ಬಾಯ್‌ಫ್ರೆಂಡ್ ಫೋನ್ ಹ್ಯಾಕ್ ? ಖಾಸಗಿ ಚಿತ್ರಗಳನ್ನ ತೋರಿಸಿ ಬ್ಲ್ಯಾಕ್‌ಮೇಲ್ ಮಾಡಿದ ಕಿರಾತಕ

Untitled design 2026 01 25T123537.100

ಬೆಂಗಳೂರು: ಡಿಜಿಟಲ್ ಜಗತ್ತಿನಲ್ಲಿ ನಾವು ಹಂಚಿಕೊಳ್ಳುವ ಸಣ್ಣ ಮಾಹಿತಿ ಕೂಡ ಎಷ್ಟು ಅಪಾಯಕಾರಿ ಎಂಬುದಕ್ಕೆ ಬೆಂಗಳೂರಿನ ಈ ಘಟನೆ ಸಾಕ್ಷಿಯಾಗಿದೆ. ತನ್ನ ಪ್ರಿಯಕರನಿಗೆ ಕಳಿಸಿದ ಖಾಸಗಿ ಫೋಟೋಗಳೇ ಇಂದು ಯುವತಿಯೊಬ್ಬಳ ನೆಮ್ಮದಿ ಕೆಡಿಸಿವೆ. ಅಪರಿಚಿತ ವ್ಯಕ್ತಿಯೊಬ್ಬ ಈ ಫೋಟೋಗಳನ್ನಿಟ್ಟುಕೊಂಡು ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿರುವ ಪ್ರಕರಣ ಈಗ ಸೈಬರ್ ಕ್ರೈಂ ಪೊಲೀಸರ ಮೆಟ್ಟಿಲೇರಿದೆ.

ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ 19 ವರ್ಷದ ವಿದ್ಯಾರ್ಥಿನಿ, ಕೆಲ ಸಮಯದ ಹಿಂದೆ ತನ್ನ ಬಾಯ್‌ಫ್ರೆಂಡ್‌ಗೆ ಕೆಲವು ಖಾಸಗಿ ಫೋಟೋಗಳನ್ನು ಕಳಿಸಿದ್ದಳು. ಈ ಸಂಬಂಧ ಕಳೆದ ಕೆಲವು ದಿನಗಳಿಂದ ಅಪರಿಚಿತ ನಂಬರ್‌ನಿಂದ ಯುವತಿಗೆ ವಾಟ್ಸಾಪ್ ಕರೆಗಳು ಬರಲಾರಂಭಿಸಿವೆ. ಕರೆ ಮಾಡಿದ ವ್ಯಕ್ತಿ, ಯುವತಿ ತನ್ನ ಪ್ರಿಯಕರನಿಗೆ ಕಳಿಸಿದ್ದ ಅದೇ ಫೋಟೋಗಳನ್ನು ಅವಳಿಗೇ ವಾಪಸ್ ಕಳುಹಿಸಿ, ಹಣ ನೀಡದಿದ್ದರೆ ಈ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.

ಬಲಿಕ ಯುವತಿ ಹೆದರಿ, ಈ ವಿಚಾರವನ್ನು ತನ್ನ ಸ್ನೇಹಿತನ ಗಮನಕ್ಕೆ ತಂದಿದ್ದಾಳೆ. ಆರಂಭದಲ್ಲಿ ಬ್ಲ್ಯಾಕ್‌ಮೇಲರ್ ಬೇಡಿಕೆಯಂತೆ ಸ್ನೇಹಿತನ ಮೂಲಕ ಸುಮಾರು 1 ಲಕ್ಷ ರೂಪಾಯಿ ಹಣವನ್ನು ಆತನ ಬ್ಯಾಂಕ್ ಖಾತೆಗೆ ವರ್ಗಾಯಿಸಿದ್ದಾಳೆ. ಆದರೆ, ಆ ದುಷ್ಕರ್ಮಿಮತ್ತೆ ಮತ್ತೆ ಕರೆ ಮಾಡಿ ಲಕ್ಷಾಂತರ ರೂಪಾಯಿ ಹಣ ನೀಡುವಂತೆ ಪೀಡಿಸಲು ಪ್ರಾರಂಭಿಸಿದ್ದಾನೆ. ಇದರಿಂದ ಬೇಸತ್ತ ಯುವತಿ ಕಡೆದಾಗಿ ಕೇಂದ್ರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ದೂರು ದಾಖಲಿಸಿಕೊಂಡ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿದ್ದಾರೆ. ಆರಂಭದಲ್ಲಿ ಯುವತಿ ತನ್ನ ಪ್ರಿಯಕರನೇ ಈ ಫೋಟೋಗಳನ್ನು ಸೋರಿಕೆ ಮಾಡಿರಬಹುದೆಂದು ಶಂಕಿಸಿದ್ದಳು. ಆದರೆ ಪೊಲೀಸರ ತನಿಖೆಯಲ್ಲಿ ಆಕೆಯ ಬಾಯ್‌ಫ್ರೆಂಡ್ ಕೈವಾಡ ಇಲ್ಲದಿರುವುದು ತಿಳಿದುಬಂದಿದೆ. ಹಾಗಾದರೆ ಫೋಟೋಗಳು ಬ್ಲ್ಯಾಕ್‌ಮೇಲರ್ ಕೈಗೆ ಸಿಕ್ಕಿದ್ದು ಹೇಗೆ ? ಮೊಬೈಲ್ ಹ್ಯಾಕ್ ಆಗಿದೆಯೇ ಅಥವಾ ಪ್ರಿಯಕರನ ಮೊಬೈಲ್‌ನಿಂದ ಬೇರೆಯವರು ಕದ್ದಿದ್ದಾರೆಯೇ ಎಂಬ ಆಯಾಮದಲ್ಲಿ ಪೊಲೀಸರು ತಾಂತ್ರಿಕ ತನಿಖೆ ನಡೆಸುತ್ತಿದ್ದಾರೆ.

ಪೊಲೀಸರ ಎಚ್ಚರಿಕೆ: ಇಂತಹ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಸಾರ್ವಜನಿಕರು ಅದರಲ್ಲೂ ವಿಶೇಷವಾಗಿ ಯುವಜನತೆ ಎಚ್ಚರದಿಂದಿರಬೇಕು. ಖಾಸಗಿ ಫೋಟೋ ಅಥವಾ ವಿಡಿಯೋಗಳನ್ನು ಯಾವುದೇ ಸಾಮಾಜಿಕ ವೇದಿಕೆಗಳಲ್ಲಿ ಅಥವಾ ವ್ಯಕ್ತಿಗಳಿಗೆ ಕಳುಹಿಸುವ ಮುನ್ನ ಎಚ್ಚರ ವಹಿಸಿ ಎಂದು ಸೈಬರ್ ತಜ್ಞರು ಸಲಹೆ ನೀಡಿದ್ದಾರೆ.

Exit mobile version