಟಪುರ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಂಚಾರ ನಿಯಂತ್ರಣದ ಕ್ರಮ ಕೈಗೊಂಡಿದ್ದಾರೆ.

ಸಂಚಾರ ಪರ್ಯಾಯ ವ್ಯವಸ್ಥೆ

ಟ್ರಾಫಿಕ್ ಜಾಮ್‌ನಿಂದ ಸಂಚಾರ ಸ್ಥಗಿತಗೊಂಡಿರುವುದರಿಂದ ವಾಹನ ಸವಾರರಿಗೆ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸೂಚಿಸಲಾಗಿದೆ. ಕನಕಪುರ ರಸ್ತೆ ಮತ್ತು ನೈಸ್ ರಸ್ತೆಯಲ್ಲಿ ಸಂಚರಿಸುವವರು ಸಂಚಾರ ಪೊಲೀಸರ ಸೂಚನೆಗಳನ್ನು ಪಾಲಿಸುವಂತೆ ಕೋರಲಾಗಿದೆ. 

Exit mobile version