ಬೆಂಗಳೂರು: ನಗರದ ವೈಟ್‌ಫೀಲ್ಡ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ವರ್ತೂರಿನಲ್ಲಿ ಇಂದಿನಿಂದ (ಜನವರಿ 25) ಅದ್ದೂರಿ ಶ್ರೀ ಚನ್ನರಾಯಸ್ವಾಮಿ ಜಾತ್ರಾ ರಥೋತ್ಸವ, ದೀಪೋತ್ಸವ ಹಾಗೂ ಪಲ್ಲಕ್ಕಿ ಕರಗ ಮಹೋತ್ಸವ ಆರಂಭವಾಗಲಿದೆ. ಈ ಧಾರ್ಮಿಕ ಕಾರ್ಯಕ್ರಮಗಳಿಗೆ ಸಾವಿರಾರು ಭಕ್ತರು ಆಗಮಿಸುವ ನಿರೀಕ್ಷೆ ಇರುವುದರಿಂದ, ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಸಂಚಾರ ಪೊಲೀಸರು ಪರ್ಯಾಯ ಮಾರ್ಗಗಳನ್ನು ಘೋಷಿಸಿದ್ದಾರೆ.
ಇಂದಿನಿಂದ ಅಂದರೆ, ಜನವರಿ 25 ಭಾನುವಾರದಿಂದ ಜನವರಿ 27ರ ಮಂಗಳವಾರದವರೆಗೆ ಒಟ್ಟು ಮೂರು ದಿನಗಳ ಕಾಲ ವರ್ತೂರು ಗ್ರಾಮದ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ. ಜಾತ್ರಾ ಸ್ಥಳದಲ್ಲಿ ಜನದಟ್ಟಣೆ ನಿಯಂತ್ರಿಸಲು ಮತ್ತು ಭದ್ರತೆಯ ದೃಷ್ಟಿಯಿಂದ ಸಂಚಾರ ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತ ಸಾಹಿಲ್ ಬಾಗ್ಲಾ ಅವರು ಈ ಮಹತ್ವದ ಬದಲಾವಣೆಗಳನ್ನು ಜಾರಿಗೆ ತಂದಿದ್ದಾರೆ.
#ಸಂಚಾರಸಲಹೆ#TrafficAdvisory @DgpKarnataka @KarnatakaCops @CPBlr @Jointcptraffic @BlrCityPolice @blrcitytraffic @acpwfieldtrf @acpeasttraffic @mahadevapuratrf @halairporttrfps @KRPURATRAFFIC @wftrps @bwaditrafficps @ftowntrfps @jbnagartrfps @halasoortrfps @kghallitrfps… pic.twitter.com/kEtSux1KwO
— DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ (@DCPTrEastBCP) January 24, 2026
ವಾಹನ ಸವಾರರಿಗಾಗಿ ಪರ್ಯಾಯ ಮಾರ್ಗಗಳು:
1. ವೈಟ್‌ಫೀಲ್ಡ್‌ನಿಂದ ಗುಂಜೂರು ಕಡೆಗೆ ಹೋಗುವವರು: ವೈಟ್‌ಫೀಲ್ಡ್ ಕಡೆಯಿಂದ ಗುಂಜೂರಿಗೆ ಪ್ರಯಾಣಿಸುವ ಲಘು ವಾಹನಗಳು ಇಮ್ಮಡಿಹಳ್ಳಿ ಮಾರ್ಗವಾಗಿ ಚಲಿಸಬೇಕು. ನಂತರ ವಾಲೇಪುರ-ಸೂರಹುಣಸೆ ರಸ್ತೆಯ ಮೂಲಕ ಮಧುರನಗರವನ್ನು ತಲುಪಿ, ಅಲ್ಲಿಂದ ಹಲಸಹಳ್ಳಿ ಮೂಲಕ ಗುಂಜೂರು ತಲುಪಬಹುದು. ಅಥವಾ ವರ್ತೂರು ಪೊಲೀಸ್ ಠಾಣೆ ಕಡೆಯಿಂದಲೂ ಸಂಚರಿಸಲು ಅವಕಾಶವಿದೆ.
2. ಗುಂಜೂರಿನಿಂದ ವೈಟ್‌ಫೀಲ್ಡ್ ಕಡೆಗೆ ಬರುವವರು: ಗುಂಜೂರು ಕಡೆಯಿಂದ ವೈಟ್‌ಫೀಲ್ಡ್‌ಗೆ ಬರುವ ಸವಾರರು ಗುಂಜೂರಿನ ಶ್ರೀರಾಮದೇವಾಲಯದ ಬಳಿ ಬಲ ತಿರುವು ಪಡೆಯಬೇಕು. ನಂತರ ಹಲಸಹಳ್ಳಿ ರಸ್ತೆಯ ಮೂಲಕ ಮಧುರನಗರ ತಲುಪಿ, ಸೂರಹುಣಸೆ ಮತ್ತು ವಾಲೇಪುರ ರಸ್ತೆ ಬಳಸಿ ವರ್ತೂರು ಕಾಲೇಜು ಮೂಲಕ ವೈಟ್‌ಫೀಲ್ಡ್ ತಲುಪಬಹುದು.
3. ಕುಂದಲಹಳ್ಳಿ ಮತ್ತು ಮಾರತಹಳ್ಳಿ ಕಡೆಗೆ ಹೋಗುವವರು: ಗುಂಜೂರು ಕಡೆಯಿಂದ ಕುಂದಲಹಳ್ಳಿ ಅಥವಾ ಮಾರತಹಳ್ಳಿಗೆ ತೆರಳುವ ವಾಹನ ಸವಾರರು ಗುಂಜೂರು ಕೆ.ಎಫ್.ಸಿ ರಸ್ತೆಯನ್ನು ಬಳಸಬೇಕು. ಅಲ್ಲಿಂದ ಪಣತ್ತೂರು ರೈಲ್ವೆ ಬ್ರಿಡ್ಜ್ ಮೂಲಕ ಅಥವಾ ವಿಬ್‌ಗಯಾರ್ ಶಾಲೆಯ ಮಾರ್ಗವಾಗಿ ಸಂಚರಿಸುವಂತೆ ಟ್ರಾಫಿಕ್ ಪೊಲೀಸರು ಸೂಚಿಸಿದ್ದಾರೆ.
ಬರುವ ಮೂರು ದಿನಗಳು ಜಾತ್ರೆಯ ಸಂಭ್ರಮವಿರುವುದರಿಂದ ವರ್ತೂರು ಮುಖ್ಯ ರಸ್ತೆಯಲ್ಲಿ ವಿಪರೀತ ಜನದಟ್ಟಣೆ ಇರುತ್ತದೆ. ಹೀಗಾಗಿ ಸಾಧ್ಯವಾದಷ್ಟು ಪರ್ಯಾಯ ರಸ್ತೆಗಳನ್ನೇ ಬಳಸುವಂತೆ ಮತ್ತು ಸಂಚಾರ ಪೊಲೀಸರೊಂದಿಗೆ ಸಹಕರಿಸುವಂತೆ ಬೆಂಗಳೂರು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
