ಮಳೆ ಎಫೆಕ್ಟ್: ದಕ್ಷಿಣ ಕನ್ನಡದಲ್ಲಿ ನಾಳೆ ಶಾಲೆ-ಕಾಲೇಜುಗಳಿಗೆ ರಜೆ

Untitled design (22)

ಮಂಗಳೂರು, ಜುಲೈ 17: ಕಳೆದ ಎರಡು ವಾರಗಳಿಂದ ರಾಜ್ಯದ ಹಲವೆಡೆ ಮಳೆ ಕೈಕೊಟ್ಟಿದ್ದರಿಂದ ಬರಗಾಲದ ಆತಂಕ ಎದುರಾಗಿತ್ತು. ಆದರೆ ಇದೀಗ ವರುಣ ಮತ್ತೆ ಚುರುಕುಗೊಂಡಿದ್ದು, ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ತಿಂಗಳ ಮೊದಲ ವಾರದಲ್ಲಿ ರಾಜ್ಯಾದ್ಯಂತ ಉತ್ತಮ ಮಳೆಯಾಗಿದ್ದರೂ, ಬಳಿಕ ಸುಮಾರು ದಿನಗಳ ಕಾಲ ಮಳೆಯ ಪ್ರಮಾಣ ಗಣನೀಯವಾಗಿ ಕುಸಿದಿತ್ತು. ಹಲವು ಜಿಲ್ಲೆಗಳಲ್ಲಿ ತೀವ್ರ ಬಿಸಿಲಿನ ವಾತಾವರಣ ನಿರ್ಮಾಣವಾಗಿದ್ದರಿಂದ ರೈತರು ಹಾಗೂ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿತ್ತು. ಇದೀಗ ಮಳೆ ಮತ್ತೆ ಆರಂಭವಾಗಿದ್ದು, ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಮಳೆ ವಿರಾಮ ಪಡೆದಿದ್ದರೂ, ಇದೀಗ ಮತ್ತೆ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರು ಹೊರಡಿಸಿರುವ ಆದೇಶದಂತೆ, ಅಂಗನವಾಡಿಯಿಂದ ದ್ವಿತೀಯ ಪಿಯುಸಿ ವರೆಗಿನ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ.

ಹವಾಮಾನ ಇಲಾಖೆ ರಾಜ್ಯದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಈ ಜಿಲ್ಲೆಗಳಲ್ಲಿ ಭಾರೀ ಮಳೆಯೊಂದಿಗೆ ಬಿರುಗಾಳಿ ಹಾಗೂ ಗುಡುಗು-ಮಿಂಚಿನ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.

ಉಳಿದಂತೆ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಜಿಲ್ಲಾಡಳಿತ ಸಾರ್ವಜನಿಕರಿಗೆ ಅನಗತ್ಯವಾಗಿ ನದಿ, ತಗ್ಗು ಪ್ರದೇಶ, ಗುಡ್ಡ ಪ್ರದೇಶಗಳಿಗೆ ತೆರಳದಂತೆ ಹಾಗೂ ಹವಾಮಾನ ಇಲಾಖೆಯ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮನವಿ ಮಾಡಿದೆ. ಮೀನುಗಾರರು ಸಮುದ್ರಕ್ಕೆ ಇಳಿಯುವ ಮೊದಲು ಹವಾಮಾನ ಮಾಹಿತಿ ಪರಿಶೀಲಿಸಬೇಕು ಎಂದು ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಮಳೆ ಮತ್ತೆ ಚುರುಕುಗೊಂಡಿರುವುದು ರೈತರಿಗೆ ನೆಮ್ಮದಿ ತಂದಿದ್ದರೂ, ಭಾರೀ ಮಳೆಯ ಸಾಧ್ಯತೆಯಿಂದ ಕರಾವಳಿ ಹಾಗೂ ಮಲೆನಾಡು ಭಾಗದ ಜನರು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

Exit mobile version