ಇರಾನ್-ಇಸ್ರೇಲ್ ಯುದ್ಧದ ಬಿಸಿ: ಬೆಲೆ ಕುಸಿದ ಕಾರಣ ಕುರಿ-ಮೇಕೆ ಪಾಲಾದ ಟೊಮ್ಯಾಟೋ

Untitled design (51)

ಹೊಸಪೇಟೆ: ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಂಟಾಗಿರುವ ಯುದ್ದವು ಸ್ಥಳೀಯ ಟೊಮೇಟೊ ಬೆಳೆಗಾರರನ್ನು ಅಕ್ಷರಶಃ ಬೀದಿಗೆ ತಂದಿದೆ. ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದ ಕಾರಣ, ರೈತರು ತಾವು ಬೆಳೆದ ಟೊಮೇಟೊಗಳನ್ನು ರಸ್ತೆಗೆ ಸುರಿದು, ಕುರಿ-ಮೇಕೆಗಳಿಗೆ ಆಹಾರವಾಗಿ ನೀಡುತ್ತಿದ್ದಾರೆ.

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನ ಅಸ್ಥಿರತೆಯು ಅಂತರಾಷ್ಟ್ರೀಯ ರಫ್ತು ವಹಿವಾಟಿನ ಮೇಲೆ ಭಾರಿ ಹೊಡೆತ ಬಿದ್ದಿದೆ. ಇರಾನ್ ಸೇರಿದಂತೆ ಸುತ್ತಮುತ್ತಲಿನ ದೇಶಗಳಲ್ಲಿ ಯುದ್ಧದ ಭೀತಿಯಿಂದಾಗಿ ಹೋಟೆಲ್ ಉದ್ಯಮ ಕುಸಿದಿದೆ ಮತ್ತು ಗ್ಯಾಸ್ ಕೊರತೆ ಎದುರಾಗಿದೆ. ಇದರಿಂದಾಗಿ ಭಾರತದಿಂದ ರಫ್ತಾಗುತ್ತಿದ್ದ ಟೊಮೇಟೊಗೆ ಇದ್ದ ಬೇಡಿಕೆ ಸಂಪೂರ್ಣವಾಗಿ ನಿಂತುಹೋಗಿದೆ. ರಫ್ತು ಆಗಬೇಕಿದ್ದ ಟೊಮೇಟೊ ಲೋಡ್‌ಗಳು ಈಗ ಸ್ಥಳೀಯ ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಮಾರುಕಟ್ಟೆಯಲ್ಲಿ ಅತಿಯಾದ ಪೂರೈಕೆ ಇರುವುದರಿಂದ ಬೆಲೆ ಕೇಳುವವರೇ ಇಲ್ಲದಂತಾಗಿದೆ.

ಹೊಸಪೇಟೆ ಭಾಗದ ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಕನಿಷ್ಠ ಬೆಲೆಯೂ ಸಿಗುತ್ತಿಲ್ಲ. ಹೊಲದಿಂದ ಟೊಮೇಟೊ ಕಟಾವು ಮಾಡಿ ಮಾರುಕಟ್ಟೆಗೆ ತರಲು ತಗಲುವ ಟ್ರ್ಯಾಕ್ಟರ್ ಬಾಡಿಗೆ ಅಥವಾ ಸಾಗಾಣಿಕೆ ವೆಚ್ಚವೂ ರೈತನ ಕೈಗೆ ಸಿಗುತ್ತಿಲ್ಲ. ನೂರಾರು ರೂಪಾಯಿ ಖರ್ಚು ಮಾಡಿ ಬೆಳೆದ ಬೆಳೆಗೆ ಈಗ ಹತ್ತು ರೂಪಾಯಿಯೂ ಸಿಗುತ್ತಿಲ್ಲ ಎಂದು ರೈತರು ಕಣ್ಣೀರು ಹಾಕುತ್ತಿದ್ದಾರೆ. ಸಾಗಾಣಿಕೆ ವೆಚ್ಚ ಭರಿಸಲಾಗದೆ ರೈತರು ನೂರಾರು ಕೆಜಿ ಟೊಮ್ಯಾಟೋಗಳನ್ನು ರಸ್ತೆ ಬದಿಯಲ್ಲೇ ಸುರಿಯುತ್ತಿದ್ದಾರೆ.

ಮಾರುಕಟ್ಟೆಯಲ್ಲಿ ಬೆಲೆ ಇಲ್ಲದ ಕಾರಣ, ಕೆಂಪಗೆ ಮಾಗಿದ ಟೊಮೇಟೊಗಳನ್ನು ವ್ಯರ್ಥ ಮಾಡುವ ಬದಲು ರೈತರು ತಮ್ಮ ಕುರಿ, ಮೇಕೆ ಮತ್ತು ದನ-ಕರುಗಳಿಗೆ ಆಹಾರವಾಗಿ ನೀಡುತ್ತಿದ್ದಾರೆ.

 

 

Exit mobile version