ವಿಜಯನಗರ: ಸಂಬಂಧಗಳು ಕೇವಲ ಹೆಸರಿಗಷ್ಟೇ ಸೀಮಿತವಾಗುತ್ತಿವೆಯೇ ಎಂಬ ಅನುಮಾನ ಮೂಡಿಸುವಂತಹ ಘನಘೋರ ಘಟನೆಯೊಂದು ವಿಜಯನಗರ ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ನಡೆದಿದೆ. ಮಗನೇ ತನ್ನ ಹೆತ್ತ ತಂದೆ-ತಾಯಿ ಹಾಗೂ ಒಡಹುಟ್ಟಿದ ಸಹೋದರಿಯನ್ನೇ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಈ ಘಟನೆ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ.
ಆರೋಪಿ ಅಕ್ಷಯ ಕುಮಾರ್ ತನ್ನ ಕುಟುಂಬವನ್ನೇ ಕೊಂದ ಬಳಿಕ, ಪೊಲೀಸರಿಂದ ತಪ್ಪಿಸಿಕೊಳ್ಳಲು ಬಲು ದೊಡ್ಡ ನಾಟಕವಾಡಿದ್ದ. ಕೃತ್ಯ ಎಸಗಿದ ಬಳಿಕ ಬೆಂಗಳೂರಿಗೆ ಪರಾರಿಯಾಗಿದ್ದ ಈತ, ಅಲ್ಲಿನ ತಿಲಕ್‌ನಗರ ಪೊಲೀಸ್ ಠಾಣೆಗೆ ತೆರಳಿ, ನನ್ನ ತಂದೆ, ತಾಯಿ ಮತ್ತು ತಂಗಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ್ದ. ಮೇಲ್ನೋಟಕ್ಕೆ ಮುಗ್ಧನಂತೆ ನಟಿಸಿದ್ದರೂ, ಆತನ ಮಾತಿನಲ್ಲಿದ್ದ ಗೊಂದಲ ಪೊಲೀಸರಿಗೆ ಅನುಮಾನ ಮೂಡಿಸಿತು.
ತಿಲಕ್‌ನಗರ ಪೊಲೀಸರು ಅಕ್ಷಯನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ಆತ ಒಂದೊಂದೇ ಕರಾಳ ಸತ್ಯಗಳನ್ನು ಹೊರಹಾಕಿದ್ದಾನೆ. ನಾನೇ ಅವರನ್ನು ಕೊಂದಿದ್ದೇನೆ ಎಂದು ಒಪ್ಪಿಕೊಂಡನಾದರೂ, ಶವಗಳನ್ನು ಎಲ್ಲಿ ವಿಲೇವಾರಿ ಮಾಡಿದ್ದಾನೆ ಎಂಬ ಬಗ್ಗೆ ಅಸ್ಪಷ್ಟ ಹೇಳಿಕೆ ನೀಡಿದ್ದಾನೆ. ಒಮ್ಮೆ ಕೊಟ್ಟೂರಿನ ಮನೆಯಲ್ಲೇ ಹೂತು ಹಾಕಿದ್ದೇನೆ ಎಂದು ಹೇಳಿದರೆ, ಮತ್ತೊಮ್ಮೆ ಸಂಡೂರು ಬಳಿ ಶವಗಳನ್ನು ಎಸೆದಿದ್ದೇನೆ ಎಂದು ಪೊಲೀಸರ ಹಾದಿ ತಪ್ಪಿಸಲು ಯತ್ನಿಸುತ್ತಿದ್ದಾನೆ.
ಸದ್ಯ ತಿಲಕ್‌ನಗರ ಪೊಲೀಸರು ನೀಡಿದ ಮಾಹಿತಿಯ ಆಧಾರದ ಮೇಲೆ ಕೊಟ್ಟೂರು ಪೊಲೀಸರು ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಅಕ್ಷಯ ಹೇಳಿದ ಸ್ಥಳಗಳಲ್ಲಿ ಶವಗಳಿಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ. ಮೃತರ ಅಧಿಕೃತ ಹೆಸರುಗಳು ಮತ್ತು ಈ ಭೀಕರ ಹತ್ಯೆಗೆ ನಿಖರವಾದ ಕಾರಣವೇನು ಎಂಬುದು ಇನ್ನು ನಿಗೂಢವಾಗಿದೆ. ಆಸ್ತಿ ವಿವಾದವೋ ಅಥವಾ ವೈಯಕ್ತಿಕ ದ್ವೇಷವೋ ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಬೈಕ್ ಸ್ಕಿಡ್ ಆಗಿ ಗಾಯಗೊಂಡಿದ್ದ ಪ್ರಾಧ್ಯಾಪಕ ಶರಣಪ್ಪ ಸೈದಾಪುರ ಇನ್ನಿಲ್ಲ
ಕಲಬುರಗಿ: ಶಿಕ್ಷಣ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಕಲ್ಯಾಣ ಕರ್ನಾಟಕ ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷ ಶರಣಪ್ಪ ಸೈದಾಪುರ ಅವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಕೆಲ ದಿನಗಳ ಹಿಂದೆ ಕಲಬುರಗಿ ನಗರದ ಹೊಸ ಆರ್.ಟಿ.ಒ ಕಚೇರಿ ಬಳಿ ಬೈಕ್ ಸವಾರಿ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಬೈಕ್ ಸ್ಕಿಡ್ ಆಗಿ ಬಿದ್ದಿದ್ದರು. ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‌ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ದುರದೃಷ್ಟವಶಾತ್ ಇಂದು ಅವರು ಕೊನೆಯುಸಿರೆಳೆದಿದ್ದಾರೆ.
ಶರಣಪ್ಪ ಅವರು ಜೇವರ್ಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಕೇವಲ ಬೋಧನೆಗೆ ಸೀಮಿತವಾಗದೆ, ಅಧ್ಯಾಪಕರ ಹಿತರಕ್ಷಣೆಗಾಗಿ ಅನೇಕ ಹೋರಾಟಗಳನ್ನು ಮುನ್ನಡೆಸಿದ್ದರು. ಇವರ ನಿಧನಕ್ಕೆ ಶೈಕ್ಷಣಿಕ ವಲಯದಲ್ಲಿ ತೀವ್ರ ಸಂತಾಪ ವ್ಯಕ್ತವಾಗಿದೆ.
